ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್(ಎನ್‌ಸಿಇಆರ್‌ಟಿ) ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ನಡೆಸುವ ಯೋಗ ಒಲಂಪಿಯಾಡ್ ಯೋಗಾಸನ ಸ್ಪರ್ಧೆಗೆ ಕರ್ನಾಟಕದ ವಿದ್ಯಾರ್ಥಿಗಳನ್ನು ಈ ಬಾರಿ ಕಳುಹಿಸಿಕೊಟ್ಟಿಲ್ಲ.
ವಿಶ್ವಯೋಗ ದಿನಾಚರಣೆ ಅಂಗವಾಗಿ ಸರ್ಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ ಎನ್‌ಸಿಇಆರ್‌ಟಿ ವತಿಯಿಂದ ಪ್ರತಿ ವರ್ಷ ರಾಷ್ಟ್ರ ರಾಜಧಾನಿಯಲ್ಲಿ ಯೋಗ ಒಲಂಪಿಯಾಡ್ ಯೋಗಾಸನ ಸ್ಪರ್ಧೆ ನಡೆಸಲಾಗುತ್ತದೆ. ಕರ್ನಾಟಕದ ವಿದ್ಯಾರ್ಥಿಗಳು ಕಳೆದ ಮೂರು ವರ್ಷಗಳಿಂದ ಸ್ಪರ್ಧೆಯಲ್ಲಿ ಭಾಗವಹಿಸಿ, ಪದಕ ವಿಜೇತರಾಗಿದ್ದಾರೆ.
ಅದರಲ್ಲೂ ಚನ್ನಪಟ್ಟಣ ತಾಲೂಕಿನ ಮಕ್ಕಳು ಪ್ರತಿ ವರ್ಷ ರಾಷ್ಟ್ರೀಯ ಮತ್ತು ಅಂ.ರಾ.ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಆದರೆ, ಜೂನ್ 18ರಿಂದ 20ರವರೆಗೆ ನಡೆಯಲಿರುವ ಯೋಗಾಸನ ಸ್ಪರ್ಧೆಗೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಕರ್ನಾಟಕ ಸ್ಪರ್ಧೆ ಮಾಡದೇ ಇರುವುದರಿಂದ ಸ್ಪರ್ಧೆಯಲ್ಲಿ ಭಾಗವಹಿಸದೇ ವಂಚಿತರಾಗುತ್ತಿದ್ದಾರೆ ಎಂದು ಪಾಲಕರು ಹಾಗೂ ಯೋಗ ಸಂಘಟನೆಗಳು ಆರೋಪಿಸಿದೆ.
ಯೋಗಾಸನ ಸ್ಪರ್ಧೆಗೆ ಕರ್ನಾಟಕದ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿಕೊಡಬೇಕೆಂದು ಕೋರಿ ಸ್ಪರ್ಧಾರ್ಥಿಗಳು ಹಾಗೂ ಅವರ ಪಾಲಕ, ಪೋಷಕರು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿಗಳು ಶಿಕ್ಷಣ ಇಲಾಖೆ ಆಯುಕ್ತರಿಗೆ ಮತ್ತು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೆ ಜೂ.13ರಂದು ಪತ್ರ ಬರೆಯಲಾಗಿತ್ತು. ಆದರೆ, ಶಿಕ್ಷಣ ಇಲಾಖೆ ಅಧಿಕಾರಿಗಳು ಸ್ಪರ್ಧಾರ್ಥಿಗಳನ್ನು ಕಳುಹಿಸಿಕೊಡುವ ಯಾವ ಪ್ರಯತ್ನವನ್ನೂ ಮಾಡಿಲ್ಲ.
ಅನುದಾನದ ಕೊರತೆ?: ಯೋಗ ಒಲಂಪಿಯಾಡ್‌ಗೆ ಮಕ್ಕಳನ್ನು ಕಳುಹಿಸಿಕೊಡಲು ಯಾವುದೇ ಅನುದಾನವಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಣ ವಿಭಾಗದ ಸಹ ನಿರ್ದೇಶಕರು ಸ್ಪಷ್ಟವಾಗಿ ತಿಳಿಸಿದ್ದಾರೆ. ಎನ್‌ಸಿಇಆರ್‌ಟಿಯಿಂದ ಪ್ರಯಾಣಭತ್ಯೆ ಹಾಗೂ ದಿನಭತ್ಯೆಯನ್ನು ನೀಡಲಾಗುತ್ತದೆ. ಉಳಿದ ಖರ್ಚನ್ನು ಹಾಕಿಕೊಂಡು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮಕ್ಕಳನ್ನು ಕಳುಹಿಸಿಕೊಡಲು ಸಾಧ್ಯವಾಗಿಲ್ಲ ಎಂದು ಸಂಘದ ಗೌರವ ಕಾರ್ಯದರ್ಶಿ ಡಿ.ಪುಟ್ಟೇಗೌಡ ಅಸಮಾಧಾನ ವ್ಯಕ್ತಪಡಿಸಿದರು.
ಈಗ ಯೋಗ ಸಂಘದಿಂದಲೇ ಮಕ್ಕಳನ್ನು ಆಯ್ಕೆ ಮಾಡಿಕೊಂಡು ಕರೆದುಕೊಂಡು ಹೋಗಲಿದ್ದೇವೆ. ಸುಮಾರು 20ರಿಂದ 25 ವಿದ್ಯಾರ್ಥಿಗಳು ಕರ್ನಾಟಕದಿಂದ ಭಾಗವಹಿಸಲಿದ್ದಾರೆ. ಪ್ರತಿಭಾನ್ವಿತ ವಿದ್ಯಾರ್ಥಿಗಳು ಅವಕಾಶದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಯೋಗ ಸಂಘದಿಂದಲೇ ಮಕ್ಕಳನ್ನು ಕಳುಹಿಸಲು ಬೇಕಾದ ವ್ಯವಸ್ಥೆ ಈಗ ಮಾಡುತ್ತಿದ್ದೇವೆ ಎಂದು ವಿವರ ನೀಡಿದರು.