ಕೋಲಾರ: ಸರ್ಕಾರದ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ನಿಟ್ಟಿನಲ್ಲಿ ಶನಿವಾರ ಜಿಲ್ಲೆಗೆ ಆಗಮಿಸಿದ್ದ ಸಣ್ಣ ನೀರಾವರಿ ಇಲಾಖೆ ಸಚಿವ ಜೆ.ಸಿ.ಮಾಧುಸ್ವಾಮಿ ರೈತ ಮುಖಂಡರಿಂದ ವಿವಿಧ ಸಮಸ್ಯೆಗಳ ಕುರಿತ ಮನವಿ ಸ್ವೀಕರಿಸದೆ ತೆರಳಿದ ಹಿನ್ನೆಲೆಯಲ್ಲಿ ತಾಲೂಕಿನ ರಾಮಸಂದ್ರ ಗಡಿಯಲ್ಲಿ ರೈತಪರ ಮುಖಂಡರು ಪ್ರತಿಭಟನೆ ನಡೆಸಿ, ಸಚಿವರ ರಾಜೀನಾಮೆಗೆ ಆಗ್ರಹಿಸಿದರು.
ಜಿಲ್ಲೆಯ ಮುಳಬಾಗಿಲು ಹಾಗೂ ಕೋಲಾರ ದಲ್ಲಿನ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಲುವಾಗಿ ಶನಿವಾರ ಸಚಿವ ಜೆ.ಸಿ.ಮಾಧುಸ್ವಾಮಿ ಜಿಲ್ಲಾ ಪ್ರವಾಸ ಕೈಗೊಂಡಿದ್ದರು. ಹಾಗಾಗಿ ಸಚಿವರಿಗೆ ಮನವಿ ಸಲ್ಲಿಸುವ ನಿಟ್ಟಿನಲ್ಲಿ ರೈತ ಸಂಘಟನೆಗಳ ಮುಖಂಡರು ರಾಮಸಂದ್ರ ಗಡಿಯಲ್ಲಿ ಕಾದು ನಿಂತಿದ್ದರು.
ಆದರೆ, ಸಚಿವ ಮಾಧುಸ್ವಾಮಿ ರೈತಸಂಘಟನೆಗಳ ಮುಖಂಡರಿಂದ ಮನವಿ ಸ್ವೀಕರಿಸಲು ನಿರಾಕರಿಸಿದ್ದಲ್ಲದೆ ಕನಿಷ್ಠ ಕಾರಿನಿಂದಲೂ ಕೆಳಗಿಳಿದು ಮಾತನಡದೆ ಹಾಗೆಯೇ ಹೊರಟು ಹೋಗಿದ್ದಾರೆ. ಇದರಿಂದ ಆಕ್ರೋಶಗೊಂಡ ರೈತ ಸಂಘಗಳ ಮುಖಂಡರು ಸಚಿವರು ಈ ರೀತಿ ಅಗೌರವದಿಂದ ನಡೆದು ಕೊಂಡಿರುವ ಕ್ರಮ ಸರಿಯಲ್ಲವೆಂದು ಕಿಡಿಕಾರಿದರು.
ಇದನ್ನೂ ಓದಿ:- ಅಂತರ್ಜಲ ಮಾಹಿತಿ ರೈತರ ಬೆರಳ ತುದಿಗೆ
ಕೆ.ಸಿ.ವ್ಯಾಲಿ ಯೋಜನೆಯಡಿ ಜಿಲ್ಲೆಗೆ ನೀರು ಪ್ರವೇಶಿಸುವ ಜಾಗದ ಸಮೀಪ ಹೈಕೋರ್ಟ್ ಆದೇಶ ಉಲ್ಲಂಘಿಸಿ ಕೋಲಾರ, ಹೊಸಕೋಟೆ ಸೇರಿ ವಿವಿಧ ಸ್ಥಳೀಯ ಸಂಸ್ಥೆಯವರು ತ್ಯಾಜ್ಯವನ್ನು ಕ್ವಾರಿಯಲ್ಲಿ ಸುರಿಯುತ್ತಿದ್ದು, ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ರೈತ ಮುಖಂಡರು ಸಚಿವರಿಗೆ ಮನವಿ ನೀಡಲು ಕಾದಿದ್ದರು.
ಅಲ್ಲದೆ, ಕೆ.ಸಿ.ವ್ಯಾಲಿ ಹರಿಯುತ್ತಿರುವ ಭಾಗಳಲ್ಲಿ ಬೆಳೆಗಳು ರೋಗಗಳಿಗೆ ಒಳಗಾಗುತ್ತಿರುವ ಆತಂಕ ಎದುರಾಗಿದ್ದು, ಅದನ್ನು ವಿಶೇಷ ತಂಡರಚಿಸುವ ಜತೆಗೆ 3ನೇ ಹಂತದ ಶುದ್ಧೀಕರಣಕ್ಕೂ ಹೆಚ್ಚಿನ ಒತ್ತು ನೀಡಬೇಕೆಂದು ಮನವಿ ಸಲ್ಲಿಸಲುನಾವು ಆಗಮಿಸಿದ್ದೆವು. ಅದಕ್ಕೆ ಆಸ್ಪದ ನೀಡದೆ ಅಗೌರವದಿಂದ ಸಚಿವರು ತೆರಳಿದರು ಎಂದು ಅಸಮಧಾನ ವ್ಯಕ್ತಪಡಿಸಿದರು.
ರೈತ ಮುಖಂಡರಾದ ರಾಮುಶಿವಣ್ಣ, ಜಿ. ನಾರಾಯಣಸ್ವಾಮಿ, ಕೆ.ನಾರಾಯಣಗೌಡ,ಈಕಂಬಳ್ಳಿ ಮಂಜುನಾಥ್, ಮೂರಂಡಹಳ್ಳಿ ಶಿವಾರೆಡ್ಡಿ, ಕಲ್ವಮಂಜಲಿ ಶಿವಣ್ಣ, ಕರವೇ ಜಿಲ್ಲಾಧ್ಯಕ್ಷ ಚಂಬೆ ರಾಜೇಶ್ ಮತ್ತಿತರರಿದ್ದರು.