Advertisement

ಹಲ್ಲಿನ ಸೋಂಕು: ಅವಗಣನೆ ಸಲ್ಲದು 

07:05 AM Jul 23, 2017 | |

ಹಲ್ಲಿನ  ಹುಳುಕು ಮೇಲ್ಮೆ„ ಪದರ (ಎನಾಮಲ್‌)ವನ್ನು ಆವರಿಸಿ ಒಳಮುಖವಾಗಿ ಅಂಟಿಕೊಳ್ಳುವುದು ಅರಿವಿಗೆ ಬಾರದೆ ಇರಬಹುದು. ಒಳಪದರದ ನರವನ್ನು ಅತಿಕ್ರಮಿಸಿದಾಗ ನೋವಿನ ಅಭಾಸವಾಗಿ ತೊಂದರೆ ಕೊಡುತ್ತದೆ. ತತ್‌ಕ್ಷಣ ನೋವು ನಿವಾರಕ ಮಾತ್ರೆಯನ್ನು ತಿಂದು ಬಿಡುವುದು ಒಂದು ಸಾಮಾನ್ಯ ಅಭ್ಯಾಸ. ಹಲ್ಲುಗಳನ್ನು ಸರಿಯಾಗಿ ಪರಿಶೀಲಿಸದೆ ಅಥವಾ ಚಿಕಿತ್ಸೆ  ನೀಡದೇ ಇದ್ದರೆ ಉಂಟಾಗಬಹುದಾದ ತೊಂದರೆಗಳು ಹಲವು. ಕೆಲವೊಮ್ಮೆ ಅಸಾಧ್ಯವಾದ ನೋವು ಉಂಟಾಗಿ ಬಾವು ಕಾಣಿಸಿಕೊಳ್ಳಬಹುದು. ಈ ಜಾಗದಲ್ಲಿ ಕೀವು ಉಂಟಾಗಿ, ಹತ್ತಿರದ ಜಾಗವನ್ನು ಆವರಿಸಿಕೊಳ್ಳಬಹುದು. ಸೂಕ್ಷ್ಮಾಣುಗಳ ಪ್ರಭಾವದಿಂದ ತತ್‌ಕ್ಷಣವೇ ಬಾವಿನ ಪ್ರಮಾಣ ಗಾತ್ರವು ಹಿರಿದಾಗಬಹುದು.

Advertisement

ಇಂತಹ ಸಮಯದಲ್ಲಿ ಸರಿಯಾದ ಪರೀಕ್ಷೆ ಮಾಡಿ ತಕ್ಕ ಚಿಕಿತ್ಸೆಯನ್ನು ಕೊಡತಕ್ಕದ್ದು. ಇಲ್ಲವಾದಲ್ಲಿ ಈ ಕೆಳಗೆ ಕೊಟ್ಟಿರುವ ತೊಂದರೆಗಳು ಉಲ್ಬಣಗೊಳ್ಳುವ ಸಂದರ್ಭಗಳು ಇರುತ್ತವೆ. 
1. ಹಲ್ಲಿನ ಸೋಂಕು ದವಡೆಗೆ ವಿಸ್ತರಿಸಿ ಅಲ್ಲಿ ಊತವನ್ನು ಉಂಟು ಮಾಡುತ್ತವೆ. ಇದರಿಂದ ಸೆಳೆತದಿಂದ ಕೂಡಿದ ನೋವು ಉಂಟಾಗಬಹುದು.
2.ದವಡೆಯ ಸ್ಥಳೀಯ ಸೋಂಕು ಪೂರ್ಣ ದವಡೆಯಲ್ಲಿ ಹರಡಬಹುದು.
3. ಕೀವು ನಾಳ (fistulous tract) ಬಾಯಿಯ ಒಳಗೆ ಅಥವಾ ಹೊರ ದವಡೆಯಲ್ಲಿ ಪ್ರಾರಂಭವಾಗಬಹುದು.
4. ಒಳದವಡೆ ಅಥವಾ ಹೊರದವಡೆಯಲ್ಲಿ ಊತ ಉಂಟಾಗಬಹುದು (Cellulitis)
5. ಸೋಂಕು ರಕ್ತದಲ್ಲಿ ಹರಡಬಹುದು ಮತ್ತು ಜ್ವರ ಕಾಣಿಸಬಹುದು.
6. ಆಳವಾಗಿ ಸೋಂಕು ಒಂದು ಸ್ಥಳದಿಂದ ಇನ್ನೊಂದಕ್ಕೆ ಹರಡಬಹುದು.
7. ಮೆದುಳು ಜ್ವರ ಕೂಡ ಕಾಣಿಸಬಹುದು.
8. ಕೆಳಭಾಗದ ಹರಡುವಿಕೆಯಿಂದ ಕುತ್ತಿಗೆ ಮತ್ತು ಶ್ವಾಸಕೋಶದ ಪೊರೆಯನ್ನು ಆವರಿಸಬಹುದು.

