Advertisement

15 ದಿನಕ್ಕೊಮ್ಮೆ ಸಭೆ ಕಡ್ಡಾಯ: ಪಾಟೀಲ ಸೂಚನೆ

10:39 AM Jan 10, 2019 | Team Udayavani |

ಹುಬ್ಬಳ್ಳಿ: ಅಪೌಷ್ಟಿಕ ಮಕ್ಕಳ, ಗರ್ಭಿಣಿಯರ ಆರೋಗ್ಯದ ಕುರಿತು ಪ್ರತಿ 15 ದಿನಕ್ಕೊಮ್ಮೆ ಕಡ್ಡಾಯವಾಗಿ ಸಭೆ ಮಾಡಬೇಕು ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ ಹೇಳಿದರು. ಬುಧವಾರ ಧಾರವಾಡ ಹಾಗೂ ಹಾವೇರಿಗಳ ಜಿಲ್ಲೆಗಳ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಹೆರಿಗೆ ಸಂದರ್ಭದಲ್ಲಿ ತಾಯಿ ಹಾಗೂ ಮಗುವಿನ ಸಾವಿನ ಪ್ರಮಾಣ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಆರ್‌ಸಿಎಚ್ಒ, ಮಹಿಳಾ ಮತ್ತು ಮಕ್ಕಳ ಆರೋಗ್ಯಾಧಿಕಾರಿ, ಮಹಿಳಾ ಮತ್ತು ಮಕ್ಕಳ ಇಲಾಖೆ ಉಪನಿರ್ದೇಶಕ, ಸಿಡಿಪಿಒ, ತಾಲೂಕು ಆರೋಗ್ಯಾಧಿಕಾರಿ ಒಳಗೊಂಡಂತೆ ಸಭೆ ನಡೆಸುವುದು ಕಡ್ಡಾಯವಾಗಬೇಕು. ಈ ಕುರಿತು ಸರಕಾರದಿಂದ ಸುತ್ತೋಲೆ ಹೊರಡಿಸುವುದಾಗಿ ಹೇಳಿದರು.

Advertisement

ಅನುದಾನ ಬಳಸದಿರುವುದಕ್ಕೆ ಅಸಮಾಧಾನ: ಹಾವೇರಿ ಮತ್ತು ಧಾರವಾಡ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳಿಗೆ ಎನ್‌ಎಚ್.ಎಂ ಸೇರಿದಂತೆ ವಿವಿಧ ಅನುದಾನ ಸದ್ಬಳಕೆ ಮಾಡದಿರುವ ಬಗ್ಗೆ ಸಚಿವ ಪಾಟೀಲ ಅಸಮಾಧಾನ ವ್ಯಕ್ತಪಡಿಸಿದರು. ಕೆಲ ತಾಲೂಕುಗಳಲ್ಲಿ ಅನುದಾನ ಕೊರತೆಯಿದೆ. ಇಲ್ಲಿ ಅನುದಾನ ನೀಡಿದರೂ ಸದ್ಭಳಕೆ ಮಾಡಿಕೊಂಡಿಲ್ಲ. ಅಂತಹವರ ಪಟ್ಟಿ ತಯಾರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ಗೌಪ್ಯತಾ ವರದಿ ನೀಡುವಂತೆ ಸೂಚಿಸಿದರು.

ಪರ್ಯಾಯ ವ್ಯವಸ್ಥೆ: ಅನುದಾನ ಬಳಕೆಗೆ ಸರಿಯಾದ ಕ್ರಿಯಾಯೋಜನೆ ತಯಾರಿಸದಿರುವುದು ಪ್ರಮುಖ ಕಾರಣವಾಗಿದೆ. ಯಾವ ಭಾಗದಲ್ಲಿ ಹಣದ ಕೊರತೆ ಇದೆಯೋ ಅಂತಹ ಆಸ್ಪತ್ರೆ, ತಾಲೂಕು, ಜಿಲ್ಲಾಸ್ಪತ್ರೆಗಳಿಗೆ ಹಣ ವರ್ಗಾಯಿಸಬೇಕು. ಕೆಲ ಅನುದಾನ ಬಳಕೆಗೆ ಯಾವುದೇ ಮಾರ್ಗಸೂಚಿಗಳಿಲ್ಲ. ಕೆಲ ಕಡೆ ಅಗತ್ಯ ಔಷಧಿಗಳ ಕೊರತೆಯಿದೆ ಅಂತಹ ಸ್ಥಳಗಳಿಗೆ ಅನುದಾನ ವರ್ಗಾಯಿಸಬೇಕು. ಎಲ್ಲಾ ಕಾರ್ಯಗಳಿಗೂ ಡಿಎಚ್ಒ ಅವರನ್ನೇ ಹೊಣೆ ಮಾಡುವ ಕೆಲಸವನ್ನು ಆರ್‌ಸಿಎಚ್ ಅಧಿಕಾರಿಗಳು ಬಿಡಬೇಕು ಎಂದರು.

