ವಿಜಯಪುರ: ಜಿಲ್ಲೆಯಲ್ಲಿ ಕೋವಿಡ್ ಕೋವಿಡ್ ಸಾಂಕ್ರಾಮಿಕ ರೋಗ ಹೆಚ್ಚುತ್ತಿದೆ. ಇದರಿಂದ ಸೋಂಕಿತರ ಗಂಟಲು ದ್ರವ ಮಾದರಿ ಸಂಗ್ರಹಿಸಿ, ಪರೀಕ್ಷೆ ಮಾಡಲು ಬೆಂಗಳೂರು, ಕಲಬುರಗಿ ಪ್ರಯೋಗಾಲಯಕ್ಕೆ ಕಳುಸಲಾಗುತ್ತಿದೆ. ಅಲ್ಲಿಂದ ವರದಿ ಬರಲು ವಿಳಂಬ ಆಗುತ್ತಿದೆ. ಹೀಗಾಗಿ ಜಿಲ್ಲೆಯಲ್ಲಿ ಬರುವ ಒಂದು ವಾರದಲ್ಲಿ ನಿತ್ಯ 300 ಪರೀಕ್ಷೆ ಮಾಡುವ ಸಾಮರ್ಥ್ಯದ ಆರ್‌ಟಿಪಿಸಿಆರ್ ಪ್ರಯೋಗಾಲಯ ಆರಂಭಿಸಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಶುಕ್ರವಾರ ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲೆಯ ಕೋವಿಡ್-19 ನಿಯಂತ್ರಣ ಸೇರಿದಂತೆ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಪರಿಶೀಲನಾ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು. ಜಿಲ್ಲೆಯಲ್ಲಿ ದಿನೇ ದಿನೇ ಸೋಂಕು ಶಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಗಂಟಲು ದ್ರವ ಮಾದರಿ ಪರೀಕ್ಷೆ ಸವಾಲಾಗುತ್ತಿದೆ. ಈಗಿರುವ ನಿತ್ಯ 25 ಮಾದರಿ ಪರೀಕ್ಷೆ ಪ್ರಯೋಗಾಲಯಗಳಿಂದ ಜಿಲ್ಲೆಯ ಮಾದರಿ ಸಂಗ್ರಹಕ್ಕೆ ತಕ್ಕಂತೆ ಪರೀಕ್ಷೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಆರ್ ಟಿಪಿಸಿಆರ್ ಪ್ರಯೋಗಾಲಯ ಸ್ಥಾಪನೆಗೆ ಸರ್ಕಾರ ಅನುಮತಿಸಿದೆ. ಇದರಿಂದ 24 ಗಂಟೆಯಲ್ಲಿ 300 ಗಂಟಲು ದ್ರವ ಮಾದರಿ ಪರೀಕ್ಷೆ ಮಾಡಬಹುದು. ಇದಕ್ಕಾಗಿ ಪ್ರಯೋಗಾಲಯದ ತಾಂತ್ರಿಕ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ ಎಂದರು.
ಇದಲ್ಲದೇ ಜಿಲ್ಲೆಯಲ್ಲಿರುವ ಎರಡು ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲೂ ಐಸಿಆರ್‌ಎಂ ಪ್ರಯೋಗಾಲಯ ಆರಂಭಕ್ಕೂ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಇದರಲ್ಲಿ ಒಂದು ಕಾಲೇಜಿಗೆ ಎನ್‌ಎಬಿಎಲ್ ಮಾನ್ಯತೆ ಪ್ರಮಾಣ ಪತ್ರ ಸಿಕ್ಕುತ್ತಲೇ ಪ್ರಯೋಗಾಲಯ ಆರಂಭಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದಲ್ಲದೇ ಕೋವಿಡ್ ಸೋಂಕಿತರು ಹೆಚ್ಚಳವಾದಲ್ಲಿ ಚಿಕಿತ್ಸೆ ನೀಡಲು 10 ಖಾಸಗಿ ಆಸ್ಪತ್ರೆಗಳು ಮುಂದೆ ಬಂದಿವೆ. ಇನ್ನೂ ಕೆಲ ಆಸ್ಪತ್ರೆಗಳು ಮಾತುಕತೆ ನಡೆಸಿವೆ. ಖಾಸಗಿ ಆಸ್ಪತ್ರೆಗಳಲ್ಲಿರುವ ಸೌಲಭ್ಯಗಳ ಕುರಿತು ಪರಿಶೀಲಿಸಿ ವರದಿ ನೀಡಲು ಡಿಎಚ್‌ಒ ಅವರಿಗೆ ಸೂಚನೆ ನೀಡಲಾಗಿದೆ ಎಂದು ವಿವರಿಸಿದರು.
ಜಿಲ್ಲೆಯಲ್ಲಿ ಕಂಟೈನ್ಮೆಂಟ್ ವಲಯಗಳ ಸಂಖ್ಯೆ ಕಡಿಮೆಯಾಗುತ್ತಿದ್ದು ಪಾಸಿಟಿವ್ ಪ್ರಕರಣ ದೃಢಪಟ್ಟ ವಲಯಗಳಲ್ಲಿ ಪಾಥಮಿಕ-ದ್ವಿತೀಯ ಸಂಪರ್ಕ ಇರುವವರ ಮೇಲೆ ನಿಗಾ ಇಡಬೇಕು ಎಂದು ಸೂಚಿಸಿದರು. ಸೋಂಕಿತರಿಗೆ ಗುಣಮುಖ ಸಂಖ್ಯಾ ಪ್ರಮಾಣ ಹೆಚ್ಚಿರುವುದಕ್ಕೆ ಮತ್ತು ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆಯಿಂದ ಅತ್ಯುತ್ತಮ ಕಾರ್ಯ ನಿರ್ವಹಣೆ ಬಗ್ಗೆ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಟಾಸ್ಕ್ ಫೂರ್ಸ್ ಸಮಿತಿಗಳು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವುದಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.
ಸಭೆಯಲ್ಲಿ ಸಿಂದಗಿ ಶಾಸಕ ಎಂ.ಸಿ. ಮನಗೂಳಿ, ನಾಗಠಾಣ ಶಾಸಕ ದೇವಾನಂದ ಚವ್ಹಾಣ, ಜಿಲ್ಲಾ ಧಿಕಾರಿ ವೈ.ಎಸ್. ಪಾಟೀಲ, ಜಿಪಂ ಸಿಇಒ ಗೋವಿಂದರೆಡ್ಡಿ, ಎಸ್ಪಿ ಅನುಪಮ್ ಅಗರವಾಲ, ಮಹಾನಗರ ಪಾಲಿಕೆ ಆಯುಕ್ತ ಹರ್ಷಾ ಶಟ್ಟಿ, ಡಿಎಚ್‌ಒ ಡಾ| ಮಹೇಂದ್ರ ಕಾಪ್ಸೆ ಇದ್ದರು.