Advertisement

ಹೆದ್ದಾರಿ ಇಲಾಖೆಯಿಂದ ಬರೇ ಪತ್ರ, ಬಾರದ ಪರಿಹಾರ

12:53 AM Jun 25, 2021 | Team Udayavani |

ಬಂಟ್ವಾಳ: ಮೂಲಸೌಕರ್ಯವಾದ ರಸ್ತೆ ಮೊದಲು ಆಗಲಿ, ಪರಿಹಾರ ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸದಿಂದ ಬಿ.ಸಿ. ರೋಡು- ಪುಂಜಾಲಕಟ್ಟೆ ಹೆದ್ದಾರಿಗಾಗಿ ಭೂಮಿ ಬಿಟ್ಟುಕೊಟ್ಟಿರುವ ಸ್ಥಳೀಯರಿಗೆ ಈಗ ಕಾಮಗಾರಿ ಪೂರ್ಣಗೊಳ್ಳುತ್ತ ಬಂದರೂ ಏನೂ ಸಿಕ್ಕಿಲ್ಲ. “ನಮಗೆ ಇಲಾಖೆಯಿಂದ ಪತ್ರ ಬಂದಿದೆಯೇ ವಿನಾ ಪರಿಹಾರ ಬಂದಿಲ್ಲ’ ಎಂದು ಭೂಮಿ ಬಿಟ್ಟುಕೊಟ್ಟವರು ಅಳಲು ತೋಡಿಕೊಂಡಿದ್ದಾರೆ, ಜತೆಗೆ ಹೋರಾಟಕ್ಕೆ ಸಿದ್ಧತೆ ನಡೆಸಿದ್ದಾರೆ.

Advertisement

ಆದರೆ ಕೋವಿಡ್‌ ಕಾರಣದಿಂದ ಅಧಿಕಾರಿ ಗಳು ಆಸ್ಪತ್ರೆ ಸೇರಿರುವುದೇ ಪರಿಹಾರ ವಿತರಣೆ ವಿಳಂಬವಾಗಲು ಕಾರಣ, ಶೀಘ್ರದಲ್ಲಿ ಮೊತ್ತ ಖಾತೆಗೆ ಜಮೆಯಾಗಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆ ಹೇಳಿದೆ.

ವರ್ಷಗಳ ಹಿಂದೆ ಸ್ವಾಧೀನ:

ಈ ಹೆದ್ದಾರಿ ಅಭಿವೃದ್ಧಿಗಾಗಿ ಬಂಟ್ವಾಳ ಪುರ ಸಭೆ, ನಾವೂರು, ಕಾವಳ ಮೂಡೂರು, ಕಾವಳ ಪಡೂರು ಮತ್ತು ಪಿಲಾತಬೆಟ್ಟು ಗ್ರಾ.ಪಂ. ವ್ಯಾಪ್ತಿಯ ಹಲವರ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಭೂಸಂಬಂಧಿ ದಾಖಲೆ ಪಡೆದ ಬಳಿಕ ಕಳೆದ ಡಿಸೆಂಬರ್‌ನಲ್ಲಿ ಪ್ರತೀ ಭೂ ಮಾಲಕರಿಗೆ ನಿಗದಿ ಪಡಿಸಿದ ಮೊತ್ತವನ್ನು ನಮೂದಿಸಿ ನೋಟಿಸ್‌ ನೀಡಲಾಗಿತ್ತು. ಆದರೆ ಇನ್ನೂ ಪರಿಹಾರ ಸಿಕ್ಕಿಲ್ಲ.

ರಾ. ಹೆ. ಇಲಾಖೆಯ ಮೂಲಕ ಸ್ವಾಧೀನ ಪಡಿಸಿಕೊಂಡ ಭೂಮಿಗೆ ವಿಶೇಷ ಭೂಸ್ವಾಧೀನಾಧಿಕಾರಿಗಳ ಮೂಲಕ ಪರಿಹಾರ ಮೊತ್ತ ನಿಗದಿ ಯಾಗುತ್ತದೆ, ಪಾವತಿ ಪ್ರಕ್ರಿಯೆಯನ್ನೂ ಅವರೇ ನೋಡಿಕೊಳ್ಳುತ್ತಾರೆ.

Advertisement

ಕೋವಿಡ್‌ನಿಂದ ಅಧಿಕಾರಿಗಳು ಆಸ್ಪತ್ರೆಗೆ ದಾಖಲಾಗಿದ್ದು, ವಿಳಂಬವಾಗಿದೆ. ನಿಗದಿ ಪಡಿಸಿದ ಮೊತ್ತ ಸಿಗಲಿದೆ, ಕಡಿಮೆಯಾಗಿದ್ದರೆ ಕಾನೂನು ಹೋರಾಟಕ್ಕೆ ಅವಕಾಶವಿದೆ ಎಂದು ಹೆದ್ದಾರಿ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಇಲಾಖೆ ನೀಡಿದ ಪತ್ರದಲ್ಲೇನಿದೆ? :

