Advertisement

Deodhar Trophy 2023: ದಕ್ಷಿಣ ವಲಯಕ್ಕೆ ಹ್ಯಾಟ್ರಿಕ್‌ ಗೆಲುವು

10:52 PM Jul 28, 2023 | Team Udayavani |

ಪುದುಚೇರಿ: ದೇವಧರ್‌ ಟ್ರೋಫಿ ಏಕದಿನ ಪಂದ್ಯಾವಳಿಯಲ್ಲಿ ದಕ್ಷಿಣ ವಲಯ ಹ್ಯಾಟ್ರಿಕ್‌ ವಿಜಯೋತ್ಸವ ಆಚರಿಸಿದೆ. ಶುಕ್ರವಾರದ ಮುಖಾಮುಖೀಯಲ್ಲಿ ಮಾಯಾಂಕ್‌ ಅಗರ್ವಾಲ್‌ ಬಳಗ 9 ವಿಕೆಟ್‌ಗಳಿಂದ ಈಶಾನ್ಯ ವಲಯವನ್ನು ಮಗುಚಿತು.

Advertisement

ಟಾಸ್‌ ಗೆದ್ದ ಈಶಾನ್ಯ ವಲಯ ಮೊದಲು ಬ್ಯಾಟಿಂಗ್‌ ಮಾಡಲು ನಿರ್ಧರಿಸಿತು. ಆದರೆ ಯಶಸ್ಸು ಕಾಣಲಿಲ್ಲ. 49.2 ಓವರ್‌ ತನಕ ಇನ್ನಿಂಗ್ಸ್‌ ವಿಸ್ತರಿಸಿದರೂ ಗಳಿಸಿದ್ದು 136 ರನ್‌ ಮಾತ್ರ. ದಕ್ಷಿಣ ವಲಯ 19.3 ಓವರ್‌ಗಳಲ್ಲಿ ಒಂದೇ ವಿಕೆಟಿಗೆ 137 ರನ್‌ ಬಾರಿಸಿತು. ಇದಕ್ಕೂ ಮೊದಲು ಉತ್ತರ ವಲಯ ಮತ್ತು ಪಶ್ಚಿಮ ವಲಯದ ಎದುರು ದಕ್ಷಿಣ ವಲಯ ಜಯ ಸಾಧಿಸಿತ್ತು.

ದಕ್ಷಿಣ ವಲಯವೀಗ ಅಂಕಪಟ್ಟಿಯ ಅಗ್ರಸ್ಥಾನ ಅಲಂಕರಿಸಿದೆ. ರನ್‌ರೇಟ್‌ ಕೂಡ ಮೇಲ್ಮಟ್ಟದಲ್ಲಿದೆ (+28.06).

ಅನನುಭವಿ ಈಶಾನ್ಯ ವಲಯಕ್ಕೆ ದಕ್ಷಿಣದ ಸಾಂ ಕ ಬೌಲಿಂಗ್‌ ದಾಳಿಯನ್ನು ಎದುರಿಸಿ ನಿಲ್ಲಲು ಸಾಧ್ಯವಾಗಲಿಲ್ಲ. ಎಂದಿನಂತೆ ವಿದ್ವತ್‌ ಕಾವೇರಪ್ಪ ಮಿಂಚಿನಂತೆ ಎರಗಿದರು. ಸಾಯಿ ಕಿಶೋರ್‌ ಕೂಡ ಸಾಥ್‌ ಕೊಟ್ಟರು. ಇಬ್ಬರ ಬುಟ್ಟಿಗೂ ತಲಾ 3 ವಿಕೆಟ್‌ ಬಿತ್ತು. ಅರ್ಜುನ್‌ ತೆಂಡುಲ್ಕರ್‌, ವಿಜಯ್‌ಕುಮಾರ್‌ ವೈಶಾಖ್‌, ವಾಷಿಂಗ್ಟನ್‌ ಸುಂದರ್‌, ರೋಹಿತ್‌ ರಾಯುಡು ಅವರಿಗೆ ಒಂದೊಂದು ವಿಕೆಟ್‌ ಲಭಿಸಿತು. ಫೈರೊಯಿಜಾಮ್‌ ಜೊಟಿನ್‌ ಸರ್ವಾಧಿಕ 40 ರನ್‌ ಹೊಡೆದರೆ, ನಾಯಕ ಎಲ್‌. ಕೀಶಂಗ್ಬಾಮ್‌ 23 ರನ್‌ ಮಾಡಿದರು.

ದಕ್ಷಿಣ ವಲಯದ ಚೇಸಿಂಗ್‌ ನೇತೃತ್ವ ವಹಿಸಿದವರು ಆರಂಭಕಾರ ರೋಹನ್‌ ಕುನ್ನುಮ್ಮಾಳ್‌. ಅವರು ಬಿರುಸಿನ ಗತಿಯಲ್ಲಿ 87 ರನ್‌ ಹೊಡೆದರು. 58 ಎಸೆತಗಳ ಈ ಇನ್ನಿಂಗ್ಸ್‌ನಲ್ಲಿ 8 ಫೋರ್‌, 5 ಸಿಕ್ಸರ್‌ ಒಳಗೊಂಡಿತ್ತು. ಮಾಯಾಂಕ್‌ ಅಗರ್ವಾಲ್‌ ಗಳಿಕೆ 32 ರನ್‌. ಮೊದಲ ವಿಕೆಟಿಗೆ 15.4 ಓವರ್‌ಗಳಿಂದ 95 ರನ್‌ ಒಟ್ಟುಗೂಡಿತು. ಏಕೈಕ ವಿಕೆಟ್‌ ಇಮ್ಲಿವಾಟಿ ಲೆಮುrರ್‌ ಪಾಲಾಯಿತು.