ಪರಿಶೀಲನೆ ಹೇಗೆ?
ಎಕ್ಸ್‌-ರೇ, ಸಿ.ಟಿ. ಸ್ಕಾ éನ್‌ ಮಾಡುವುದರಿಂದ ಸೋಂಕಿನ ಹರಡುವಿಕೆಯನ್ನು ಪರಿಶೀಲಿಸಬಹುದು.

ಸೋಂಕು ಹರಡುವ ಪರಿ ಏನು?
ಹಲ್ಲಿನ ಸೋಂಕು ಬೇರಿನ ಮೂಲಕ ದವಡೆಯನ್ನು ಪ್ರವೇಶಿಸಿ ಅಲ್ಲಿ ಒತ್ತಡವುಂಟು ಮಾಡುತ್ತದೆ. ಇದರಿಂದ ದವಡೆಯ ಒಳಭಾಗದಲ್ಲಿ ಏರುಪೇರು ಉಂಟಾಗುತ್ತದೆ. ರಕ್ತ ಸಂಚಾರದಲ್ಲಿ ತೊಡಕು ಉಂಟಾಗಿ ಕೀಟಾಣುಗಳಿಗೆ ಬೆಳೆಯಲು ಸಹಕಾರವಾಗುತ್ತದೆ. (anarobic) . ಕೀವು ಉತ್ಪನ್ನವಾಗಿ ದವಡೆಯ ಮೂಳೆಯು ಸವೆಯಲ್ಪಟ್ಟು ಮುಖದ ಸ್ನಾಯುವಿನ ನಡುವಿನ ಸ್ಥಳದಲ್ಲಿ  ಕೂಡಿಕೊಳ್ಳುತ್ತದೆ. ವ್ಯಕ್ತಿಯ ರೋಗ ನಿರೋಧಕ ಶಕ್ತಿ, ಕೀಟಾಣುವಿನ ಸಂಖ್ಯೆ ಮತ್ತು ಸಾಮರ್ಥ್ಯ, ಸೋಂಕು ಉಂಟಾಗಿರುವ ಜಾಗದ ರಚನೆ ಇವುಗಳನ್ನು ಹೊಂದಿಕೊಂಡು ಕೀವು ಹರಡುತ್ತದೆ.  ಸೋಂಕು ಹರಡುವಾಗ ಕಡಿಮೆ ಪ್ರತಿಬಂಧವುಳ್ಳ ಅಂಗಾಂಶವನ್ನು  ಹಿಂಬಾಲಿಸುತ್ತದೆ. ತುಂಬಿಕೊಂಡ ಕೀವು ದವಡೆಯಿಂದ ಕೆನ್ನೆಗೆ, ಕುತ್ತಿಗೆಯ ಮೇಲ್ಭಾಗಕ್ಕೆ ಅಥವಾ ಕಿವಿಯ ಮುಂಭಾಗಕ್ಕೆ ಹರಡಬಹುದು. ದೀರ್ಘ‌ಕಾಲದ ಸೋಂಕಿನಿಂದ ಕೀವು ಅಲ್ಪ ಪ್ರಮಾಣದಲ್ಲಿ ಸೋಂಕು ನಾಳದ ಮೂಲಕ ಚರ್ಮದ ಹೊರಗೆ ಬರುತ್ತದೆ. ಮತ್ತು ದವಡೆಯ ಮೂಳೆಯ ಸೋಂಕು ಉಂಟಾಗುತ್ತದೆ.

