ಲಿಂಗಸುಗೂರು: ಬೇಡ ಜಂಗಮರಿಗೆ ಎಸ್‌ಸಿ ಪ್ರಮಾಣ ಪತ್ರ ನೀಡುವಂತೆ ಒತ್ತಾಯಿಸಿ ವೀರಶೈವ ಜಂಗಮ ಸಮಾಜದ ಮುಖಂಡರು ಎಸಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ಪರಿಶಿಷ್ಟ ಜಾತಿಗೆ ಸೇರಿರುವ ಬೇಡ ಜಂಗಮ ಜಾತಿಯನ್ನು ಸಂವಿಧಾನದ ಪ್ರಕಾರ 341ನೇ ಪರಿಚ್ಛೇದದ ಅಡಿಯಲ್ಲಿ ಸೇರ್ಪಡೆಗೊಳಿಸಲಾಗಿದ್ದು, ಇದಕ್ಕೆ ರಾಷ್ಟ್ರಪತಿಗಳು ಅಂಕಿತ ಹಾಕಿರುತ್ತಾರೆ. ಅದರಂತೆ ಬೇಡ ಜಂಗಮ ಜಾತಿಯ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗೆಜಟಿಯರ್ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರ ಮೇಲಿಂದ ಮೇಲೆ ಅನೇಕ ಸುತ್ತೋಲೆಗಳನ್ನು ಹೊರಡಿಸಿ ಬೇಡ ಜಂಗಮರ ಬಗ್ಗೆ ಅಧ್ಯಯನ ನಡೆಸಲು ಡಾ| ಸ್ವಾಮಿನಾಥನ್ ನೇತೃತ್ವದಲ್ಲಿ ಆಯೋಗ ರಚಿಸಲಾಗಿತ್ತು. ಆಯೋಗವು ಜಂಗಮರ ಬಗ್ಗೆ ಅಧ್ಯಯನ ಮಾಡಿ 1989ರಲ್ಲಿ ಆಯೋಗ ಲಿಂಗಾಯತ ಧರ್ಮದ ಅನುಯಾಯಿಗಳಾದ ಜಂಗಮರೇ ನಿಜವಾದ ಬೇಡ ಜಂಗಮ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ.
ಈ ಆಯೋಗದ ವರದಿಯನ್ನು ಸಮಾಜ ಕಲ್ಯಾಣ ಇಲಾಖೆ ಆಯುಕ್ತರು 2020 ಮಾರ್ಚ್ 8ರಂದು ಆದೇಶ ಹಾಗೂ ಮಾರ್ಗಸೂಚಿಗಳನ್ನು ರಾಜ್ಯದ ಎಲ್ಲ ಜಿಲ್ಲಾಧಿ ಕಾರಿ ಹಾಗೂ ತಹಶೀಲ್ದಾರರಿಗೆ ಆರು ಮಾರ್ಗ ಸೂಚನೆ ನೀಡಿ ಅದರಂತೆ ಜಾತಿ ಪ್ರಮಾಣ ಪತ್ರ ನೀಡಲು ಸೂಚಿಸಿರುತ್ತಾರೆ. ಕಲ್ಯಾಣ ಕರ್ನಾಟಕ ಭಾಗದ ಆರು ಜಿಲ್ಲೆಗಳಲ್ಲಿ ಬೇಡ ಜಂಗಮರು ಹೆಚ್ಚಿನ ಜನಸಂಖ್ಯೆಯಲ್ಲಿದ್ದಾರೆ. ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ತೀರ್ಪಿನಲ್ಲಿ ವೀರಶೈವ ಜಂಗಮರೇ ಬೇಡ ಜಂಗಮರೆಂದು ಆದೇಶ ಹೊರಡಿಸಿರುತ್ತದೆ. ಆದರೆ, ಇಷ್ಟೆಲ್ಲಾ ದಾಖಲೆಗಳು ಇದ್ದರೂ ಅಧಿಕಾರಿಗಳು ಸುತ್ತೋಲೆ ಮತ್ತು ಸಾಕ್ಷಾಧಾರಗಳ ಪ್ರಕಾರ ಎಸ್‌ಸಿ ಪ್ರಮಾಣ ಪತ್ರ ನೀಡುವಲ್ಲಿ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಕೂಡಲೇ ಎಲ್ಲ ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿ ಬೇಡ ಜಂಗಮರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಬೇಕೆಂದು ಸಿಎಂ ಬರೆದ ಮನವಿಯಲ್ಲಿ ಆಗ್ರಹಿಸಿದರು.
ಸಮಾಜದ ಅಧ್ಯಕ್ಷ ಪ್ರಭುಸ್ವಾಮಿ ಅತ್ನೂರು, ಬಸವರಾಜ ಸ್ವಾಮಿ, ಶರಣಬಸವ ಹಿರೇಮಠ, ಶಿವಕುಮಾರ ನಂದಿಕೋಲಮಠ, ಶ್ರೀಕಾಂತ ಮಠದ, ನೀಲಕಂಠಯ್ಯಸ್ವಾಮಿ, ಅಂಗಯ್ಯ ಹಿರೇಮಠ, ಸಂಗಯ್ಯ ಹಿರೇಮಠ, ಮಹೇಶ ನಂದಿಕೋಲಮಠ, ವೀರಭದ್ರಯ್ಯ ಗುಂತಗೋಳ, ಶಿವಕುಮಾರ ಸ್ವಾಮಿ, ಚೆನ್ನಬಸವ ಹಿರೇಮಠ, ಅಮರೇಶ ಗಂಭೀರಮಠ ಸೇರಿದಂತೆ ಇನ್ನಿತರಿದ್ದರು.