Advertisement

ಕೋವಿಡ್ -19 ಜತೆಗೆ ಡೆಂಗ್ಯೂ, ಮಲೇರಿಯಾ ಭೀತಿ!

10:34 PM May 10, 2020 | Sriram |

ವಿಶೇಷ ವರದಿ – ಪುತ್ತೂರು: ಕೋವಿಡ್ -19 ಸೋಂಕು ವ್ಯಾಪಕವಾಗಿರುವ ಜತೆಗೆ ಇದೀಗ ಡೆಂಗ್ಯೂ, ಮಲೇರಿಯಾ ಜ್ವರದ ಭಯವೂ ಆರಂಭಗೊಂಡಿದೆ. ಕಳೆದ ವರ್ಷದಂತೆ ಈ ವರ್ಷವೂ ಜಿಲ್ಲೆಯಲ್ಲಿಯೇ ಪ್ರಥಮವಾಗಿ ಪುತ್ತೂರು ತಾಲೂಕಿನಲ್ಲಿ ಶಂಕಿತ ಡೆಂಗ್ಯೂ, ಮಲೇರಿಯಾ ಆತಂಕ ಉಂಟು ಮಾಡಿದೆ.

Advertisement

ಕಳೆದ ವರ್ಷ ಜಿಲ್ಲೆಯಲ್ಲಿ ಮೊದಲ ಪ್ರಕರಣ ಪುತ್ತೂರು ತಾಲೂಕಿಗೆ ಸೇರಿದ್ದ ಕಡಬದಿಂದ ವರದಿಯಾಗಿತ್ತು. ಈ ಬಾರಿಯೂ ಪುತ್ತೂರು ತಾಲೂಕಿನ ಬೆಟ್ಟಂಪಾಡಿ, ಬಲ್ನಾಡು ಗ್ರಾಮಗಳಲ್ಲಿ ಡೆಂಗ್ಯೂ ಲಕ್ಷಣ ಹೊಂದಿರುವ ಜ್ವರ ಕಾಣಿಸಿಕೊಂಡಿದೆ. 2 ಪ್ರಕರಣಗಳು ಡೆಂಗ್ಯೂ ಎಂದು ದಾಖಲಾಗಿದೆ. 2 ಗ್ರಾಮಗಳ 33 ಮಂದಿಗೆ ಶಂಕಿತ ಡೆಂಗ್ಯೂ ಕಾಣಿಸಿಕೊಂಡಿದೆ. ಕಳೆದ ವರ್ಷ ಶಂಕಿತ ಡೆಂಗ್ಯೂನಿಂದ 12 ಮಂದಿ ಮೃತಪಟ್ಟಿದ್ದರು. 4 ಮಂದಿ ಅಧಿಕೃತವಾಗಿ ಡೆಂಗ್ಯೂ ಜ್ವರದಿಂದ ಸಾವಿಗೀಡಾಗಿದ್ದರು. ದ.ಕ. ಜಿಲ್ಲೆಯಲ್ಲೇ 2,797 ಮಲೇರಿಯಾ, ಡೆಂಗ್ಯೂ ಜ್ವರ ಕಂಡುಬಂದು ರಾಜ್ಯದಲ್ಲಿ 2ನೇ ಸ್ಥಾನ ಜಿಲ್ಲೆಯದ್ದಾಗಿತ್ತು.

86 ಶಂಕಿತ ಪ್ರಕರಣ
ಅವಿಭಜಿತ ಪುತ್ತೂರು ತಾಲೂಕಿನಲ್ಲಿ ಒಟ್ಟು 86 ಶಂಕಿತ ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ. ಪಾಣಾಜೆ ಗ್ರಾಮದಲ್ಲಿ 34, ತಿಂಗಳಾಡಿಯಲ್ಲಿ 17, ಬೆಟ್ಟಂಪಾಡಿ ಗ್ರಾಮ ದಲ್ಲಿ 18, ಬಲ್ನಾಡಿನಲ್ಲಿ 9, ಕೊಯಿಲದಲ್ಲಿ 8 ಸಹಿತ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ. ಕಳೆದ ಜನವರಿಯಿಂದ ಮಾರ್ಚ್‌ ತನಕ ತಾಲೂಕಿನ ಬೆಟ್ಟಂಪಾಡಿ, ಉಪ್ಪಿನಂಗಡಿ, ಈಶ್ವರಮಂಗಲದಲ್ಲಿ 3 ಅಧಿಕೃತ ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕಡಿಮೆ
ನೆಲ್ಯಾಡಿ, ಕಡಬ ಸಹಿತ ವಿವಿಧ ಗ್ರಾಮಗಳಲ್ಲಿಯೂ ಕೆಲವೊಂದು ಶಂಕಿತ ಡೆಂಗ್ಯೂ ಲಕ್ಷಣ ಹೊಂದಿರುವ ಜ್ವರ, ಮಲೇರಿಯಾ ಜನತೆಯನ್ನು ಕಾಡುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಈ ಕಾರಣಕ್ಕಾಗಿ ಬಹಳಷ್ಟು ಮಂದಿ ದಾಖಲಾಗಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸ್ತುತ ಡೆಂಗ್ಯೂ-ಮಲೇರಿಯಾ ಪ್ರಕರಣ ಕಡಿಮೆ. ಆದರೂ ಪಾಣಾಜೆ, ಬೆಟ್ಟಂಪಾಡಿ, ಬಲ್ನಾಡು ಭಾಗದಲ್ಲಿ ಪ್ರಸ್ತುತ ಕಂಡುಬಂದಿರುವ ಶಂಕಿತ ಪ್ರಕರಣಗಳು ಅಪಾಯದ ಮುನ್ಸೂಚನೆ ನೀಡಿವೆ.

ಇತ್ತೀಚೆಗೆ ಈ ಪರಿಸರದಲ್ಲಿ ಮಳೆಯಾಗುತ್ತಿರುವುದು ಸೊಳ್ಳೆ ಉತ್ಪಾದನೆಗೆ ಪೂರಕ ವಾತಾವರಣ ಲಭಿಸಿದಂತಾಗಿದ್ದು, ಇಂತಹ ರೋಗ ಪಸರಿಸಲು ಕಾರಣವಾಗುತ್ತಿದೆ ಎನ್ನುತ್ತಾರೆ ಸ್ಥಳೀಯರು.

Advertisement

ಶಂಕಿತ ಡೆಂಗ್ಯೂ ಹೆಚ್ಚಳ
ಸುಮಾರು 20 ದಿನಗಳಿಂದ ಪುತ್ತೂರು ತಾಲೂಕಿನ ಕೆಲವು ಭಾಗಗಳಲ್ಲಿ ಶಂಕಿತ ಡೆಂಗ್ಯೂ ಹಾಗೂ ಮಲೇರಿಯಾ ಜ್ವರ ಕಂಡುಬರುತ್ತಿದೆ. ಬೆಟ್ಟಂಪಾಡಿ, ಬಲ್ನಾಡು ಗ್ರಾಮದಲ್ಲಿ ಈ ಜ್ವರ ಹೆಚ್ಚಾಗಿದೆ. ಈ ಕುರಿತು ಜನತೆಗೆ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ.
-ಡಾ| ನವೀನ್‌ಚಂದ್ರ ಕುಲಾಲ್‌,
ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next