ನವದೆಹಲಿ: ತೀವ್ರ ಡೆಂಘಿ ಜ್ವರದಿಂದ ಬಳಲುತ್ತಿದ್ದು, ಮೆದುಳು ನಿಷ್ಕ್ರಿಯಗೊಂಡ 7 ವರ್ಷದ ಬಾಲಕಿಯೊಬ್ಬಳಿಗೆ ಗುರ್ಗಾಂವ್ ನ ಖಾಸಗಿ ಆಸ್ಪತ್ರೆಯೊಂದು ಸುಮಾರು 15 ದಿನಗಳ ಕಾಲ ಐಸಿಯುನಲ್ಲಿ ಚಿಕಿತ್ಸೆ ನೀಡಿ, ಪೋಷಕರಿಗೆ 16 ಲಕ್ಷ ರೂಪಾಯಿ ಬಿಲ್ ಪಾವತಿಸುವಂತೆ ಹೇಳಿದೆ! ದುಬಾರಿ ಬಿಲ್ ನಿಂದ ಬೇಸತ್ತ ತಂದೆ ಮಗುವನ್ನು ಖಾಸಗಿ ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಕೊನೆಯುಸಿರೆಳೆದಿದೆ. ಇದೀಗ ಮಗುವಿನ ತಂದೆ ಖಾಸಗಿ ಆಸ್ಪತ್ರೆ ವಿರುದ್ಧ ತಿರುಗಿಬಿದ್ದಿದ್ದಾರೆ.
ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಎಡೆಮಾಡಿಕೊಟ್ಟಿತ್ತು, ಬಳಿಕ ಈ ಘಟನೆಗೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಭರವಸೆ ನೀಡಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ವಿವಾದಕ್ಕೀಡಾಗಿದ್ದು ಹೇಗೆ?
ಬಾಲಕಿಯ ತಂದೆಯ ಗೆಳೆಯರೊಬ್ಬರು ನವೆಂಬರ್ 17ರಂದು ಹರ್ಯಾಣದ ಗುರ್ಗಾಂವ್ ಆಸ್ಪತ್ರೆಯಲ್ಲಿ ನಡೆದ ಘಟನೆ ಬಗ್ಗೆ ಟ್ವೀಟ್ ಮಾಡಿ ವಿವರಿಸಿದ್ದರು. ನನ್ನ ಸಹಪಾಠಿಯ 7 ವರ್ಷದ ಮಗುವನ್ನು 15 ದಿನಗಳ ಕಾಲ ಡೆಂಗ್ಯು ಬಂದ ಹಿನ್ನೆಲೆಯಲ್ಲಿ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಿದ್ದರು. ಇದಕ್ಕಾಗಿ ಬರೋಬ್ಬರಿ 15 ಲಕ್ಷ ರೂಪಾಯಿ ಬಿಲ್ ಮಾಡಿದ್ದರು. ಕೊನೆಗೂ ಆ ಮಗು ಕೊನೆಯುಸಿರೆಳೆದಿದೆ…ಛೇ ಭ್ರಷ್ಟಾಚಾರ…..ಎಂದು ಬರೆದಿದ್ದರು.
ಫೋರ್ಟಿಸ್ ಆಸ್ಪತ್ರೆಯ ಬಿಲ್ ನಿಂದ ರೋಸಿ ಹೋದ ಮಗುವಿನ ತಂದೆ ಜಯಂತ್ ಸಿಂಗ್, ಸ್ನೇಹಿತರು, ಆಪ್ತರ ಬಳಿ ಸಾಲ ಮಾಡಿ ಬಿಲ್ ಪಾವತಿಸಿದ್ದರು, ಬಳಿಕ ಜಟಾಪಟಿ ನಡೆಸಿ ಫೋರ್ಟಿಸ್ ಆಸ್ಪತ್ರೆಯಿಂದ ಮಗಳನ್ನು ಸೆಪ್ಟೆಂಬರ್ 14ರ ರಾತ್ರಿ ರಾಕ್ ಲ್ಯಾಂಡ್ ಆಸ್ಪತ್ರೆಗೆ ಕರೆದೊಯ್ದಿದ್ದರು, ಆದರೆ ಮಗು ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದರು.
ಕೇವಲ ನಾಲ್ಕು ದಿನಗಳಲ್ಲಿಯೇ ಇದು 9 ಸಾವಿರ ಬಾರಿ ರೀ ಟ್ವೀಟ್ ಆಗಿದೆ, ಇದಕ್ಕೆ ಆರೋಗ್ಯ ಸಚಿವರು ಕೂಡಾ ಪ್ರತಿಕ್ರಿಯಿಸಿದ್ದರು. ದಯವಿಟ್ಟು ನನಗೆ ವಿವರವನ್ನು ಕಳುಹಿಸಿ ಎಂದು ಸಚಿವ ಜೆಪಿ ನಡ್ಡಾ ಟ್ವೀಟ್ ನಲ್ಲಿ ವಿನಂತಿಸಿದ್ದರು.
ಆದರೆ ಫೋರ್ಟಿಸ್ ಆಸ್ಪತ್ರೆ ಈ ಆರೋಪವನ್ನು ಸಾರಸಗಟಾಗಿ ತಿರಸ್ಕರಿಸಿದೆ. ಮಗುವಿನ ಸ್ಥಿತಿ ತೀರಾ ಚಿಂತಾಜನಕವಾಗಿದ್ದ ಸಂದರ್ಭದಲ್ಲಿ ಆಸ್ಪತ್ರೆಗೆ ದಾಖಲಿಸಿದ್ದರು. ಪೋಷಕರಿಗೆ ಮಾಹಿತಿ ನೀಡಿಯೇ ಎಲ್ಲಾ ವಿಧದ ಪರೀಕ್ಷೆಗಳನ್ನು ಮಾಡಿಸಲಾಗಿತ್ತು. ನಮ್ಮಿಂದ ಯಾವುದೇ ತಪ್ಪು ನಡೆದಿಲ್ಲ. ಈ ಬಗ್ಗೆ ಆರೋಗ್ಯ ಸಚಿವರಿಗೆ ಸಂಪೂರ್ಣ ಸ್ಪಷ್ಟನೆ ನೀಡಲಾಗಿದೆ ಎಂದು ಫೋರ್ಟಿಸ್ ತಿಳಿಸಿದೆ.