Advertisement

ಡಿನೋಟಿಫಿಕೇಶನ್‌: ಸರ್ಕಾರಕ್ಕೆ ತಿರುಗುಬಾಣ

06:35 AM Sep 14, 2017 | Team Udayavani |

ಬೆಂಗಳೂರು: ಶಿವರಾಮ ಕಾರಂತ ಬಡಾವಣೆಯ ಡಿ ನೋಟಿಫಿಕೇಶನ್‌ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರನ್ನು ವಿಚಾರಣೆಗೆ ಗುರಿಪಡಿಸುವ ರಾಜ್ಯಸರ್ಕಾರಕ್ಕೆ ಈ ಪ್ರಕರಣ ತಿರುಗು ಬಾಣವಾಗಲಿದೆಯೇ ಎನ್ನುವ ಪ್ರಶ್ನೆ ಉದ್ಭವಿಸಿದೆ. ಡಿನೋಟಿಫಿಕೇಶನ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿರುವ ವಾದ-ಪ್ರತಿವಾದಗಳಲ್ಲಿ ವ್ಯಕ್ತವಾಗುತ್ತಿರುವ ಸಂಗತಿಗಳು ಸರ್ಕಾರವನ್ನೇ  ಇಕ್ಕಟ್ಟಿಗೆ ಸಿಲುಕಿಸಲಿದೆಯೇ ಎಂಬ ಅನುಮಾನ ಮೂಡಿಸಿದೆ.

Advertisement

ಮಾಜಿ ಸಿಎಂ ಯಡಿಯೂರಪ್ಪ ಡಿನೋಟಿಫಿಕೇಶನ್‌ ಕುರಿತ ಲೋಪದೋಷಗಳನ್ನು ಎಸಿಬಿ ನ್ಯಾಯಾಲಯದ ಗಮನಕ್ಕೆ ತಂದ ಬೆನ್ನಲ್ಲೇ ಇದಕ್ಕೆ ಪ್ರತಿಯಾಗಿ ಯಡಿಯೂರಪ್ಪ ಪರ ವಕೀಲರು ರಾಜ್ಯಸರ್ಕಾರವೇ  1300 ಎಕರೆ ಜಮೀನು ಶಿವಾರಮ ಕಾರಂತ ಬಡವಾಣೆಯಲ್ಲಿ ಡಿನೋಟಿಫಿಕೇಶನ್‌ ಮಾಡಿದೆ ಎಂದು ಗಮನಸೆಳೆದಿದೆ.ಅದಕ್ಕೆ ಪೂರಕವಾಗಿ  ಕೆಲ ಪ್ರಮುಖ ದಾಖಲೆಗಳನ್ನು ಸಲ್ಲಿಸಿರುವುದು ವಿಚಾರಣೆ ಕುತೂಹಲ ಕೆರಳುವಂತೆ ಮಾಡಿದೆ.

ಬುಧವಾರದ ವಿಚಾರಣೆ ವೇಳೆ  ಯಡಿಯೂರಪ್ಪ ಪರ ವಾದಿಸಿದ ಹಿರಿಯ ವಕೀಲ ಸಿ.ವಿ ನಾಗೇಶ್‌ ರಾಜ್ಯ ಸರ್ಕಾರವೇ ಸಾವಿರಾರು ಎಕರೆ ಡಿನೋಟಿಫಿಕೇಶನ್‌ ಮಾಡಿರುವ ವಿಚಾರವನ್ನು ನ್ಯಾಯಾಪೀಠದ ಗಮನಕ್ಕೆ ತಂದರು. ಅಷ್ಟೇ ಅಲ್ಲ ಕಾಂಗ್ರೆಸ್‌ ಶಾಸಕ ಭೈರತಿ ಬಸವರಾಜ್‌ ಅವರಿಗೆ ಸೇರಿದ 30 ಎಕರೆ ಜಮೀನನ್ನೂ ಡಿನೋಟಿಫಿಕೇಶನ್‌ ಮಾಡಿದೆ ಎಂದು ಆರೋಪಿಸಿದ್ದಾರೆ.ಜೊತೆಗೆ ಪ್ರಭಾವಿ ಸಚಿವರ ಕೈವಾಡವಿರುವುದನ್ನೂ ಪ್ರಸ್ತಾಪಿಸಿರುವುದು ಪ್ರಕರಣದ ವಿಚಾರಣೆಯ ತೀವ್ರತೆ ಹೆಚ್ಚಿಸಿದೆ.

