Advertisement

ಹೆಸರಿಗಷ್ಟೇ ಸಂಸ್ಕೃತಿ ಇಲಾಖೆ: ಕಲಾವಿದರ ಗೋಳಿಗೆ ಸ್ಪಂದನೆಯೇ ಇಲ್ಲ!

04:48 PM Aug 11, 2022 | Team Udayavani |

ಶಿರಸಿ: ಕನ್ನಡ ಸಂಸ್ಕೃತಿ ಇಲಾಖೆ ಹೆಸರಿಗಷ್ಟೇ ಆಗಿದೆ. ಮುಂದಿನ ವರ್ಷ ನಡೆಸುವ ಕಾರ್ಯಕ್ರಮಗಳಿಗೆ ನೀಡುವ ಅರೆಕಾಸಿನ ಮಜ್ಜಿಗೆಯ ಅನುದಾನ ಬರುವ ಮೊದಲೇ ದಾಖಲೆಗಳ‌ ಸಂಕಷ್ಟ ಪೀಕಲಾಟ ಮಾಡಿಸುತ್ತಿದೆ. ಕಾಗದ ರಹಿತ ಇಲಾಖೆಯ‌ ಮಾಡುವ ಗಡಿ ಬಿಡಿಯಲ್ಲಿ ಈಗ ಇಲಾಖೆ ಕೇಳುವ ದಾಖಲೆಗಳು ಹೇಗೆ ತುಂಬಿದರೆ ಸರಿ ಎಂಬ ಪ್ರಶ್ನೆಯನ್ನು ಎತ್ತಿಟ್ಟಿವೆ.

Advertisement

ಕಲಾವಿದರಿಗೆ, ಕಲಾ ಸಂಘಟನೆಗಳಿಗೆ ಹೇಗೆ ಅರ್ಜಿ ತುಂಬಬೇಕು, ನಿಯಮಾವಳಿ ಏನು ಎಂಬುದನ್ನು ಮುಂಚಿತವಾಗಿ ತಿಳಿಸುವ ಕಾರ್ಯಾಗಾರ‌ ಕೂಡ‌ ಮಾಡದ ಇಲಾಖೆ ಕಳೆದ ಬಾರಿಗಿಂತ ಈ ಬಾರಿ ಸೂಚನೆ, ಸುತ್ತೊಲೆ ಬದಲಿಸಿ ಸಂಸ್ಕೃತಿ ಇಲಾಖೆಯ ವೆಬ್ ಸೈಟಿನಲ್ಲಿ ಹೇಳಿದ್ದು ಬಿಟ್ಟರೆ ಬೇರೆಲ್ಲೂ ತಿಳಸಿ ಜಾಗೃತಿ ಕೂಡ ಮಾಡಿಲ್ಲ ಎಂಬುದು ಆರೋಪವಾಗಿದೆ.

ಬರುವ ಮೊದಲೇ ಕಡತದ ಹೊರೆ!
ಅನುದಾನ ನೀಡುವ ನೆಪದಲ್ಲಿ ಕಲಾ ಸಂಘಟನೆ, ರಂಗ ಪ್ರದರ್ಶನ ನೀಡುವ ಕಲಾವಿದರಿಗೆ ದಾಖಲೆ ಒದಗಿಸುವಲ್ಲೇ ಸುಸ್ತಾಗುತ್ತಿದ್ದಾರೆ. ಯಾಕಾದರೂ ಅನುದಾನಕ್ಕೆ ಅರ್ಜಿ ಹಾಕಿದೆವೊ ಎಂಬ ಪ್ರಶ್ನೆ ಕಾಡುವಂತೆ ಆಗಿದೆ.

ಕಳೆದ ಜುಲೈ 31 ಕ್ಕೆ ಇಲಾಖೆ‌ ಅನುದಾನ ಅರ್ಜಿಗಳನ್ನು ಕಲಾ ಸಂಘಟನೆಗಳು, ವಯಕ್ತಿಕ ಪರಿಕರಗಳಿಗೆ ಸಲ್ಲಿಸಲಾಗಿತ್ತು. ಅದನ್ನು ಆನ್ ಲೈನ್ ಮೂಲಕ ಗ್ರಾಮ ಒನ್ ಅಥವಾ ಇಂಟರ್ನೆಟ್ ಮೂಲಕ ದಾಖಲಿಸಲಾಗಿತ್ತು. ಕೇಳಿದ ದಾಖಲೆ, ಅಡಿಟ್, 20 ರೂ ಬಾಂಡ್, ಸಂಸ್ಥೆಯ ಮಾಹಿತಿ, ಅಡಿಟ್ ಎಲ್ಲ‌ ನೀಡಿ ಅಪ್ ಲೋಡ್ ಮಾಡಿದ್ದರು. ಆದರೆ, ಈಗ ಇಲಾಖೆ ಹಾಕಿದ ಅರ್ಜಿಗಳೇ ಸರಿ ಇಲ್ಲ ಎಂದು ಸಾರಾ ಸಗಟಾಗಿ ಪುನಃ ಸಲ್ಲಿಸಲು ಹೇಳಿದೆ.

