ಬಾಗಲಕೋಟೆ: ಮುಳುಗಡೆ ಜಿಲ್ಲೆ ಎಂಬ ಹಣೆಪಟ್ಟಿ ಕಟ್ಟಿಕೊಂಡ ಬಾಗಲಕೋಟೆ ಜಿಲ್ಲೆಯಲ್ಲಿ ಕಳೆದೆರಡು ತಿಂಗಳಿಂದ ಡೆಂಘೀ ಸಾಂಕ್ರಾಮಿಕ ರೋಗದಿಂದ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಜಿಲ್ಲೆಯಾದ್ಯಂತ ನವ್ಹೆಂಬರ್ ಒಂದೇ ತಿಂಗಳಲ್ಲಿ ಬರೋಬ್ಬರಿ 53 ಜನರಿಗೆ ಈ ರೋಗ ದೃಢಪಟ್ಟಿದೆ.
ಜಿಲ್ಲೆಯ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಡೆಂಘೀ ಸಾಂಕ್ರಾಮಿಕ ರೋಗ ತೀವ್ರವಾಗಿ ಹರಡುತ್ತಿದೆ. ಈ ಕುರಿತು ಆರೋಗ್ಯ ಇಲಾಖೆ ಸಾಕಷ್ಟು ಜಾಗೃತಿ ಮೂಡಿಸಿದರೆ, ಅಸ್ವತ್ಛತೆಯ ಕಾರಣದಿಂದ ಅದು ಹರಡುತ್ತಲೇ ಇದೆ. ಕಳೆದ ಜನವರಿಯಿಂದ ನವ್ಹೆಂಬರ್ ಅಂತ್ಯದವರೆಗೆ ಒಟ್ಟು 226 ಜನರಿಗೆ ಡೆಂಘೀ ರೋಗ ಕಾಣಿಸಿಕೊಂಡಿದೆ.
ಜಿಲ್ಲಾ ಕೇಂದ್ರದಲ್ಲೇ ಹೆಚ್ಚು: ಈ ಸಾಂಕ್ರಾಮಿಕ ರೋಗ ಹಳ್ಳಿಗಳಿಗಿಂತ ಜಿಲ್ಲಾ ಕೇಂದ್ರವಾದ ಬಾಗಲಕೋಟೆ ನಗರ ಹಾಗೂ ನವನಗರದಲ್ಲೇ ಅತಿ ಹೆಚ್ಚು ಕಾಣಿಸಿಕೊಂಡಿದೆ. ಈ ಕುರಿತು ಈಚೆಗೆ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಬಿಸಿ ಬಿಸಿ ಚರ್ಚೆ ಕೂಡ ನಡೆದಿದೆ. ನಗರ ಪ್ರದೇಶದಲ್ಲಿ ಹಳೇ ಟೈರ್‌ಗಳು, ಒಡೆದ ಮಡಿಕೆ ಹಾಗೂ ಮನೆ ಮೇಲ್ಛಾವಣಿಯಲ್ಲಿ ನೀರು ನಿಲ್ಲುವುದು ಸಾಮಾನ್ಯ. ಇದನ್ನು ಜನರು ಗಮನಿಸದೇ, ಸ್ವಚ್ಛತೆ ಮಾಡುವ ಗೋಜಿಗೂ ಹೋಗುವುದಿಲ್ಲ. ಹೀಗಾಗಿ ನಗರ ಪ್ರದೇಶದಲ್ಲಿ ಹೆಚ್ಚು ಡೆಂಘೀ ಕಾಣಿಸಿಕೊಂಡಿದೆ ಎನ್ನಲಾಗಿದೆ.
ಹರಡದಿರಲು ಏನು ಮಾಡ್ಬೇಕು?: ಡೆಂಘೀ ಹರಡದಂತೆ ಸಾರ್ವಜನಿಕರು ತಮ್ಮ ಸುತ್ತಮುತ್ತಿಲಿನ ವಾತಾವರಣ ಸ್ವಚ್ಛವಾಗಿಟ್ಟುಕೊಳ್ಳುವ ಜತೆಗೆ ಡೆಂಘೀ ಸೊಳ್ಳೆ ನಿಯಂತ್ರಣಕ್ಕಾಗಿ ತೊಟ್ಟಿ, ನೀರಿನ ಡ್ರಮ್, ಮಡಿಕೆಗಳಲ್ಲಿ ಸಂಗ್ರವಾಗಿರುವ ನೀರನ್ನು ಹೊರಹಾಕಬೇಕು. ಜನರು ತಮ್ಮ ಮನೆಯೊಳಗಿನ, ಹೊರಗಿನ ಮತ್ತು ಮೇಲ್ಛಾವಣಿ ಪ್ರತಿಯೊಂದು ನೀರಿನ ತೊಟ್ಟಿಗಳನ್ನು ತಪ್ಪದೇ ವಾರಕ್ಕೊಮ್ಮೆ ತೊಳೆದು ಸ್ವತ್ಛವಾಗಿಡಬೇಕು. ನಮ್ಮ ಮನೆ-ಸುತ್ತಲಿನ ಪ್ರದೇಶದಲ್ಲಿ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಬೇಕು.
ಡೆಂಘೀ ಹರಡುವ ಸೊಳ್ಳೆಗಳು ಹಗಲು ಹೊತ್ತಿನಲ್ಲಿ ಕಚ್ಚುವುದರಿಂದ ಜನರು ತಮ್ಮ ಮನೆ ಕಿಟಕಿ-ಬಾಗಿಲು ಮುಚ್ಚಿರಬೇಕು. ಜೊತೆಗೆ ಮನೆಯಲ್ಲಿ ವಿಶ್ರಾಂತಿ ಪಡೆಯುವ ಸಮಯದಲ್ಲಿ ಸೊಳ್ಳೆ ಪರದೆ ಬಳಸಬೇಕು. ಇದರಿಂದ ಈಡಿಸ್ ಸೊಳ್ಳೆ ಕಚ್ಚುವುದನ್ನು ಹಾಗೂ ಡೆಂಘೀ ಸಾಂಕ್ರಾಮಿಕ ರೋಗಕ್ಕೊಳಗಾಗುವುದನ್ನು ತಪ್ಪಿಸಿಕೊಳ್ಳಬಹುದು. ಮನೆಯಲ್ಲಿ ಬೇವಿನ ಸೊಪ್ಪಿನ ಹೊಗೆ ಹಾಕುವ ಮೂಲಕ ಈಡಿಸ್ ಸೊಳ್ಳೆ ನಿಯಂತ್ರಿಸುವ ಮೂಲಕ ಡೆಂಘೀ ಸಾಂಕ್ರಾಮಿಕ
ರೋಗದಿಂದ ಸುರಕ್ಷಿತವಾಗಿರಬೇಕು ಎಂಬುದು ಆರೋಗ್ಯ ಇಲಾಖೆ ಸಲಹೆ.