ರಾಮನಗರ: ವಿದ್ಯಾರ್ಥಿ ಹೆಸರು, ಜನ್ಮದಿನಾಂಕ, ಆಧಾರ್ ಸಂಖ್ಯೆ, ತಂದೆ- ತಾಯಿ, ಅಣ್ಣ, ಅಕ್ಕ, ತಮ್ಮ, ತಂಗಿ ಹೆಸರು ಉದ್ಯೋಗ, ಮೊಬೈಲ್ ಸಂಖ್ಯೆಗಳು, ವಿಳಾಸ….. ಹೀಗೆ ಬರೋಬ್ಬರಿ 23 ಮಾಹಿತಿಯನ್ನು ಕೋರಿರುವ ‘ನಮೂನೆ’ಯನ್ನು ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ರವಾನಿಸಿರುವ ಶಿಕ್ಷಣ ಇಲಾಖೆಯ ಅಧಿಕಾರಿಗಳು ವಿದ್ಯಾರ್ಥಿಗಳಿಂದ ಮಾಹಿತಿ ಸಂಗ್ರಹಿಸುವಂತೆ ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಿದ್ದಾರೆ.
ಹೀಗೆ ಜಿಲ್ಲೆಯ ಶಿಕ್ಷಣ ಸಂಸ್ಥೆಯ ಅಧಿಕಾರಿಗಳು ಕೊಟ್ಟಿರುವ ‘ನಮೂನೆ’ ಸರ್ಕಾರದ ಆದೇಶವಲ್ಲ. ಸಂಸದ ಡಿ. ಕೆ.ಸುರೇಶ್ ಅವರ ಫರ್ಮಾನು ಎಂದು ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಕಳೆದ ಶುಕ್ರವಾರ ರಾಮನಗರ ತಾಲೂಕಿನ ಶಾಲೆಗಳಿಗೆ ಈ ನಮೂನೆಯನ್ನು ರವಾನಿಸಿರುವ ಅಧಿಕಾರಿಗಳು ಮಾಹಿತಿ ಸಂಗ್ರಹಿಸಲು ಮೂರು ದಿನಗಳ ಗಡುವು ನೀಡಿದ್ದಾರೆ. ಸೋಮವಾರ ಚನ್ನಪಟ್ಟಣ ತಾಲೂಕಿನ ಶಾಲೆಗಳಿಗೆ ರವಾನೆಯಾಗಿದೆ. ಶಿಕ್ಷಣ ಇಲಾಖೆಯ ಅಧಿಕಾರಿಗಳ ಸೂಚನೆಯನ್ನು ಸರ್ಕಾರಿ ಶಾಲೆಗಳ ಮುಖ್ಯ ಶಿಕ್ಷಕರು ಶಿರಸಾವಹಿಸಿ ಪಾಲನೆ ಮಾಡುತ್ತಿದ್ದಾರೆ. ಆದರೆ, ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಸದಸ್ಯರು ‘ನಮೂನೆ’ಯ ಉದ್ದೇಶವನ್ನು ಪ್ರಶ್ನಿಸಿದ್ದಾರೆ.
ಶಿಕ್ಷಕರ ಅಸಮಾಧಾನ: ವಿದ್ಯಾರ್ಥಿಯ ಕುಟುಂಬದ ಪ್ರತಿಯೊಬ್ಬರ ಮಾಹಿತಿಯನ್ನು ಸಂಗ್ರಹಿಸುವುದು ಕಷ್ಟ ಎಂದು ಕೆಲವು ಶಿಕ್ಷಕರು ಪ್ರತಿಕ್ರಿಯಿಸಿದ್ದಾರೆ. ಪೋಷಕರು ಯಾಕೆ? ಏನು? ಎಂದು ತಮ್ಮನ್ನು ಪ್ರಶ್ನಿಸುತ್ತಿದ್ದಾರೆ. ಅವರಿಗೆ ಏನು ಉತ್ತರ ಕೊಡಬೇಕು ಅನ್ನೋದೆ ತಿಳಿಯುತ್ತಿಲ್ಲ ಅಂತ ಅಲವತ್ತು ಕೊಂಡಿದ್ದಾರೆ. ಅಲ್ಲದೆ, ವಿದ್ಯಾರ್ಥಿ ಹೆಸರು, ತಂದೆ- ತಾಯಿ ಹೆಸರು ವಿಳಾಸ, ಆಧಾರ್ ಕಾರ್ಡ್, ಫೋನ್ ಸಂಖ್ಯೆಗಳ ಮಾಹಿತಿ ಶಿಕ್ಷಣ ಇಲಾಖೆ ನಿರ್ವಹಿಸುತ್ತಿರುವ ಸ್ಟೂಡೆಂಟ್ ಅಚೀವ್‌ಮೆಂಟ್ ಟ್ರಾಕಿಂಗ್ ಸಿಸ್ಟಮ್ (ಸ್ಯಾಟ್ಸ್)ನಲ್ಲಿ ಈಗಾಗಲೆ ಸಿದ್ಧವಾಗಿ ಲಭ್ಯವಿದೆ ಎಂದಿದ್ದಾರೆ. ಅಲ್ಲಿಂದಲೇ ತೆಗೆದುಕೊಳ್ಳಲಿ ಎಂದಿದ್ದಾರೆ.