ಸಂಸ್ಥೆಯ ಕುರಿತು ಕೇಳಿದ ಸ್ಥಳದಲ್ಲಿ ಪತ್ರಿಕಾ ತುಣಕು ಹಾಕುವಂತೆ ಹೇಳದೇ‌ ಈಗ ಕೇಳಿದೆ. ಕೇಳಿದ್ದೇ ಎರಡು ವರ್ಷದ ದಾಖಲೆಯಾದರೆ ಈಗ ಮೂರು ವರ್ಷದ ಕಡತ ಕೇಳಿದ್ದು, ಇಲಾಖೆಗೆ ಕಡತ ಯಾತ್ರೆ‌ ಕಲಾವಿದರು ಮಾಡಬೇಕಾಗಿದೆ.

Advertisement

ಕನ್ನಡಿಯೊಳಗಿನ ಗಂಟು!
ಕನ್ನಡ‌ ಮತ್ತು ಸಂಸ್ಕೃತಿ ಬೆಳೆಸುವ ನಿಟ್ಟಿನಲ್ಲಿ ಕಲಾವಿದರ ಜೊತೆ, ಕಲಾ ಸಂಘಟನೆಗಳ ಜೊತೆ ಜೊತೆಯಾಗಿ ಇರಬೇಕಿದ್ದ ಇಲಾಖೆ ರಾಜ್ಯದ ಎಂಟನೂರಕ್ಕೂ ಅಧಿಕ ಕಲಾ ಸಂಘಟನೆಗಳಿಗೆ ಅನುದಾನ ಕನ್ನಡಿಯೊಳಗಿನ ಗಂಟಾಗಿಸುತ್ತಿದೆ. ಆದರೆ, ಈ ಬಾರಿ ಕಲಾವಿದರಿಗೆ ಅನುದಾನ ಲಭ್ಯ ಆಗುವದೇ ದುರ್ಲಭ ಎಂಬಂತೆ‌ ನಿಯಮ ರೂಪಿಸಿದ್ದು ಆಕ್ಷೇಪದ‌ ಮೂಲವಾಗಿದೆ. ದೂರದ ಕಚೇರಿಗೆ ಅಲೆದರೂ ಅನುದಾನ ಇಂತಿಷ್ಟೇ ಬರುತ್ತದೆ, ಇಲ್ಲ ಎಂಬ‌ ಮಾಹಿತಿ ಇಲ್ಲವಾಗಿದೆ.

ಅರೆಕಾಸಿನ‌ ಮಜ್ಜಿಗೆ
ಇಲಾಖೆ ನೀಡುವ 50 ಸಾವಿರ, ಒಂದು ಲ.ರೂ. ಮೊತ್ತವನ್ನು ಕಲಾವಿದರ ಗೌರವ ಧನಕ್ಕೆ ಮಾತ್ರ ಬಳಸಿಕೊಳ್ಳಬೇಕಿತ್ತು. ಒಂದು ಕಾರ್ಯಕ್ರಮ ನಡೆಸಲು ವೇದಿಕೆ, ಲೈಟು ಮೈಕು, ಪ್ರಚಾರ, ಊಟೋಪಚಾರ ಸಂಘಟಕರು ಭರಸಿಸಬೇಕು. ಆದರೆ, ಈಗ ಈ ಗೌರವಕ್ಕೂ ಚ್ಯುತಿ ಬರುವಂತೆ ಆಗಿದೆ. ಕಲಾವಿದರು, ಸಂಘಟಕರು ಚೋರರು ಎಂಬಂತೆ ನೋಡುತ್ತಿರುವ ಇಲಾಖೆ ಎಂಬುದು ಕಲಾವಿದರ ನೋವಾಗಿದೆ. ಕಳೆದ ವರ್ಷಗಳಲ್ಲಿ ಇದ್ದ ಅನುದಾನ ಮಾದರಿಯನ್ನೇ ಮುಂದುವರಿಸಬೇಕು. ಕೋವಿಡ್ ನಂತರ ಚೇತರಿಕೆ ಆಗುತ್ತಿದ್ದ ಕ್ಷೇತ್ರಕ್ಕೆ ಜೀವ ಕೊಡಬೇಕು. ಇಲಾಖೆ ನಿಯಮ ಸಡಿಲಗೊಳಿಸಲಿ ಎಂದು ಕಲಾವಿದರು ಆಗ್ರಹಿಸುತ್ತಿದ್ದಾರೆ.