ಖಾಸಗಿ ವೈದ್ಯರ ನೆರವು: ಆರೋಗ್ಯ ಇಲಾಖೆ ಆಯುಕ್ತ ಪಂಕಜಕುಮಾರ ಪಾಂಡೆ ಮಾತನಾಡಿ, ಅಗತ್ಯ ಸಂದರ್ಭದಲ್ಲಿ ಖಾಸಗಿ ವೈದ್ಯರ ನೆರವು ಪಡೆಯಲಿಕ್ಕೆ ಅವಕಾಶವಿದೆ. ಇವರಿಗೆ ಗೌರವಧನ ಪಾವತಿಸಬಹುದು. ಈ ಕುರಿತು ಆಯಾ ನಗರಕ್ಕೆ ಸಂಬಂಧಿಸಿದಂತೆ ಅಲ್ಲಿನ ಜಿಲ್ಲಾಧಿಕಾರಿ, ಜಿಲ್ಲಾ ಶಸ್ತ್ರಚಿಕಿತ್ಸಕ ಹಾಗೂ ಡಿಎಚ್ಒ ದರ ನಿಗದಿ ಮಾಡಬೇಕು. ಇನ್ನೂ ವೈದ್ಯರು ದೀರ್ಘ‌ ರಜೆ ತೆರಳಿದ ಸಂದರ್ಭದಲ್ಲಿ ಹತ್ತಿರದ ವೈದ್ಯರನ್ನು ತಾತ್ಕಾಲಿಕವಾಗಿ ನಿಯೋಜಿಸಬೇಕು ಎಂದು ಸೂಚಿಸಿದರು.

900 ಕೋಟಿ ರೂ. ಖರ್ಚಾಗದ ಹಣ: ಎನ್‌ಎಚ್ಎಂ ಅಧಿಕಾರಿ ಮಂಜುನಾಥ ಮಾತನಾಡಿ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಗತಿ ಪರಿಶೀಲನೆ ಮಾಡಿದಾಗ ಬಹುತೇಕ ಜಿಲ್ಲೆಗಳಲ್ಲಿ ಶೇ.50ಕ್ಕೂ ಕಡಿಮೆ ಅನುದಾನ ಕಡಿಮೆ ವ್ಯಯ ಮಾಡಲಾಗಿದೆ. ಈ ಪ್ರಮಾಣದ ಪ್ರಕಾರ ಸುಮಾರು 600-900 ಕೋಟಿ ರೂ. ಖರ್ಚಾಗದ ಹಣ ಉಳಿದಿದೆ ಎಂದು ಮಾಹಿತಿ ನೀಡಿದರು.

Advertisement

ಪ್ರಧಾನ ಕಾರ್ಯದರ್ಶಿ ಜಾವೇದ್‌ ಅಕ್ತರ್‌, ಎನ್‌ಎಚ್ಎಂ ಅಧಿಕಾರಿ ಡಿ.ಎಸ್‌.ರಮೇಶ, ಟಿ.ಎಸ್‌.ಪ್ರಭಾಕರ, ಡಾ| ಗೀತಾ ಬಾಲಿ, ಡಾ| ಆರ್‌.ಎಂ.ದೊಡ್ಡಮನಿ, ಡಾ| ಗಿರಿಧರ ಕುಕನೂರ, ಡಾ| ಎಚ್.ಎಸ್‌.ರಾಘವೇಂದ್ರ, ಡಾ| ನಾಗರಾಜ ನಾಯಕ, ಡಾ| ಎಚ್.ಆರ್‌.ಪುಷ್ಪಾ ಇನ್ನಿತರರಿದ್ದರು.

