ತಿರುಪತಿ: 76 ವರ್ಷದ ಮಹಿಳಾ ಭಕ್ತೆಯೊಬ್ಬರು ಪುರಾತನ ವೆಂಕಟೇಶ್ವರ ದೇವಾಲಯಕ್ಕೆ ಮರಣೋತ್ತರವಾಗಿ 9.2 ಕೋಟಿ ರೂ. ಮೌಲ್ಯದ ಆಸ್ತಿಯನ್ನು ದಾನ ಮಾಡಿಸಿದ್ದಾರೆ.
ನಿಧನ ಹೊಂದಿದ ಚೆನ್ನೈನ ಅವಿವಾಹಿತೆ ಪಾರ್ವತಮ್ಮ ಅವರ ಪರವಾಗಿ, ಅವರ ಸಹೋದರಿ ರೇವತಿ ವಿಶ್ವನಾಥನ್ ಇಂದು ಗುರುವಾರ ಬೆಳಿಗ್ಗೆ ಬೆಟ್ಟದ ದೇವಸ್ಥಾನದಲ್ಲಿ ಟಿಟಿಡಿ ಮಂಡಳಿಯ ಅಧ್ಯಕ್ಷ ವೈವಿ ಸುಬ್ಬಾ ರೆಡ್ಡಿ ಅವರಿಗೆ 3.2 ಕೋಟಿ ರೂ.ಗಳ ಡಿಮ್ಯಾಂಡ್ ಡ್ರಾಫ್ಟ್‌ನೊಂದಿಗೆ 6 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಯ ದಾಖಲೆಗಳನ್ನು ಹಸ್ತಾಂತರಿಸಿದರು ಎಂದು ದೇವಸ್ಥಾನದ ಅಧಿಕಾರಿ ಪಿಟಿಐಗೆ ತಿಳಿಸಿದ್ದಾರೆ.
ರೇವತಿ ವಿಶ್ವನಾಥನ್ ಅವರು ಎರಡು ವಸತಿ ಗೃಹಗಳಿಗೆ ಸಂಬಂಧಿಸಿದ ಆಸ್ತಿಗಳ ಹಕ್ಕು ಪತ್ರವನ್ನು ಹಸ್ತಾಂತರಿಸಿದ್ದಾರೆ.
ತಿರುಮಲ ತಿರುಪತಿ ದೇವಸ್ಥಾನಗಳು (ಟಿಟಿಡಿ) ನಿರ್ಮಿಸುತ್ತಿರುವ ಮಕ್ಕಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ 3.2 ಕೋಟಿ ರೂ. ನಗದು ಬಳಸಿಕೊಳ್ಳುವಂತೆ ಅವರು ಟಿಟಿಡಿಗೆ ಮನವಿ ಮಾಡಿದ್ದಾರೆ.
ನನ್ನ ಸಹೋದರಿ ಸಾವಿನ ನಂತರ ತನ್ನ ಆಸ್ತಿ ಮತ್ತು ಬ್ಯಾಂಕ್‌ನಲ್ಲಿರುವ ಹಣವನ್ನು ಬೆಟ್ಟದ ದೇವಸ್ಥಾನಕ್ಕೆ ದಾನ ಮಾಡಬೇಕೆಂದು ಬಯಸಿದ್ದಳು. ವೆಂಕಟೇಶ್ವರ ದೇವರ ಕಟ್ಟಾ ಭಕ್ತೆಯಾಗಿರುವ ಆಕೆ ಈ ಹಿಂದೆಯೂ ಟಿಟಿಡಿ ನಡೆಸುತ್ತಿರುವ ವಿವಿಧ ಟ್ರಸ್ಟ್‌ಗಳಿಗೆ ಅಪಾರ ಕೊಡುಗೆ ನೀಡಿದ್ದಾಳೆ ಮತ್ತು ಪ್ರಸ್ತುತ (ದೇಣಿಗೆ) ವಿಧಿವಿಧಾನಗಳನ್ನು ಅವರ ಇಚ್ಛಾ ಪತ್ರಕ್ಕೆ ಅನುಗುಣವಾಗಿ ನಡೆಸಲಾಗುತ್ತಿದೆ ಎಂದು ರೇವತಿ ಹೇಳಿದ್ದಾರೆ.