ಈ‌ ಮಧ್ಯೆ ವಯಕ್ತಿಕ ವೇಷಭೂಷಣ, ವಾದ್ಯ‌ಉಪಕರಣ ಖರೀದಿಗೆ ಕೂಡ ಖರೀದಿಸಿದ ಜಿಎಸ್ ಟಿ ಮೂರು ಬಿಲ್ ಕೇಳುವ ಅವೈಜ್ಞಾನಿಕ ಕ್ರಮಕ್ಕೂ ಅಸಮಧಾನವಿದೆ. ಯಕ್ಷಗಾನ ವೇಷಭೂಷಣ, ನಾಟಕಗಳ ವೇಷಭೂಷಣ ತಯಾರಿಸುವವರಿಗೆ ಜಿಎಸ್ ಟಿ ಎಲ್ಲಿರ್ತಾವೆ ಎಂಬ ಪ್ರಶ್ನೆಗೆ ಉತ್ತರವೇ ಇಲ್ಲವಾಗಿದೆ.

ಸಾಂಸ್ಕೃತಿಕ ಜಿಲ್ಲೆಗೂ ಕರಿ‌ ನೆರಳು!
ಸಾಂಸ್ಕೃತಿಕ ಜಿಲ್ಲೆ ಎಂದು ಹೆಸರಾದಲ್ಲೂ ಕಡತ ಹೊರೆ ಕಾಡುತ್ತಿದೆ. ದೂರದ ಕಾರವಾರಕ್ಕೆ ತೆರಳಿ ದಾಖಲೆ ಒದಗಿಸುವದು, ಇಂಟರನೆಟ್ ಬಳಕೆ ಅನುಭವ ಇರದವರೂ ಇನ್ನಾರದ್ದೋ ಜನರ ನೆರವು ಕೇಳುವ ಸಂಕಟ ಕಾಣುತ್ತಿದೆ‌. ಸ್ಪೀಕರ್ ಕಾಗೇರಿ ಅವರು ಇಲಾಖೆಗೇ ಸರಳತೆಯ ಪಾಠ ಮಾಡಬೇಕು ಎಂಬ ಆಗ್ರಹ ಕಲಾವಿದರ ಸಮುದಾಯದಿಂದ ವ್ಯಕ್ತವಾಗಿದೆ. ಕಳೆದ ವರ್ಷದ ಮಾನದಂಡ ಬಳಸಲು ಸೂಚಿಸಲು‌ ಮನವಿ ಮಾಡಿಕೊಳ್ಳುತ್ತಿದ್ದಾರೆ.

ಕಲಾವಿದರಿಗೇ ಕಡತ ಯಜ್ಞ!
ಒಂದಡೆಗೆ ಕಾಗದ ರಹಿತ ಇಲಾಖೆ ಎನ್ನುವ ವೇಳೆಗೇ ಕಳೆದ‌ ಮೂರು ವರ್ಷದ ಸಮಗ್ರ ದಾಖಲೆ ಕೇಳುವ ಕನ್ನಡ‌ ಮತ್ತು ಸಂಸ್ಕೃತಿ ಇಲಾಖೆ ತನ್ನ ನಿಯಮ ಬದಲಿಸಿಕೊಳ್ಳದೇ ಹೋದರೆ ಕಲಾವಿದರು ಅತ್ತ ತಲೆ ಕೂಡ ಹಾಕದ ಸ್ಥಿತಿ ಬರಲಿದೆ! ಸಂಸ್ಕೃತಿ ಇಲಾಖೆ ಕೋವಿಡೋತ್ತರ ಕಾಲದಲ್ಲಿ ಕಲಾ ಬದುಕನ್ನು ಬಲಗೊಳಿಸಲು ಯೋಜಿಸಬೇಕಿತ್ತು ಎಂಬುದು ಕಲಾ ಪ್ರಿಯರ ಆಗ್ರಹವಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next