Advertisement
ಡೆಂಗ್ಯೂ ಪ್ರಕರಣಗಳ ಸಂಖ್ಯೆ 7,024ಕ್ಕೆ ತಲುಪಿವೆ. 23 ಜಿಲ್ಲೆಗಳಲ್ಲಿ ಡೆಂಗ್ಯೂ ಪ್ರಕರಣಗಳು ಏರಿಕೆ ಕಂಡಿವೆ. ಕಳೆದ ವರ್ಷ ರಾಜ್ಯದಲ್ಲಿ ಜನವರಿಯಿಂದ ಡಿಸೆಂಬರ್‌ವರೆಗೆ 7,189 ಪ್ರಕರಣಗಳು ವರದಿಯಾಗಿ ಐವರು ಮೃತಪಟ್ಟಿದ್ದರು. ಆದರೆ ಈ ವರ್ಷ ಜನವರಿಯಿಂದ ಈವರೆಗೆ ಪ್ರಕರಣಗಳ ಸಂಖ್ಯೆ 7,024ರ ಗಡಿ ದಾಟಿದ್ದು, ನಾಲ್ವರು ಮೃತಪಟ್ಟಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಡೆಂಗ್ಯೂ ಸೋಂಕು ಹೆಚ್ಚಾಗಿದೆ. ಈ ವರ್ಷ 1.45 ಲಕ್ಷಕ್ಕೂ ಅಧಿಕ ಡೆಂಗ್ಯೂ ಶಂಕಿತರನ್ನು ಗುರುತಿಸಿ, ತಪಾಸಣೆಗೆ ಒಳಪಡಿಸಲಾಗಿದೆ.
ಉಡುಪಿಯಲ್ಲಿ 2, ವಿಜಯಪುರ ಹಾಗೂ ಚಿಕ್ಕಬಳ್ಳಾಪುರದಲ್ಲಿ ತಲಾ ಇಬ್ಬರು ಡೆಂಗ್ಯೂ ನಿಂದ ಮೃತಪಟ್ಟಿದ್ದಾರೆ. ಡೆಂಗ್ಯೂ ಲಕ್ಷಣ ಇರುವ 62,174 ವ್ಯಕ್ತಿಗಳ ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸ ಲಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
Related Articles
Advertisement
1,700 ಚಿಕನ್ ಗುನ್ಯ ಸಕ್ರಿಯಚಿಕೂನ್ ಗುನ್ಯಾ ಪ್ರಕರಣಗಳಲ್ಲೂ ಏರಿಕೆ ಕಂಡು ಬರುತ್ತಿದ್ದು, ರಾಜ್ಯದಲ್ಲಿ 29 ಜಿಲ್ಲೆ ಗಳಲ್ಲಿ 1,700 ಮಂದಿ ಚಿಕನ್ ಗುನ್ಯಾದಿಂದ ಬಳಲು ತ್ತಿದ್ದಾರೆ. 50 ಸಾವಿರಕ್ಕೂ ಅಧಿಕ ಮಂದಿ ಚಿಕನ್ ಗುನ್ಯಾ ಶಂಕಿತರನ್ನು ಗುರುತಿಸಿ ತಪಾಸಣೆಗೆ ಒಳಪಡಿಸಲಾಗಿತ್ತು. 27,122 ಮಂದಿಯ ಮಂದಿಯ ರಕ್ತ ಪರೀಕ್ಷೆ ನಡೆಸಲಾಗಿದೆ. ಅವರಲ್ಲಿ 1,700 ಮಂದಿ ಈ ಜ್ವರಕ್ಕೆ ಒಳಗಾಗಿರುವುದು ದೃಢಪಟ್ಟಿದೆ. ವಿಜಯಪುರದಲ್ಲಿ 297, ಕೋಲಾರದಲ್ಲಿ 197, ಹಾಸನದಲ್ಲಿ 132, ಚಿತ್ರದುರ್ಗದಲ್ಲಿ 118 ಪ್ರಕರಣ ಪತ್ತೆಯಾಗಿದೆ. ಉಳಿದ ಜಿಲ್ಲೆಗಳಲ್ಲಿ 100ಕ್ಕಿಂತ ಕಡಿಮೆ ಪ್ರಕರಣ ಗಳು ವರದಿಯಾಗಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಹಠಾತ್ ಜ್ವರ, ಕೀಲುನೋವು, ಸ್ನಾಯುನೋವು, ಆಯಾಸ, ತಲೆನೋವು ಈ ಜ್ವರದ ಲಕ್ಷಣವಾಗಿದೆ. ಡೆಂಗ್ಯೂ ಲಕ್ಷಣಗಳೇನು ?