ಫೋಷಕರ ಪ್ರಶ್ನೆ: ಆದರೆ ಸಂಸದರಿಗೆ ಇಷ್ಟು ಮಾಹಿತಿ ಸಾಲುತ್ತಿಲ್ಲ. ವಿದ್ಯಾರ್ಥಿಯ ಅಣ್ಣ, ತಮ್ಮ, ಅಕ್ಕ, ತಂಗಿ ಅವರ ಉದ್ಯೋಗ ಮತ್ತು ದೂರವಾಣಿ ಸಂಖ್ಯೆಗಳು ಬೇಕಂತೆ ಹೀಗಾಗಿ ತಮ್ಮದೇ ನಮೂನೆಯನ್ನು ಜಿಲ್ಲೆಯಲ್ಲಿ ಜಾರಿ ಮಾಡಿದ್ದಾರೆ ಎಂದ ಟೀಕೆಗಳು ಕೇಳಿ ಬಂದಿವೆ. ‘ನಮೂನೆ’ಯ ಬಗ್ಗೆ ಪ್ರತಿಕ್ರಿಯಿಸಿರುವ ಕೆಲವು ಪೋಷಕರು ಮನೆಯ ಮಕ್ಕಳ ಉದ್ಯೋಗ, ವಿದ್ಯಾರ್ಹತೆ ಯಾಕೆ ಕೇಳ್ತಿದ್ದಾರೆ? ಸಂಸದರು ಮೊದಲು ಇದನ್ನು ವಿವರಿಸಿ ನಂತರ ಮಾಹಿತಿ ಸಂಗ್ರಹಿಸಲಿ ಎಂದಿದ್ದಾರೆ.
ಹಾಗೊಮ್ಮೆ ಸಂಸದರಿಗೆ ಮಾಹಿತಿ ಬೇಕೇ ಬೇಕು ಎನ್ನುವುದಾದರೆ ತಮ್ಮ ಉದ್ದೇಶವನ್ನು ಕರಪತ್ರದಲ್ಲಿ ಮುದ್ರಿಸಿ, ತಮ್ಮ ಪಕ್ಷದ ಸಾವಿರಾರು ಕಾರ್ಯಕರ್ತರ ಮೂಲಕ ಸಂಗ್ರಹಿಸಲಿ, ಶಿಕ್ಷಕರಿಗೆ ಪಾಠ ಮಾಡಲು ಬಿಡಿ ಎಂದು ಸಲಹೆ ನೀಡಿದ್ದಾರೆ.
ಸರ್ಕಾರಿ ಆದೇಶ ಖಂಡಿತ ಅಲ್ಲ: ಸಂಸದರ ಸೂಚನೆಯಂತೆ ಬಿಡುಗಡೆಯಾಗಿರುವ ‘ನಮೂನೆ’ ಖಂಡಿತ ಸರ್ಕಾರಿ ಆದೇಶವಲ್ಲ ಎಂದು ಗುರುತಿಸಿಕೊಳ್ಳಲು ಇಚ್ಚಿಸದ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಸಂಸದರ ಮೌಖೀಕ ಸೂಚನೆಯನ್ವಯ ಹಿರಿಯ ಅಧಿಕಾರಿಗಳು ಈ ನಮೂನೆಯನ್ನು ಸಿದ್ಧಪಡಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಸಾರ್ವಜನಿಕರ ಅನುಮಾನ: ನೂಮನೆಯನ್ನು ಸಂಸದರ ಆದೇಶ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಕೆಲವು ಸಾರ್ವಜನಿಕರು ಈ ನಮೂನೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ನಮೂನೆಯಲ್ಲಿ ಸಂಸದರು ಯಾರು? ಅವರ ಮನವಿ, ಸಹಿ ಇತ್ಯಾದಿ ಏನೂ ಇಲ್ಲ. ಕೆಲವು ಸಂಘಟನೆಗಳು ಇಂತಹ ಮಾಹಿತಿ ಸಂಗ್ರಹಿಸಿ ಕಾರ್ಪೋರೇಟ್ ಸಂಸ್ಥೆಗಳಿಗೆ ಮಾರಾಟ ಮಾಡುವ ಜಾಲವೂ ಇದೆ ಎಂದು ಎಚ್ಚರಿಸಿದ್ದಾರೆ.
ಪ್ರತಿಕ್ರಿಯೆಗೆ ಸಿಗದ ಸಂಸದರು: ತಮ್ಮ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ ರವಾನೆಯಾಗಿರುವ ನಮೂನೆಯ ಬಗ್ಗೆ ಸ್ಪಷ್ಟನೆ ಕೇಳಲು ಸುದ್ದಿಗಾರರು ಮಾಡಿದ ಕರೆಗಳನ್ನು ಸಂಸದ ಡಿ.ಕೆ.ಸುರೇಶ್ ಸ್ವೀಕರಿಸಿಲ್ಲ. ಇನ್ನೊಂದೆಡೆ ಶಿಕ್ಷಣ ಸಂಸ್ಥೆಯ ಅಧಿಕಾರಿಗಳು ಮಾತ್ರ ಸಂಸದರ ಆದೇಶವನ್ನು ಪಾಲಸುತ್ತಿದ್ದೇವೆ ಎಂದಷ್ಟೇ ಉತ್ತರ ನೀಡುತ್ತಿದ್ದಾರೆ.
● ಬಿ.ವಿ.ಸೂರ್ಯ ಪ್ರಕಾಶ್