Advertisement

ಶಿಕ್ಷಣ ಇಲಾಖೆ ಸಮಸ್ಯೆ ಬಗೆಹರಿಸಲು ಚರ್ಚೆ

11:01 PM Sep 11, 2019 | Lakshmi GovindaRaju |

ಬೆಂಗಳೂರು: ವರ್ಗಾವಣೆ ಕಾಯ್ದೆ ತಿದ್ದುಪಡಿ, ಸರ್ಕಾರಿ ಶಾಲೆ ಗುಣಮಟ್ಟ ಸೇರಿದಂತೆ ಶಿಕ್ಷಣ ಕ್ಷೇತ್ರದ ಸುಧಾರಣೆ ಕುರಿತು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ವಿಧಾನಪರಿಷತ್‌ ಸದಸ್ಯರೊಂದಿಗೆ ಸಭೆ ನಡೆಸಿ ಹಲವು ಸಲಹೆ ಪಡೆದರು. ನಗರದ ನೃಪತುಂಗ ರಸ್ತೆಯ ಸರ್ವಶಿಕ್ಷಾ ಅಭಿಯಾನದ ಕಚೇರಿಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಸಂಬಂಧಿಸಿದಂತೆ ಸಮಾಲೋಚನೆ ನಡೆಸಿದರು.

Advertisement

ಬಳಿಕ ಮಾತನಾಡಿದ ಸಚಿವ ಸುರೇಶ್‌ ಕುಮಾರ್‌, ಶಿಕ್ಷಣ ಕ್ಷೇತ್ರ ಪ್ರತಿನಿಧಿಸುತ್ತಿರುವ ಮೇಲ್ಮನೆ ಶಾಸಕರ ಸಲಹೆ, ಮಾರ್ಗದರ್ಶನ ಪಡೆದಿದ್ದೇನೆ. ಇಲಾಖೆಯಲ್ಲಿ ಕಾನೂನು ತೊಡಕು ಇಲ್ಲದ ವಿಷಯ, ಹಣಕಾಸಿಗೆ ಹೊರೆಯಾಗದ ಪ್ರಕರಣಗಳನ್ನು ಕಾಲಮಿತಿ ಯಲ್ಲಿ ಬಗೆಹರಿಸಲು ಕಾರ್ಯಯೋಜನೆ ರೂಪಿಸಲಾಗುವುದೆಂದರು.

ನಿರ್ದಿಷ್ಟ ಪ್ರಕರಣ ಗಮನಕ್ಕೆ ತನ್ನಿ: ವರ್ಗಾವಣೆ ವೇಳೆ ಕ್ಯಾನ್ಸರ್‌ ಮೊದಲಾದ ಗಂಭೀರ ಆರೋಗ್ಯ ಸಮಸ್ಯೆ ಹೊಂದಿರುವ ಶಿಕ್ಷಕರಿಗೆ ವರ್ಗಾವಣೆಯಿಂದ ವಿನಾಯ್ತಿ ನೀಡಿದ ನಂತರವೂ ಪ್ರಕರಣಗಳು ಉಳಿದಿದ್ದರೆ, ಅಂತಹ ನಿರ್ದಿಷ್ಟ ಪ್ರಕರಣ ಗಳನ್ನು ತಮ್ಮ ಗಮನಕ್ಕೆ ತಂದರೆ ತಕ್ಷಣವೇ ಕ್ರಮ ಕೈಗೊಳ್ಳಲು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಸೂಚನೆ ನೀಡುತ್ತೇನೆಂದರು.

ಶಿಕ್ಷಣ ಇಲಾಖೆಯಲ್ಲಿ ಇನ್ನೂ ಸಾಕಷ್ಟು ಸಮಸ್ಯೆ ಇದೆ. ಎಲ್ಲವನ್ನೂ ಏಕಕಾಲಕ್ಕೆ ಪರಿಹರಿಸುವುದು ಕಷ್ಟ. ಜ್ವಲಂತ ಸಮಸ್ಯೆಗಳ ಕುರಿತು ಸದ್ಯ ಗಮನ ಹರಿಸಲಾಗುವುದು ಎಂದು ವಿಧಾನ ಪರಿಷತ್‌ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಸಲಹೆ ನೀಡಿದರು. ಹಾಗೆಯೇ ಶಿಕ್ಷಕರ ಹಲವು ಸಮಸ್ಯೆಗಳ ಕುರಿತಂತೆ ವಿಧಾನ ಪರಿಷತ್‌ ಸದಸ್ಯರು ಸಚಿವರ ಗಮನ ಸೆಳೆದರು.

