ಧಾರವಾಡ: ಹುಬ್ಬಳ್ಳಿಯ ಗೋಕುಲ ಕೈಗಾರಿಕಾ ವಸಾಹತುವಿನಲ್ಲಿರುವ ವಿವಿಧ ಬಿತ್ತನೆ ಬೀಜಗಳ ದಾಸ್ತಾನು ಮಳಿಗೆಗಳು ಮೇಲ್ನೋಟಕ್ಕೆ ನಿಯಮ ಉಲ್ಲಂಘಿಸಿದ್ದು ಕಂಡುಬಂದಿದ್ದು, ಕಾನೂನಾತ್ಮಕವಾಗಿ ಸೂಕ್ತ ಕ್ರಮ ವಹಿಸಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜಶೇಖರ ಬಿಜಾಪುರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೃಷಿ ಇಲಾಖೆಯ ಜಾಗೃತದಳದ ಅಧಿ ಕಾರಿಗಳು ಭೇಟಿ ನೀಡಿ ಪರಿಶೀಲನೆ ಕೈಗೊಂಡಾಗ, ಬಿತ್ತನೆ ಬೀಜದ ಅನಧಿಕೈತ ದಾಸ್ತಾನು, ಮಾರಾಟದ ಪರವಾನಗಿ ಪತ್ರ, ದಾಸ್ತಾನು ವಿವರಗಳು ಸಾರ್ವಜನಿಕರಿಗೆ ಎದ್ದು ಕಾಣುವಂತೆ ಪ್ರದರ್ಶಿಸದೆ ಇರುವುದು ಇತ್ಯಾದಿ ನಿಯಮಗಳ ಉಲ್ಲಂಘನೆ ಕಂಡುಬಂದಿದೆ.
ಮೆ| ಕೃಷಿಧನ ಸಂಸ್ಥೆಯ ಅಂಗ ಸಂಸ್ಥೆಯಾದ ಮೆ| ರಾಜೇಂದ್ರ ಅಗ್ರಿ ಜನೆಟಿಕ್ಸ್ ಪ್ರೈವೇಟ್ ಲಿಮಿಟೆಡ್ ಅವರಲ್ಲಿ ಸಫೇದ್ ಷೇರ್ ಎಂಬ ಹೆಸರಿನ 800 ಪ್ಯಾಕೇಟ್ ಹೈಬ್ರಿಡ್ ಬಿಟಿ ಹತ್ತಿ ಬೀಜವನ್ನು (ಮೌಲ್ಯ 6 ಲಕ್ಷ ರೂ.) ಅನಧಿಕೃತವಾಗಿ ಅಂದರೆ ಮಾರಾಟದ ಲೈಸನ್ಸ್ ಪಡೆಯದೆ ದಾಸ್ತಾನಿಟ್ಟಿರುವುದು ಹಾಗೂ ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ. ಈ ಬಿತ್ತನೆ ಬೀಜವನ್ನು ಜಪ್ತಿ ಮಾಡಲಾಗಿದೆ. ಮೆ| ಪವನ ಮಾರ್ಕೆಟರ್ಸ್ ಅವರ ಮಳಿಗೆಯಲ್ಲಿ ಮೆ| ಹೈ ಯೀಲ್ಡ್ ಅಗ್ರೀ ಜನೆಟಿಕ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಹೈಬ್ರಿಡ್ ಮುಸುಕಿನ ಜೋಳದ ತಳಿಗಳಾದ “ಆಪ್ತಮಿತ್ರ’, “ಎಡುರಾ’ ಹಾಗೂ “ಗೋಲ್ಡ್ ಮೈನ್’ಗಳನ್ನು ದಾಸ್ತಾನಿಕರಿಸಿದ್ದು, ಮಾರಾಟ ಮಾಡುತ್ತಿರುವುದು ಕಂಡುಬಂದಿದೆ.
ಇಲ್ಲಿ 14 ಲಕ್ಷ ರೂ. ಮೌಲ್ಯದ 70 ಕ್ವಿಂಟಲ್ ಬೀಜಗಳನ್ನು ಜಪ್ತಿ ಮಾಡಲಾಗಿದೆ. ಇದೇ ಮಳಿಗೆಯಲ್ಲಿ ಮೆ| ನವಭಾರತ ಸೀಡ್ಸ್ ಸಂಸ್ಥೆಯ ಹೈಬ್ರಿಡ್ ಬಿಟಿ ಹತ್ತಿ 35.68 ಕ್ವಿಂಟಲ್, ಹೈಬ್ರಿಡ್ ಜೋಳ 5.58 ಕ್ವಿಂಟಲ್ ಮತ್ತು ಹೈಬ್ರಿಡ್ ಸಜ್ಜೆ 16.92 ಕ್ವಿಂಟಲ್ ಸೇರಿ ಒಟ್ಟಾರೆ 63 ಲಕ್ಷ ರೂ. ಮೌಲ್ಯದ ಬೀಜಗಳನ್ನು ಅನಧಿಕೃತವಾಗಿ ದಾಸ್ತಾನಿಕರಿಸಿ ಮಾರಾಟ ಮಾಡುತ್ತಿರುವುದು ಕಂಡು ಬಂದಿರುವುದರಿಂದ ಜಪ್ತಿ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.