Advertisement

ಪರಾಗ್‌ ಆಲ್‌ರೌಂಡ್‌ ಪರಾಕ್ರಮ
ರಿಯಾನ್‌ ಪರಾಗ್‌ ಅವರ ಸ್ಫೋಟಕ ಶತಕ ಹಾಗೂ ಆಲ್‌ರೌಂಡ್‌ ಪರಾಕ್ರಮದಿಂದ ಪೂರ್ವ ವಲಯ 88 ರನ್ನುಗಳಿಂದ ಉತ್ತರ ವಲಯವನ್ನು ಮಣಿಸಿದೆ. ಇದರೊಂದಿಗೆ ಪೂರ್ವ ವಲಯವೂ ಹ್ಯಾಟ್ರಿಕ್‌ ಗೆಲುವು ಕಂಡಂತಾಗಿದೆ. ಆದರೆ ರನ್‌ರೇಟ್‌ನಲ್ಲಿ ಹಿಂದಿರುವ ಕಾರಣ ದ್ವಿತೀಯ ಸ್ಥಾನದಲ್ಲಿ ಉಳಿದಿದೆ (+1.434).

ಮೊದಲು ಬ್ಯಾಟಿಂಗ್‌ ನಡೆಸಿದ ಪೂರ್ವ ವಲಯ 8 ವಿಕೆಟಿಗೆ 337 ರನ್‌ ಪೇರಿಸಿತು. ಇದರಲ್ಲಿ ರಿಯಾನ್‌ ಪರಾಗ್‌ ಪಾಲು 131 ರನ್‌. ಉತ್ತರ ವಲಯ 45.3 ಓವರ್‌ಗಳಲ್ಲಿ 249ಕ್ಕೆ ಸರ್ವಪತನ ಕಂಡಿತು. ಇದು 3 ಪಂದ್ಯಗಳಲ್ಲಿ ಉತ್ತರ ವಲಯಕ್ಕೆ ಎದುರಾದ 2ನೇ ಸೋಲು.

ಒಂದು ಹಂತದಲ್ಲಿ ಪೂರ್ವ ವಲಯ 57 ರನ್ನಿಗೆ 5 ವಿಕೆಟ್‌ ಉದುರಿಸಿಕೊಂಡು ಪರದಾಡುತ್ತಿತ್ತು. ಆದರೆ ರಿಯಾನ್‌ ಪರಾಗ್‌ ಕ್ರೀಸ್‌ ಇಳಿದೊಡನೆ ಪಂದ್ಯದ ಗತಿಯೇ ಬದಲಾಯಿತು. ಮುನ್ನುಗ್ಗಿ ಬೀಸತೊಡಗಿದ ಅವರು 102 ಎಸೆತಗಳಿಂದ ತಮ್ಮ ಆಮೋಘ ಇನ್ನಿಂಗ್ಸ್‌ ಕಟ್ಟಿದರು. ಸಿಡಿಸಿದ್ದು ಬರೋಬ್ಬರಿ 11 ಸಿಕ್ಸರ್‌ ಹಾಗೂ 5 ಫೋರ್‌.

ಪರಾಗ್‌ ಅವರಿಗೆ ಕೀಪರ್‌ ಕುಮಾರ ಕುಶಾಗ್ರ ಉತ್ತಮ ಬೆಂಬಲವಿತ್ತರು. ಆದರೆ ಕುಶಾಗ್ರ ಎರಡೇ ರನ್ನಿನಿಂದ ಶತಕ ವಂಚಿತರಾಗಬೇಕಾಯಿತು. ಅವರ 98 ರನ್‌ 87 ಎಸೆತಗಳಿಂದ ಬಂತು (8 ಬೌಂಡರಿ, 4 ಸಿಕ್ಸರ್‌). ಪರಾಗ್‌-ಕುಶಾಗ್ರ ಜೋಡಿಯಿಂದ 7ನೇ ವಿಕೆಟಿಗೆ 30.1 ಓವರ್‌ಗಳಿಂದ 235 ರನ್‌ ಒಟ್ಟುಗೂಡಿತು.

ಬೌಲಿಂಗ್‌ನಲ್ಲೂ ಮಿಂಚಿದ ಪರಾಗ್‌ 57 ರನ್‌ ನೀಡಿ 4 ವಿಕೆಟ್‌ ಕಿತ್ತರು. ಉತ್ತರ ವಲಯ ಪರ ಮನ್‌ದೀಪ್‌ ಸಿಂಗ್‌ 50 ರನ್‌, ಅಭಿಷೇಕ್‌ ಶರ್ಮ 44, ಶುಭಂ ರೋಹಿಲ್ಲ 41 ಹಾಗೂ ಹಿಮಾಂಶು ರಾಣಾ 40 ರನ್‌ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next