Advertisement
ಮೊದಲ ಗೇಮ್ ಕಳೆದು ಕೊಂಡರೂ ವಿಚಲಿತರಾಗದ ವಿಶ್ವದ ಆರನೇ ರ್‍ಯಾಂಕಿನ ಶ್ರೀಕಾಂತ್ ಅವರು ವಿಶ್ವದ 14ನೇ ರ್‍ಯಾಂಕಿನ ಡ್ಯಾನ್ ಅವರನ್ನು 18-21, 21-17, 21-16 ಗೇಮ್‌ಗಳಿಂದ ಉರುಳಿಸಿ ಮುನ್ನಡೆದರು. ಎರಡು ಬಾರಿಯ ಒಲಿಂಪಿಕ್ ಚಿನ್ನ ಮತ್ತು ಐದು ಬಾರಿಯ ವಿಶ್ವ ಚಾಂಪಿಯನ್ ಆಗಿರುವ ಡ್ಯಾನ್ ಈಗಲೂ ಶ್ರೇಷ್ಠ ಆಟವಾಡುತ್ತಿದ್ದಾರೆ. ಅವರಿಬ್ಬರು 5 ಬಾರಿ ಮುಖಾಮುಖೀಯಾಗಿದ್ದು ಈ ಹಿಂದಿನ ಹೋರಾಟದಲ್ಲಿ (2016ರ ರಿಯೋ ಒಲಿಂಪಿಕ್ಸ್‌ನ ಕ್ವಾರ್ಟರ್‌ಫೈನಲ್ ಪಂದ್ಯ) ಡ್ಯಾನ್ ಜಯಭೇರಿ ಬಾರಿಸಿದ್ದರು. 2014ರಲ್ಲಿ ಡ್ಯಾನ್ ಅವರನ್ನು ಶ್ರೀಕಾಂತ್ ಮೊದಲ ಬಾರಿ ಸೋಲಿಸಿ ಚೀನ ಓಪನ್‌ನ ಪ್ರಶಸ್ತಿ ಎತ್ತಿದ್ದರು. ಶ್ರೀಕಾಂತ್ ಅವರ ಕ್ವಾರ್ಟರ್‌ಫೈನಲ್ ಎದುರಾಳಿ ಸಮೀರ್ ವರ್ಮ ತನ್ನ ಪಂದ್ಯದಲ್ಲಿ ಇಂಡೋನೇಶ್ಯದ ಜೋನಾಥನ್ ಕ್ರಿಸ್ಟಿ ಅವರನ್ನು ಕೆಡಹಿದ್ದರು.
ವನಿತಾ ಸಿಂಗಲ್ಸ್‌ನಲ್ಲಿ ಸೈನಾ ನೆಹ್ವಾಲ್ ವಿಶ್ವದ ಎರಡನೇ ರ್‍ಯಾಂಕಿನ ಅಕಾನೆ ಯಮಗುಚಿ ಅವರನ್ನು 21-15, 21-17 ಗೇಮ್‌ಗಳಿಂದ ಕೆಡಹಿ ಕ್ವಾರ್ಟರ್‌ಫೈನಲ್ ತಲುಪಿದ್ದಾರೆ. ಕಳೆದ 4 ವರ್ಷಗಳಲ್ಲಿ ಇದು ಸೈನಾ ಯಮಗುಚಿ ವಿರುದ್ಧ ಮೊದಲ ಗೆಲುವು ಆಗಿದೆ. ಕ್ವಾರ್ಟರ್‌ಫೈನಲ್‌ನಲ್ಲಿ ಸೈನಾ ಅವರು ಎಂಟನೇ ಶ್ರೇಯಾಂಕದ ನವೋಮಿ ಒಕುಹಾರ ಅವರನ್ನು ಎದುರಿಸಲಿದ್ದಾರೆ. ವನಿತಾ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಎನ್. ಸಿಕ್ಕಿ ರೆಡ್ಡಿ ಅವರು ಅಗ್ರ ಶ್ರೇಯಾಂಕದ ಯೂಕಿ ಫುಕುಶಿಮಾ ಮತ್ತು ಸಯಾಕಾ ಹಿರೋಟಾ ಅವರ ಸವಾಲಿಗೆ ಉತ್ತರಿಸಲಿದ್ದಾರೆ.