ಸೂಕ್ಷಾಣುಗಳೇನು?
aerobic cocci ಬ್ಯಾಕ್ಟೀರಿಯಾದಲ್ಲಿ  gram positive cocci , ಮುಖ್ಯವಾಗಿ streptococcus ,ಜಾತಿಯವು aerobic cocci  peptostrepto coccus; bacterioids. ಶೀಘ್ರವಾಗಿ ಹರಡುವ ಸೋಂಕಿನಲ್ಲಿ ಅಲ್ಪ ಸಮಯದಲ್ಲಿಯೇ ಮುಖ ಮತ್ತು ಕುತ್ತಿಗೆಯ ಬಾವು ಕಾಣಿಸಿಕೊಂಡು, ಬಾಯಿ ತೆರೆಯಲು, ನುಂಗಲು ಕಷ್ಟವಾಗುವ ಪರಿಸ್ಥಿತಿ ಉಂಟಾಗಬಹುದು.  ಇದರೊಂದಿಗೆ ಜ್ವರವೂ  ಕಾಣಿಸಿಕೊಳ್ಳಬಹುದು ಕೆಳಭಾಗದ ಹರಡುವಿಕೆಯಿಂದ ಕುತ್ತಿಗೆಯಲ್ಲಿ ಬಾವು ಕಾಣಿಸಿಕೊಂಡು ಸ್ವರದಲ್ಲಿ ಏರುಪೇರು ಉಂಟಾಗಬಹುದು. ಮುಂದಿನ ಹಂತದ ಸೋಂಕಿನಲ್ಲಿ ಉಸಿರಾಟವಾಡಲು ಅಡ್ಡಿಯಾಗಬಹುದು. ಇಂತಹ ಸಮಯದಲ್ಲಿ ಅತಿ ಶೀಘ್ರವಾಗಿ ರೋಗಿಗೆ ಶಸ್ತ್ರ ಚಿಕಿತ್ಸೆಯ ಮೂಲಕ ಕುತ್ತಿಗೆಯ ಒತ್ತಡವನ್ನು ಕಡಿಮೆ ಮಾಡಿ ಉಸಿರಾಟಕ್ಕಾಗಿ ನಾಳವನ್ನು ಒಳಹಾಯಿಸಬೇಕಾಗಬಹುದು. 

Advertisement

ಮುಖದ ಸೋಂಕು ದವಡೆಯಿಂದ ಮೇಲಕ್ಕೆ ಹರಡಿ ಕಣ್ಣನ್ನು ಆವರಿಸಬಹುದು ಇದರಿಂದ ಕಣ್ಣಿನ ದೃಷ್ಟಿಗೆ ಹಾನಿಯುಂಟಾಗುವ ಸಾಧ್ಯತೆ ಇದೆ.  ಮೇಲ್ಮುಖವಾಗಿ ಹರಡುವ ಸೋಂಕು ರಕ್ತನಾಳದ ಮೂಲಕ ಮೆದುಳಿಗೆ ಹರಡಬಹುದು. ಇದರಿಂದ ಮೆದುಳು ಜ್ವರ ಕಾಣಿಸಿಕೊಂಡು ಮಾರಣಾಂತಿಕವಾಗುವ ಸಾಧ್ಯತೆಗಳಿವೆ. (Cavernous Sinus thrombosis).

ಚಿಕಿತ್ಸೆಯೇನು?
ಸ್ಥಳೀಯ ಸೋಂಕು ಅಥವಾ ಕೀವು ಆಗಿದ್ದಲ್ಲಿ ಹುಳುಕಾದ ಕೆಟ್ಟ ಹಲ್ಲನ್ನು ಕೀಳಬೇಕಾಗುತ್ತದೆ. ಮತ್ತು ಕೀವು ಹೊರಹಾಯಿಸಲಾಗುತ್ತದೆ. ಆ್ಯಂಟಿ ಬಯೋಟಿಕ್‌ ಔಷಧಿಯನ್ನು ನೀಡಲಾಗುತ್ತದೆ.ಸೋಂಕು ಆಳವಾಗಿ ಹರಡುವ ಸ್ಥಿತಿಯಲ್ಲಿದ್ದಲ್ಲಿ ರೋಗಿಯನ್ನು ಆಸ್ಪತ್ರೆಯಲ್ಲಿ ದಾಖಲು ಮಾಡಿ ಆ್ಯಂಟಿಬಯೋಟಿಕ್‌ ಮದ್ದನ್ನು ನೀಡಲಾಗುತ್ತದೆ ಮತ್ತು ಅರಿವಳಿಕೆ ನೀಡಿ ತುರ್ತಾದ ಶಸ್ತ್ರಚಿಕಿತ್ಸೆಯ ಮೂಲಕ ಕೀವನ್ನು ಹೊರತೆಗೆಯಲಾಗುತ್ತದೆ. ಅನಂತರ ಸಂಗ್ರಹವಾಗುವ ಕೀವನ್ನು ಹೊರಬಿಡಲು ಒಂದು ನಾಳ (drain) ವನ್ನು ಹೊಲಿದಿಡಲಾಗುತ್ತದೆ. ಕೀವನ್ನು ಸೂಕ್ಷ್ಮಾಣು ಪರೀಕ್ಷೆಗೊಳಪಡಿಸಲಾಗುತ್ತದೆ. (Pus culture & Sensitivity) ನಿಖರವಾದ ಆ್ಯಂಟಿಬಯೋಟಿಕ್‌ ಅನ್ನು ಈ ಪರೀಕ್ಷೆಯ ಮೂಲಕ ಕಂಡುಹಿಡಿದು, ರೋಗಿಗೆ ಚುಚ್ಚುಮದ್ದು ನೀಡಲಾಗುತ್ತದೆ. ಸೋಂಕು ಕಡಿಮೆಯಾಗಿ ಕೀವು ಉತ್ಪನ್ನವಾಗುವುದು ಸ್ಥಗಿತಗೊಂಡಾಗ  ನಾಳವನ್ನು ತೆಗೆಯಲಾಗುತ್ತದೆ.

