Advertisement

ದೇವಧರ್‌ ಟ್ರೋಫಿ ಕ್ರಿಕೆಟ್‌ ತಮಿಳುನಾಡು ಚಾಂಪಿಯನ್‌

08:02 AM Mar 31, 2017 | Team Udayavani |

ವಿಶಾಖಪಟ್ಟಣ: ವಿಜಯ್‌ ಹಜಾರೆ ಟ್ರೋಫಿಯನ್ನೆತ್ತಿದ ಸಂಭ್ರಮದಲ್ಲಿದ್ದ ತಮಿಳುನಾಡು ತಂಡ 2016-17ನೇ ಸಾಲಿನ ದೇವಧರ್‌ ಟ್ರೋಫಿಯನ್ನೂ ತನ್ನದಾಗಿಸಿಕೊಂಡಿದೆ. ಫೈನಲ್‌ನಲ್ಲಿ ಅದು ಪಾರ್ಥಿವ್‌ ಪಟೇಲ್‌ ನೇತೃತ್ವದ ಇಂಡಿಯಾ “ಬಿ’ ತಂಡವನ್ನು 42 ರನ್ನುಗಳಿಂದ ಮಣಿಸಿತು.

Advertisement

ಬುಧವಾರ ನಡೆದ ಪ್ರಶಸ್ತಿ ಕಾಳಗದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ತಮಿಳುನಾಡು 9 ವಿಕೆಟಿಗೆ 303 ರನ್ನುಗಳ ಬೃಹತ್‌ ಮೊತ್ತ ಪೇರಿಸಿದರೆ, ಇಂಡಿಯಾ “ಬಿ’ 46.1 ಓವರ್‌ಗಳಲ್ಲಿ 261ಕ್ಕೆ ಆಲೌಟ್‌ ಆಯಿತು.

ಕಾರ್ತಿಕ್‌ ಮತ್ತೆ “ಫೈನಲ್‌ ಶತಕ’: ತಮಿಳುನಾಡು ಮೊತ್ತವನ್ನು ಮುನ್ನೂರರಾಚೆ ವಿಸ್ತರಿಸಲು ನೆರವಾದವರು ಇನ್‌-ಫಾರ್ಮ್ ಬ್ಯಾಟ್ಸ್‌ಮನ್‌, ವಿಕೆಟ್‌ ಕೀಪರ್‌ ದಿನೇಶ್‌ ಕಾರ್ತಿಕ್‌. 39 ರನ್ನಿಗೆ 3 ವಿಕೆಟ್‌ ಉದುರಿಸಿಕೊಂಡ ತಮಿಳುನಾಡು ತೀವ್ರ ಸಂಕಟದಲ್ಲಿದ್ದಾಗ ಕ್ರೀಸ್‌ ಇಳಿದ ಅವರು 126 ರನ್‌ ಬಾರಿಸಿ ಮೆರೆದರು. ವಿಜಯ್‌ ಹಜಾರೆ ಟ್ರೋಫಿ ಫೈನಲ್‌ನಲ್ಲೂ ಕಾರ್ತಿಕ್‌ 112 ರನ್‌ ಕೊಡುಗೆ ಸಲ್ಲಿಸಿದ್ದನ್ನು ನೆನಪಿಸಿಕೊಳ್ಳಬಹುದು.

91 ಎಸೆತಗಳಿಗೆ ಉತ್ತರವಿತ್ತ ದಿನೇಶ್‌ ಕಾರ್ತಿಕ್‌ 14 ಬೌಂಡರಿ, 3 ಸಿಕ್ಸರ್‌ ಸಿಡಿಸಿ “ಬಿ’ ತಂಡದ ಬೌಲರ್‌ಗಳಿಗೆ ಬೆವರಿಳಿಸಿದರು. ಅವರಿಗೆ ಎನ್‌. ಜಗದೀಶನ್‌ (55) ಉತ್ತಮ ಬೆಂಬಲವಿತ್ತರು. ಇವರಿಬ್ಬರ 4ನೇ ವಿಕೆಟ್‌ ಜತೆ ಯಾಟದಲ್ಲಿ 136 ರನ್‌ ಸಂಗ್ರಹಗೊಂಡಿತು. ಬಾಬಾ ಇಂದ್ರಜಿತ್‌ ಔಟಾಗದೆ 31, ನಾಯಕ ವಿಜಯ್‌ ಶಂಕರ್‌ 21 ರನ್‌ ಮಾಡಿದರು. 