ತಮ್ಮ ಕಕ್ಷಿದಾರ ಯಡಿಯೂರಪ್ಪ  250 ಎಕರೆ ಡಿನೋಟಿಫಿಕೇಶನ್‌ ಮಾಡಿ ಅಕ್ರಮ ಎಸಗಿದ್ದರಿಂದ ಬಡಾವಣೆ ನಿರ್ಮಾಣವಾಗದೇ ಇರಲು ಕಾರಣ  ಎಂದು ಎಸಿಬಿ ವಾದಿಸುತ್ತಿದೆ. ಆದರೆ, ಹಾಲಿ ರಾಜ್ಯಸರ್ಕಾರ  250 ಎಕರೆಯನ್ನು ಹೊರತು ಪಡಿಸಿ ಉಳಿದ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಬಡವಾಣೆ ನಿರ್ಮಾಣ ಮಾಡದೇ ಅಕ್ರಮ ಎಸಗಿದೆ ಎಂದು ಯಡಿಯೂರಪ್ಪ ಪರ ವಕೀಲರು ಪ್ರತಿ ವಾದಿಸಿದ್ದು ವಿಚಾರಣೆ ದಿನದಿಂದ ದಿನಕ್ಕೆ ಕುತೂಹಲ ಘಟ್ಟ ತಲುಪುತ್ತಿದೆ.

ಬುದವಾರ ಕೆಲವು ದಾಖಲೆಗಳೊಂದಿಗೆ ವಾದ ಮಂಡಿಸಿದ ಯಡಿಯೂರಪ್ಪ ಪರ ವಕೀಲ ಸಿ.ವಿ ನಾಗೇಶ್‌ ಅವರು ಶಿವರಾಮ ಕಾರಂತ ಬಡವಾಣೆ ಪ್ರಾಥಮಿಕ ಅಧಿಸೂಚನೆ ರದ್ದುಕೋರಿ 2013ರ ಮೇ ತಿಂಗಳಲ್ಲಿ ಹೈಕೋರ್ಟ್‌ಗೆ ಸಲ್ಲಿಕೆಯಾಗಿದ್ದ ರಿಟ್‌ ಅರ್ಜಿ  2014ರ ನವೆಂಬರ್‌ನಲ್ಲಿ ಇತ್ಯರ್ಥಗೊಂಡು ಪ್ರಾಥಮಿಕ ಅಧಿಸೂಚನೆ ರದ್ದಾಗುತ್ತದೆ. ಸರ್ಕಾರಕ್ಕೆ ಬಡವಾಣೆ ನಿರ್ಮಾಣ ಪೂರ್ಣಗೊಳಿಸುವ ಹಿತಾಸಕ್ತಿಯಿದ್ದಿದ್ದರೆ ಒಂದು ವರ್ಷ 6 ತಿಂಗಳ ಅವಧಿಯಲ್ಲಿ ಅಂತಿಮ ಅಧಿಸೂಚನೆ ಹೊರಡಿಸಿ ಬಡವಾಣೆ ನಿರ್ಮಾಣಕ್ಕೆ ಮುಂದಾಗಬಹುದಿತ್ತು. ಆದರೆ ರಾಜ್ಯಸರ್ಕಾರ ಡಿನೋಟಿಫಿಕೇಶನ್‌ ಮಾಡುವ ಸಲುವಾಗಿಯೇ ಅಂತಿಮ ಅಧಿಸೂಚನೆ ಹೊರಡಿಸಲಿಲ್ಲವೆಂದು ವಾದದಲ್ಲಿ ತಿಳಿಸಿದರು.