ಮುಖ ಮತ್ತು ಕುತ್ತಿಗೆಯ ಸೋಂಕಿನ ಕಾರಣಗಳು
1. ಹಲ್ಲಿನ ಹುಳುಕು
2. ವಸಡಿನ ಸೋಂಕು
3. ಹಲ್ಲು ಮುರಿತ, ಗಾಯ
4. ಇಂಪ್ಲಾಂಟ್‌ ಸೋಂಕು
5. ಸೋಂಕು ಪೀಡಿತ ಸೂಜಿಗಳು
6. ಮುಖದ ಶಸ್ತ್ರಚಿಕಿತ್ಸೆಯ 
 ಸೋಂಕು
7. ಸೂಕ್ಷ್ಮಾಣು 
 ಬ್ಯಾಕ್ಟೀರಿಯಾ
8. ಶಿಲೀಂದ್ರ
9. ವೈರಸ್‌ನ ಸೋಂಕು.

ಸೋಂಕು ಹರಡುವುದನ್ನು ಹೇಗೆ  ತಡೆಗಟ್ಟಬಹುದು?
1. ಹಲ್ಲಿನ ಹುಳುಕನ್ನು ನಿರ್ಲಕ್ಷಿಸದೆ ಸೂಕ್ತ ಸಮಯದಲ್ಲಿ ಸರಿಯಾದ ಚಿಕಿತ್ಸೆ  ಪಡೆಯುವುದು.
2. ಬಾವು ಅಥವಾ ಹಲ್ಲಿನ ನೋವು ಬಂದಲ್ಲಿ  ತತ್‌ಕ್ಷಣ ವೈದ್ಯರನ್ನು ಭೇಟಿ ಮಾಡುವುದು.
3. ಸಕ್ಕರೆ ಕಾಯಿಲೆ ಇರುವವರು ಸರಿಯಾದ ಆಹಾರ ಕ್ರಮವನ್ನು ಅನುಸರಿಸಿ ರಕ್ತದ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿ ಇರಿಸುವುದು.
4. ಗರ್ಭಿಣಿಯರು ಆರಂಭದಲ್ಲಿಯೇ ಹಲ್ಲಿನ ಪರಿಶೀಲನೆ ಮತ್ತು ಚಿಕಿತ್ಸೆಯನ್ನು ಪಡೆಯುವುದು. 
5. ಬಾಯಿ ಮತ್ತು ಹಲ್ಲಿನ ಆರೋಗ್ಯವನ್ನು ಕಾಪಾಡುವುದು.
6. ಉತ್ತಮ ಪೋಷಕಾಂಶವುಳ್ಳ, ನಾರುಳ್ಳ ಆಹಾರವನ್ನು ಸೇವಿಸುವುದು.
7. ಮಕ್ಕಳಲ್ಲಿ ಹುಳುಕಾದ ಹಾಲು ಹಲ್ಲುಗಳಿಗೆ ತತ್‌ಕ್ಷಣ ಚಿಕಿತ್ಸೆ ನೀಡುವುದು.
8. ಮಕ್ಕಳ ಹಲ್ಲುಗಳನ್ನು ಪೋಷಕರು ಆಗಾಗ ಪರಿಶೀಲಿಸುವುದು.

– ಡಾ| ಚಿತ್ರಾ ಎ.,   
ರೀಡರ್‌, ಓರಲ್‌ ಆ್ಯಂಡ್‌ ಮ್ಯಾಕ್ಸಿಲೋಫೇಶಿಯಲ್‌ 
ಸರ್ಜರಿ ವಿಭಾಗ, ಎಂಸಿಒಡಿಎಸ್‌, 
ಮಣಿಪಾಲ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next