39ಕ್ಕೆ 5 ವಿಕೆಟ್‌ ಕಿತ್ತ ಧವಳ್‌ ಕುಲಕರ್ಣಿ ಇಂಡಿಯಾ “ಬಿ’ ತಂಡದ ಯಶಸ್ವಿ ಬೌಲರ್‌. ಉಳಿದವರ್ಯಾರೂ ಒಂದಕ್ಕಿಂತ ಹೆಚ್ಚು ವಿಕೆಟ್‌ ಕೀಳಲಿಲ್ಲ.

Advertisement

“ಬಿ’: ಚೇಸಿಂಗ್‌ ಹಿನ್ನಡೆ: ದೊಡ್ಡ ಮೊತ್ತದ ಚೇಸಿಂಗ್‌ ನಡೆಸಬೇಕಿದ್ದ ಇಂಡಿಯಾ “ಬಿ’ ಸಾಮಾನ್ಯ ಆರಂಭ ಕಂಡುಕೊಂಡಿತು. ನಾಯಕ ಪಾರ್ಥಿವ್‌ ಪಟೇಲ್‌ 15 ರನ್‌ ಮಾಡಿ ಮೊದಲಿಗರಾಗಿ ನಿರ್ಗಮಿಸಿದರು. ಶಿಖರ್‌ ಧವನ್‌ ಆಕ್ರಮಣಕಾರಿಯಾಗಿ ಬ್ಯಾಟ್‌ ಬೀಸಿದರೂ 45ರ ಮೊತ್ತದಲ್ಲಿ ಎಡವಿದರು (34 ಎಸೆತ, 8 ಬೌಂಡರಿ, 1 ಸಿಕ್ಸರ್‌). ಧವನ್‌ ಮತ್ತು ಇಶಾಂಕ್‌ ಜಗ್ಗಿ (1) ಒಂದೇ ರನ್‌ ಅಂತರದಲ್ಲಿ ಪೆವಿಲಿಯನ್‌ ಸೇರುವಂತಾದದ್ದು, 9 ರನ್‌ ಅಂತರದಲ್ಲಿ ಮನೀಷ್‌ ಪಾಂಡೆ (32) ಗಾಯಾಳಾಗಿ ಕ್ರೀಸ್‌ ತೊರೆದದ್ದು “ಬಿ’ ತಂಡಕ್ಕೆ ಭಾರೀ ಹೊಡೆತವಿಕ್ಕಿತು. 

ಮಧ್ಯಮ ಕ್ರಮಾಂಕದ ಆಟಗಾರರಾದ ಗುರುಕೀರತ್‌ ಸಿಂಗ್‌ (64) ಮತ್ತು ಹರ್‌ಪ್ರೀತ್‌ ಸಿಂಗ್‌ (36) ಹೋರಾಟ ನಡೆಸಿದರೂ ಈ ಜೋಡಿ ಬೇರ್ಪಟ್ಟ ಬಳಿಕ ತಮಿಳುನಾಡು ಬೌಲರ್‌ಗಳು ಸಂಪೂರ್ಣ ಮೇಲುಗೈ ಸಾಧಿಸಿದರು.

ಸಂಕ್ಷಿಪ್ತ ಸ್ಕೋರ್‌: 
ತಮಿಳುನಾಡು-9 ವಿಕೆಟಿಗೆ 303 (ದಿನೇಶ್‌ ಕಾರ್ತಿಕ್‌ 126, ಜಗದೀಶನ್‌ 55, ಇಂದ್ರಜಿತ್‌ ಔಟಾಗದೆ 31, ಧವಳ್‌ ಕುಲಕರ್ಣಿ 39ಕ್ಕೆ 5). ಇಂಡಿಯಾ “ಬಿ’-46.1 ಓವರ್‌ಗಳಲ್ಲಿ 261 (ಗುರುಕೀರತ್‌ 64, ಧವನ್‌ 45, ಹರ್‌ಪ್ರೀತ್‌ 36, ಪಾಂಡೆ 32, ರಾಹಿಲ್‌ ಶಾ 40ಕ್ಕೆ 3, ಸಾಯಿ ಕಿಶೋರ್‌ 41ಕ್ಕೆ 2, ಎಂ. ಮೊಹಮ್ಮದ್‌ 53ಕ್ಕೆ 2).  ಪಂದ್ಯಶ್ರೇಷ್ಠ: ದಿನೇಶ್‌ ಕಾರ್ತಿಕ್‌.

Advertisement

Udayavani is now on Telegram. Click here to join our channel and stay updated with the latest news.

Next