ತೀವ್ರ ಜ್ವರ, ಅತಿಯಾದ ಆಯಾಸ, ತಲೆನೋವು, ಕಣ್ಣು ನೋವು, ಸ್ನಾಯು, ಕೀಲು ಅಥವಾ ಮೂಳೆ ನೋವು, ವಾಕರಿಕೆ, ವಾಂತಿ, ದದ್ದುಗಳು, ರಕ್ತದಲ್ಲಿ ಪ್ಲೇಟ್‌ಲೆಟ್ ಕಡಿಮೆ ಆಗುವುದು ಡೆಂಗ್ಯೂ ಜ್ವರದ ಲಕ್ಷಣ ಗಳಾಗಿವೆ. ಕೆಲವೊಮ್ಮೆ 2-3 ದಿನ ಜ್ವರ ಬಂದ ಬಳಿಕ ಜ್ವರ ಏರುತ್ತದೆ. ಈ ಲಕ್ಷಣ ಕಂಡು ಬಂದಲ್ಲಿ ತತ್‌ಕ್ಷಣ ವೈದ್ಯರ ಸಲಹೆಯನ್ನು ಪಡೆಯಬೇಕು ಎಂದು ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯ ಪ್ರೊಫೆಸರ್ ಹಾಗೂ ಮಕ್ಕಳ ವೈದ್ಯಶಾಸ್ತ್ರ ವಿಭಾಗದ ವೈದ್ಯ ಡಾ| ಎನ್. ನಿಜಗುಣ “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ. ಮುನ್ನೆಚ್ಚರಿಕೆಗಳೇನು?
-ಸೊಳ್ಳೆ ಉತ್ಪತ್ತಿಯಾಗದಂತೆ ನೋಡಿಕೊಳ್ಳಿ.
-ಸೊಳ್ಳೆಗಳ ಕಡಿತ ತಡೆಗಟ್ಟಲು ದೇಹವನ್ನು ಸಂಪೂರ್ಣವಾಗಿ ಮುಚ್ಚುವ ಬಟ್ಟೆ ಧರಿಸಿ.
-ಮನೆಯಿಂದ ಹೊರಬರುವ ಮೊದಲು ಸೊಳ್ಳೆ ನಿವಾರಕ ಬಳಸಿ.
-ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡಿ.
-ಸೂರ್ಯಾಸ್ತದ ಮೊದಲೇ ಮನೆಯ ಬಾಗಿಲು ಮತ್ತು ಕಿಟಕಿಗಳನ್ನು ಮುಚ್ಚಿ ಸೊಳ್ಳೆಗಳು ಬರದಂತೆ ನೋಡಿಕೊಳ್ಳಿ.
-ಮನೆ ಬಳಿಯ ಟಯರ್, ಮಡಿಕೆ, ಹೂದಾನಿ, ಡ್ರಮ್, ಅಂಗಳದಲ್ಲಿ ಅಥವಾ ಹೊಂಡ ಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ.
-ಮನೆ ಸಮೀಪ ತ್ಯಾಜ್ಯ ಸಂಗ್ರಹಿಸಬೇಡಿ.
-ಜ್ವರ ಬಂದಾಗ ಸೂಕ್ತ ಚಿಕಿತ್ಸೆ ಪಡೆಯಿರಿ. ಜನಸಾಮಾನ್ಯರು ಡೆಂಗ್ಯೂ ಜ್ವರದ ಲಕ್ಷಣ ಕಂಡು ಬಂದರೆ ವೈದ್ಯರನ್ನು ಭೇಟಿಯಾಗಿ ಸಮಯಕ್ಕೆ ಸರಿಯಾಗಿ ಔಷಧ ತೆಗೆದುಕೊಳ್ಳಬೇಕು. ಮನೆ ಸಮೀಪದಲ್ಲಿ ಮಳೆ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಬೇಕು.
-ಡಾ| ಎನ್. ನಿಜಗುಣ,
ಇಂದಿರಾ ಗಾಂಧಿ ಮಕ್ಕಳ
ಆರೋಗ್ಯ ಸಂಸ್ಥೆ ವೈದ್ಯರು
- ಅವಿನಾಶ್ ಮೂಡಂಬಿಕಾನ