ವಿಧಾನಪರಿಷತ್‌ ಸದಸ್ಯರಾದ ಪುಟ್ಟಣ್ಣ, ಎಸ್‌.ವಿ.ಸಂಕನೂರ, ಶರಣಪ್ಪ ಮಟ್ಟೂರು ಮತ್ತಿತರರು ಸಲಹೆ-ಸೂಚನೆ ನೀಡಿದರು. ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್‌.ಆರ್‌. ಉಮಾಶಂಕರ್‌, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ.ಕೆ.ಜಿ.ಜಗದೀಶ್‌, ಸರ್ವ ಶಿಕ್ಷಾ ಅಭಿಯಾನದ ಯೋಜನಾ ನಿರ್ದೇಶಕ ಡಾ.ಟಿ.ಎಂ.ರೇಜು, ಪಿಯು ಇಲಾಖೆ ನಿರ್ದೇಶಕಿ ಕನಗವಲ್ಲಿ, ಪ್ರೌಢಶಿಕ್ಷಣ ಮಂಡಳಿ ನಿರ್ದೇಶಕಿ ವಿ.ಸುಮಂಗಳಾ ಉಪಸ್ಥಿತರಿದ್ದರು.

Advertisement

ಶಿಕ್ಷಕ-ವಿದ್ಯಾರ್ಥಿ ಸ್ನೇಹಿ ವರ್ಗಾವಣೆ ನೀತಿ: ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ತೊಡಕಾದ ಕುರಿತಂತೆ ಶಾಸಕರು ನೀಡಿದ ಸಲಹೆ ಆಲಿಸಿ ಕಾಯ್ದೆಗೆ ತಿದ್ದುಪಡಿ ತರುವ ಮೊದಲು ವಿಧಾನಪರಿಷತ್ತಿನ ಸದಸ್ಯರ ಸಭೆ ಕರೆಯಲಾಗುವುದು. ಅಲ್ಲದೇ, ವಿಧಾನಪರಿಷತ್ತಿನ ಸದಸ್ಯರ ಸಮಿತಿ ರಚಿಸಿ ತಿದ್ದುಪಡಿಗೆ ಸಂಬಂಧಿಸಿದಂತೆ ವರದಿ ಪಡೆಯಲಿದ್ದೇವೆ. ಕಳೆದ ಬಾರಿ ವಿಧಾನಮಂಡಲದ ಎರಡೂ ಸದನಗಳಲ್ಲಿ ಧರಣಿ ವೇಳೆ ಮಸೂದೆ ಅಂಗೀಕಾರಗೊಂಡಿತ್ತು. ಈ ಬಾರಿ ಚರ್ಚೆಗೆ ಅವಕಾಶ ಕಲ್ಪಿಸಲಾಗುತ್ತದೆ. ಶಿಕ್ಷಕ ಹಾಗೂ ವಿದ್ಯಾರ್ಥಿ ಸ್ನೇಹಿ ವರ್ಗಾವಣೆ ನೀತಿ ಜಾರಿಗೆ ತರಲಾಗುವುದು ಎಂದು ಸಚಿವ ಸುರೇಶ್‌ಕುಮಾರ್‌ ಭರವಸೆ ನೀಡಿದರು.

ಸಭೆಯ ಪ್ರಮುಖ ನಿರ್ಣಯ: ಶಿಕ್ಷಣ ತಜ್ಞರು ಹಾಗೂ ಸಾಹಿತಿಗಳನ್ನು ಒಳಗೊಂಡ ನಿಯೋಗ, ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮಾತೃಭಾಷೆ ಶಿಕ್ಷಣದ ಮಹತ್ವವನ್ನು ಸರ್ಕಾರಕ್ಕೆ ಮನದಟ್ಟು ಮಾಡಿಸುವುದು. ಪ್ರಸಕ್ತ ಸಾಲಿನಲ್ಲಿ ಆರಂಭವಾಗಿ ರುವ ಸಾವಿರ ಕರ್ನಾಟಕ ಪಬ್ಲಿಕ್‌ ಶಾಲೆಗಳನ್ನು ರದ್ದು ಮಾಡುವಂತೆ ಆಗ್ರಹಿಸುವುದು. ಜತೆಗೆ, ಕನ್ನಡ ಮಾಧ್ಯಮ ಶಾಲೆಗಳ ಸಮಗ್ರ ಅಭಿವೃದ್ಧಿಗೆ ಒತ್ತಾಯಿಸುವುದು.

Advertisement

Udayavani is now on Telegram. Click here to join our channel and stay updated with the latest news.

Next