ದಾವಣಗೆರೆ: ಔರಾದಕರ್ ವರದಿ ಶಿಫಾರಸು ಜಾರಿ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅ.9ರಂದು ಆರ್ಥಿಕ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಲಿದ್ದಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ರಂಭಾಪುರಿ ಜಗದ್ಗುರುಗಳ ದಸರಾ ಧರ್ಮ ಸಮ್ಮೇಳನದಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ ಸುದ್ದಿಗಾರರ ಜತೆ ಮಾತನಾಡಿದರು.
ಮೊದಲನೇ ಸಚಿವ ಸಂಪುಟ ಸಭೆಯಲ್ಲಿ ಪೊಲೀಸ್, ಕಾರಾಗೃಹ ಹಾಗೂ ಅಗ್ನಿ ಶಾಮಕ ಇಲಾಖೆ ಸಿಬ್ಬಂದಿ ವೇತನದ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಆರ್ಥಿಕ ನಿರ್ವಹಣೆ ಸಂಬಂಧ ಸಿಎಂ ಬುಧವಾರ ಆರ್ಥಿಕ ಇಲಾಖೆ ಅಧಿಕಾರಗಳೊಂದಿಗೆ ಚರ್ಚಿಸಿ, ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು. 2009 ಪ್ರವಾಹ ಸಂಭವಿಸಿದ ಸಂದರ್ಭದಲ್ಲಿ ಪರಿಹಾರಕ್ಕಾಗಿ 17 ಸಾವಿರ ಕೋಟಿ ಕೇಳಿದ್ದೆವು. ಆಗ ಪ್ರಧಾನಿ ಮನಮೋಹನ್ ಸಿಂಗ್ ರಾಜ್ಯಕ್ಕೆ ಬಂದು ಹೊದ ಮೇಲೆ ಮೊದಲು 500 ಕೋಟಿ ಬಿಡುಗಡೆ ಮಾಡಿದರು. ಆಗ ಒಟ್ಟು 1400 ಕೋಟಿ ರೂ. ನೀಡಿದ್ದರು.
ಆದರೂ ಕೂಡ ಆ ಪರಿಸ್ಥಿತಿ ನಿಭಾಯಿಸಿದ್ದೆವು. ಈಗ ಕೇಂದ್ರ ಸರ್ಕಾರ 1,200 ಕೋಟಿ ನೀಡಿದೆ. ಇನ್ನೂ ಪರಿಹಾರ ಬರ ಲಿದೆ. ಹಾಗಾಗಿ ನೆರೆ ಸಂತ್ರಸ್ತರಿಗೆ ಮೂಲ ಸೌಕರ್ಯ ಕಲ್ಪಿಸಲು ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ನಾವೂ ಕೂಡ ಏನೇನು ಕ್ರಮ ಕೈಗೊಳ್ಳ ಬೇಕೋ ಅದನ್ನು ಪ್ರಾಮಾಣಿಕವಾಗಿ ಕೈಗೊಳ್ಳುತ್ತೇವೆ. ಈ ಹಿಂದೆ 14 ತಿಂಗಳು ಯಾವ ರೀತಿ ಆಡಳಿತ ನಡೆಸಿದ್ದಾರೆ ಎಂಬುದು ಜನರಿಗೆ ಗೊತ್ತಿದೆ ಎಂದರು.
“ಗೃಹ ಇಲಾಖೆ ತುಂಬಾ ಭಾರ ಎನಿಸಿದೆ’: ಗೃಹ ಇಲಾಖೆ 50 ದಿನಗಳಲ್ಲೇ ನನಗೆ ತುಂಬಾ ಭಾರ ಎನಿಸಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು. ನಗರದ ರಂಭಾಪುರಿ ಜಗದ್ಗುರುಗಳ ದಸರಾ ಧರ್ಮ ಸಮ್ಮೇಳನದ ಕಾರ್ಯಕ್ರಮದಲ್ಲಿ ಮಾತನಾಡಿ, ಮುಖ್ಯಮಂತ್ರಿಗಳು ನನಗೆ ದುಷ್ಟರ ಸಂಹಾರ, ಶಿಷ್ಟರ ರಕ್ಷಣೆಯ ಬಹಳ ದೊಡ್ಡ ಜವಾಬ್ದಾರಿ ಖಾತೆ ನೀಡಿದ್ದಾರೆ ಎಂದರು.
ಈ ಹಿಂದೆ 5 ವರ್ಷಗಳ ಕಾಲ ನೀರಾವರಿ ಸಚಿವನಾಗಿ ಸಂತೋಷ ದಿಂದ ಕೆಲಸ ಮಾಡಿದ್ದೇನೆ. ಆದರೆ, ಗೃಹ ಸಚಿವನಾಗಿ ಈ 50 ದಿನಗಳ ಹೊರೆಯ ಅನುಭವ ನೀರಾವರಿ ಖಾತೆ ನಿಭಾಯಿಸಿದಾಗ ಎಂದೂ ಕೂಡ ಆಗಿರಲಿಲ್ಲ. ಆದರೆ, ಪೂಜ್ಯರ ಆಶೀರ್ವಾದ, ಶ್ರೀದೇವಿಯ ಕೃಪೆ, ಸಿಎಂ ಮಾರ್ಗದರ್ಶನದಿಂದ ಈ ಸವಾಲನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಲಿದ್ದೇನೆ ಎಂಬ ವಿಶ್ವಾಸವಿದೆ ನನಗಿದೆ ಎಂದರು.