ಭೂಮಿ ಕಳೆದುಕೊಂಡ ಎಲ್ಲ ಭೂಮಾಲಕರಿಗೂ ಇಲಾಖೆ ಪತ್ರ ನೀಡಿದ್ದು, ಗ್ರಾಮಾಂತರ ಭಾಗದಲ್ಲಿ ಎಕರೆಗೆ ನಿಗದಿಪಡಿಸಿದ ಮೌಲ್ಯ, ಗುಂಟೆಯೊಂದಕ್ಕೆ ನಿಗದಿ ಪಡಿಸಿದ ಮೌಲ್ಯ, ನಗರ ವ್ಯಾಪ್ತಿಯಿಂದ ಇರುವ ದೂರ, ಕಟ್ಟಡದ ಮೌಲ್ಯ, ಮರ(ತೋಟಗಾರಿಕೆ)ಗಳ ಮೌಲ್ಯ, ಇತರ ಮರಗಳ ಮೌಲ್ಯ ನಿಗದಿಪಡಿಸಿ ಒಟ್ಟು ಪರಿಹಾರವನ್ನು ತಿಳಿಸಿದ್ದಾರೆ.

ಬಳಿಕ ಅಷ್ಟೇ ಮೊತ್ತವನ್ನು ಭೂ ಪರಿಹಾರದ ಮೊಬಲಗಿನ ಮೇಲೆ ಶೇ. 100 ಶಾಸನಬದ್ಧ ಭತ್ತೆ ಮತ್ತು ಕಾಯ್ದೆಯ ಪ್ರಕಾರ ಪರಿಹಾರದ ಮೊತ್ತದ ಮೇಲೆ ಶೇ. 12 ಹೆಚ್ಚುವರಿ ಮೊತ್ತ ಸೇರಿಸಿ ಪರಿಹಾರದ ಅಂತಿಮ ಮೊತ್ತವನ್ನು ತಿಳಿಸಿದ್ದಾರೆ. ಪರಿಹಾರ ಮೊತ್ತಕ್ಕೆ ಕಳೆದ ಸಾಲಿನ ಬಡ್ಡಿಯನ್ನು ನೀಡುವುದಾಗಿ ತಿಳಿಸಿದ್ದು, 2020-21ನೇ ಸಾಲಿನ ಬಡ್ಡಿಯ ಕುರಿತು ಮಾಹಿತಿ ನೀಡಿಲ್ಲ. ಎರಡೆರಡು ಬಾರಿ ದಾಖಲೆ ನೀಡಿದ್ದರೂ ಪರಿಹಾರ ಮೊತ್ತ ನೀಡುವುದಕ್ಕೆ ವಿಳಂಬ ಮಾಡುತ್ತಿದ್ದಾರೆ ಎಂಬುದು ಭೂ ಮಾಲಕರ ಅಳಲು.

ಭೂಮಿ ಕಳೆದುಕೊಂಡವರಿಗೆ ಪರಿಹಾರ ಎಷ್ಟು ಎಂಬ ಬಗ್ಗೆ ನೋಟಿಸ್‌ ನೀಡಿದ್ದು, ಅಷ್ಟು ಮೊತ್ತವನ್ನು ನೀಡುತ್ತಾರೆ. ಕಟ್ಟಡ ಕಳೆದು ಕೊಂಡವರಿಗೆ ಪರಿಹಾರ ನೀಡಲಾಗಿದೆ. ಪರಿಹಾರ ನೀಡಬೇಕಾದ ಅಧಿಕಾರಿಗಳು ಕೋವಿಡ್‌ನಿಂದ ಆಸ್ಪತ್ರೆ ಸೇರಿದ ಕಾರಣ ವಿಳಂಬವಾಗಿದ್ದು, ಶೀಘ್ರ ಜಮೆಯಾಗಲಿದೆ.– ಕೃಷ್ಣಕುಮಾರ್‌, ಎಇಇ, ರಾಷ್ಟ್ರೀಯ ಹೆದ್ದಾರಿ ಇಲಾಖೆ, ಮಂಗಳೂರು.

ನಾವೂರು ಗ್ರಾಮದಲ್ಲಿ 32 ಮಂದಿ ಭೂಮಿ ಕಳೆದುಕೊಂಡಿದ್ದು, ಇಬ್ಬರ ಕಟ್ಟಡಗಳಿಗೆ ಮಾತ್ರ ಪರಿಹಾರ ನೀಡಿದ್ದಾರೆ. ಇನ್ನುಳಿದವರಿಗೆ ಪರಿಹಾರ ಸಿಕ್ಕಿಲ್ಲ. ಹೀಗಾಗಿ ನಾವು ಮುಂದಿನ ತಿಂಗಳಲ್ಲಿ ಹೋರಾಟಕ್ಕೆ ಸಿದ್ಧತೆ ನಡೆಸಿದ್ದೇವೆ. ವಿಳಂಬಿತ ಪರಿಹಾರ ಮೊತ್ತಕ್ಕೆ ಒಂದು ವರ್ಷದ ಬಡ್ಡಿಯನ್ನು ಮಾತ್ರ ನಿಗದಿಪಡಿಸಿದ್ದಾರೆ.– ಸದಾನಂದ ನಾವೂರು, ಭೂಮಿ ನೀಡಿದವರು

Advertisement

Udayavani is now on Telegram. Click here to join our channel and stay updated with the latest news.

Next