ಹೈದರಾಬಾದ್: ತೆಲಂಗಾಣ ಮಾಜಿ ಉಪಮುಖ್ಯಮಂತ್ರಿ ತಾಟಿಕೊಂಡ ರಾಜಯ್ಯ ಅವರು ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಘಾನ್‌ಪುರ ಕ್ಷೇತ್ರದಿಂದ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಟಿಕೆಟ್ ನಿರಾಕರಿಸಿದ ಬಳಿಕ ಜನಾಂವ್ ನಲ್ಲಿ ತಮ್ಮ ಬೆಂಬಲಿಗರ ಮುಂದೆ ಭಾವುಕರಾದರು.
ಘಾನ್‌ಪುರ ಕ್ಷೇತ್ರದಲ್ಲಿ ರಾಜಯ್ಯ ಅವರು ಹಾಲಿ ಶಾಸಕರಾಗಿದ್ದರೂ, ಬಿಆರ್‌ಎಸ್ ಮುಖ್ಯಸ್ಥ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಮತ್ತೊಬ್ಬ ಹಿರಿಯ ನಾಯಕ ಕಡಿಯಂ ಶ್ರೀಹರಿಯನ್ನು ಕಣಕ್ಕಿಳಿಸಲು ನಿರ್ಧರಿಸಿದ್ದಾರೆ.
ರಾಜಯ್ಯ ಅವರು ಇಂದು ಜನಾಂವ್ ನಲ್ಲಿ ಅಂಬೇಡ್ಕರ್ ಪ್ರತಿಮೆ ಬಳಿ ಬಂದಾಗ ನೆರೆದಿದ್ದ ಬೆಂಬಲಿಗರು, ಜೈ ರಾಜಯ್ಯ, ಜೈ ತೆಲಂಗಾಣ’ ಎಂದು ಘೋಷಣೆ ಕೂಗಿದರು. ಈ ವೇಳೆ ಭಾವುಕರಾದ ತಾಟಿಕೊಂಡ ರಾಜಯ್ಯ ಜನರೆದುರೇ ಕಣ್ಣೀರಿಟ್ಟರು.
ಮೂಲಗಳ ಪ್ರಕಾರ, ಕೆಲ ತಿಂಗಳ ಹಿಂದೆ ಅವರದೇ ಪಕ್ಷದ ಗ್ರಾಮ ಸರಪಂಚ್ ಒಬ್ಬರು ರಾಜಯ್ಯ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು.
ಇದನ್ನೂ ಓದಿ:Shivamogga; ಇದು ಲಾಸ್ಟ್ ಸ್ಟಾಪ್,ನಾಳೆ ಕಾಂಗ್ರೆಸ್ ಗೆ ಸೇರುತ್ತಿದ್ದೇನೆ: ಆಯನೂರು ಮಂಜುನಾಥ್
ಸೋಮವಾರ ಕೆ ಚಂದ್ರಶೇಖರ್ ರಾವ್ ಒಟ್ಟು 119 ಸ್ಥಾನಗಳಿಗೆ 115 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದರು. ಗಜ್ವೇಲ್ ಮತ್ತು ಕಾಮರೆಡ್ಡಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದರು.
ಇನ್ನೇನು ಕೆಲವೇ ತಿಂಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಚುನಾವಣಾ ಆಯೋಗ ಪ್ರಕಟಿಸಬೇಕಿದೆ.