ಎಎನ್‌ಎಂ, ಆಶಾ ಕಾರ್ಯಕರ್ತರ ವಿರುದ್ಧ ಕ್ರಮ
ಗರ್ಭಿಣಿಯರ ಹಾಗೂ ಅವರ ಆರೋಗ್ಯದ ಸಂಪೂರ್ಣ ಮಾಹಿತಿ ಎಎನ್‌ಎಂ ಹಾಗೂ ಆಶಾ ಕಾರ್ಯಕರ್ತರಿಗೆ ಇರುತ್ತದೆ. ಹೀಗಿರುವಾಗಲೂ ತಾಯಿ ಮತ್ತು ಮಗುವಿನ ಸಾವಿನ ಪ್ರಮಾಣ ಹೆಚ್ಚಾಗುತ್ತಿದೆ. ಪ್ರತಿ ಹಂತದ ಆರೋಗ್ಯದ ಮಾಹಿತಿ ಇದ್ದಾಗಲೂ ಸಕಾಲದಲ್ಲಿ ಚಿಕಿತ್ಸೆ ಕೊಡಿಸದ ಕಾರಣ ಹೆರಿಗೆ ಸಂದರ್ಭದಲ್ಲಿ ಸಾವಿನ ಪ್ರಮಾಣ ಹೆಚ್ಚಾಗಿದೆ. ಈ ಸಾವಿಗೆ ಬಹುತೇಕ ರಕ್ತಹೀನತೆ ಹಾಗೂ ರಕ್ತದೊತ್ತಡ ಹೆಚ್ಚು ಕಾರಣವಾಗಿದೆ. ಇದಕ್ಕೆ ಇಲಾಖೆಯಲ್ಲಿ ಸೂಕ್ತ ಚಿಕಿತ್ಸೆಯಿದೆ. ಎಲ್ಲಾ ಮಾಹಿತಿಯಿದ್ದರೂ ಸಾವಿಗೆ ಎಎನ್‌ಎಂ ಹಾಗೂ ಆಶಾ ಕಾರ್ಯಕರ್ತರ ಸಂಪೂರ್ಣ ನಿರ್ಲಕ್ಷ್ಯವಾಗಿರುತ್ತದೆ. ಇಂತಹ ಘಟನೆಗಳಲ್ಲಿ ಎಎನ್‌ಎಂ ಮೇಲೆ ಕ್ರಮ ಹಾಗೂ ಆಶಾ ಕಾರ್ಯಕರ್ತೆಯರನ್ನು ಕೆಲಸದಿಂದ ತೆಗೆಯುವಂತೆ ಅಧಿಕಾರಿಗಳಿಗೆ ಆರೋಗ್ಯ ಇಲಾಖೆ ಆಯುಕ್ತ ಪಂಕಜಕುಮಾರ ಪಾಂಡೆ ಸೂಚಿಸಿದರು.​​​​​​​

ಕಿಮ್ಸ್‌ ಗೆ ನೋಟಿಸ್‌ ಜಾರಿ ಮಾಡಿ
ತಾಯಿ ಮತ್ತು ಮಗುವಿನ ಹಾರೈಕೆ ಆಸ್ಪತ್ರೆ ನಿರ್ಮಾಣ ಕಾರ್ಯ ಸಾಕಷ್ಟು ವಿಳಂಬವಾಗಿದ್ದು, ಇದರಿಂದ ಸಕಾಲಕ್ಕೆ ಸೇವೆ ನೀಡಲು ಸಾಧ್ಯಗುತ್ತಿಲ್ಲ. ಸೂಕ್ತ ಸೇವೆ ದೊರೆಯದ ಕಾರಣ ತಾಯಿ ಮತ್ತು ಮಗುವಿನ ಸಾವಿನ ಪ್ರಮಾಣ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಹಾರೈಕೆ ಆಸ್ಪತ್ರೆ ಮತ್ತು ತಾಯಿ ಹಾಗೂ ಮಗುವಿನ ಸಾವಿಗೆ ನೋಟಿಸ್‌ ನೀಡುವಂತೆ ಆಯುಕ್ತ ಹಾಗೂ ಪ್ರಧಾನ ಕಾರ್ಯದರ್ಶಿಗೆ ಸಚಿವ ಪಾಟೀಲ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next