Advertisement

ಬದಲಿಗೆ  2014ರ ಲೋಕಸಭಾ ಚುನಾವಣೆಯ ಏಪ್ರಿಲ್‌ – ಮೇ ತಿಂಗಳಲ್ಲಿ 200ಕ್ಕೂ ಹೆಚ್ಚು ಭೂ ಮಾಲೀಕರ ಜಮೀನುಗಳು ಸೇರಿದಂತೆ ನವೆಂಬರ್‌ ಅಂತ್ಯದೊಳಗೆ 1300 ಎಕರೆ ಜಮೀನು ಡಿನೋಟಿಫೈ ಮಾಡಿದೆ. ಇದರಲ್ಲಿ ರಾಜ್ಯಸರ್ಕಾರದ ಪ್ರಭಾವಿ ಸಚಿವರೊಬ್ಬರು ಸತ್ತವರ ಹೆಸರಿನಲ್ಲಿ ಸಲ್ಲಿಸಿರುವ ಅರ್ಜಿ ಸೇರಿದಂತೆ ಶಾಸಕ ಹಾಗೂ ಬಿಡಿಎ ಸದಸ್ಯ ಭೈರತಿ ಬಸವರಾಜು ಅವರ ಜಮೀನುಗಳೂ ಸೇರಿವೆ. ಈ ಅಕ್ರಮವನ್ನು ಎಸಿಬಿ ಯಾಕೆ ತನಿಖೆ ನಡೆಸುತ್ತಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಇನ್ನು ಸಿಎಂ ಯಡಿಯೂರಪ್ಪನವರಿಗೆ ತಮ್ಮ ಜಮೀನು ಭೂ ಸ್ವಾಧೀನ ಪ್ರಕ್ರಿಯೆಯಿಂದ ಕೈ ಬಿಡುವಂತೆ ಆಶಾಪರ್ದೇಸಿ ಎಂಬುವವರು ಕಾನೂನುಬದ್ಧವಾಗಿಯೇ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಎಸಿಬಿ ನ್ಯಾಯಪೀಠಕ್ಕೆ ಸುಳ್ಳು ಮಾಹಿತಿ ನೀಡಿದೆ. ಅಲ್ಲದೆ ಯಡಿಯೂರಪ್ಪ ವಿರುದ್ಧ ದಾಖಲಾದ ದೂರನ್ನು 2ಫೈಲ್‌ಗ‌ಳನ್ನಾಗಿ ವಿಭಾಗಿಸಿ ತನಿಖೆ ನಡೆಸಲು ಮುಂದಾಗಿದೆ. ಉದ್ದೇಶಪೂರ್ವಕವಾಗಿ 10ನೇ ಫೈಲ್‌ ತೆಗೆದುಕೊಂಡು ಮೊದಲ ಎಫ್ಐಆರ್‌ ಹಾಕಿದೆ, ಬಳಿಕ ದೂರುದಾರರ ಹೇಳಿಕೆ ಹಾಗೂ ಮಾಹಿತಿ ಪಡೆದುಕೊಳ್ಳದೆಯೇ ಎರಡನೇ ಎಫ್ಐಆರ್‌ ಹಾಕಿದ್ದು ಕಾನೂನು ಬಾಹಿರವಾಗಿದೆ. ಕೇವಲ ಒಂದೇ ದೂರಿನ ಎಫ್ಐಆರ್‌ ಝೆರಾಕ್ಸ್‌ ಇಟ್ಟುಕೊಂಡು ಅರ್ಜಿದಾರರ ವಿರುದ್ಧ  ಕಾನೂನುಬಾಹಿರವಾಗಿ ದಾಖಲಿಸಿರುವ ಎಫ್ಐಆರ್‌ಗಳಿಗೆ ತಡೆಯಾಜ್ಞೆ ನೀಡಬೇಕು ಎಂದು ಕೋರಿದರು.

ಈ ವಾದ ಆಲಿಸಿದ ನ್ಯಾಯಮೂರ್ತಿ ಅರವಿಂದಕುಮಾರ್‌ ಅವರಿದ್ದ ಏಕಸದಸ್ಯ ಪೀಠ ಗುರುವಾರಕ್ಕೆ (ಸೆ.14)ವಿಚಾರಣೆ ಮುಂದೂಡಿತು.

Advertisement

Udayavani is now on Telegram. Click here to join our channel and stay updated with the latest news.

Next