Advertisement
ಬೆಂಗಳೂರು ನಗರ ಜಿಲ್ಲಾ ಆರೋಗ್ಯ ಇಲಾಖೆ ವ್ಯಾಪ್ತಿಗೆ ಬರುವ ನಗರದ 63 ವಾರ್ಡ್‌ಗಳ ವ್ಯಾಪ್ತಿಯಲ್ಲಿ ವರ್ಷಾರಂಭದಿಂದ ಕೇವಲ 9 ಡೆಂಘೀ ಪ್ರಕರಣಗಳಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿ ಯಾವುದೇ ಪ್ರಕರಣಗಳು ದೃಢಪಟ್ಟಿಲ್ಲ. ಆದರೆ, ಬೆಂಗಳೂರಿನ ಹಳೆಯ ಹಾಗೂ ಕೇಂದ್ರ ಭಾಗ ಎಂದು ಕರೆಯಲ್ಪಡುವ ಬಿಬಿಎಂಪಿ ವ್ಯಾಪ್ತಿಗೆ ಬರುವ 135 ವಾರ್ಡ್‌ಗಳಲ್ಲಿ ಒಂದೇ ತಿಂಗಳಲ್ಲಿ 200ಕ್ಕೂ ಮಂದಿಗೆ ಡೆಂಘೀ ಸೋಂಕಿದೆ.
Related Articles
Advertisement
ಅಲ್ಲಲ್ಲಿ ಜಾಗೃತಿ ಸಭೆ, ಶಿಬಿರ ನಡೆಸುತ್ತಿದ್ದಾರೆ. ಈ ಕೆಲಸವನ್ನು ಬಿಬಿಎಂಪಿ ಪರಿಣಾಮಕಾರಿಯಾಗಿ ಮಾಡುತ್ತಿಲ್ಲ. ಇನ್ನು ನಗರದಲ್ಲಿ 2017ಕ್ಕೆ ಹೋಲಿಕೆ ಮಾಡಿದರೆ 2018ರಲ್ಲಿ ಡೆಂಘೀ ಪ್ರಕರಣಗಳು ಹತೋಟಿಗೆ ಬಂದಿದ್ದವು. ಆದರೆ ಈ ಬಾರಿ ಬೇಸಿಗೆಯಲ್ಲೇ ಹೆಚ್ಚಾಗಿದ್ದು, ಇನ್ನು ಮಳೆ ಆರಂಭವಾಗಿರುವುದರಿಂದ ಪ್ರಕರಣಗಳ ಸಂಖ್ಯೆ ಇನ್ನಷ್ಟು ಹೆಚ್ಚುವ ಆತಂಕ ಮೂಡಿದೆ.
ಹೀಗಾಗಿ, ಡೆಂಘೀ ಕುರಿತು ಇನ್ನಾದರೂ ಬಿಬಿಎಂಪಿ ಅಧಿಕಾರಿಗಳು ಪರಿಣಾಮಕಾರಿಯಾಗಿ ಕ್ರಮ ಕೈಗೊಳ್ಳಬೇಕಿದೆ. ತಿಂಗಳಿಂದ ನಗರದಲ್ಲಿ ಮಳೆ ಆಗುತ್ತಿರುವ ಕಾರಣ ಡೆಂಘೀ ಪ್ರಕರಣಗಳು ಹೆಚ್ಚಿವೆ. ಬಿಬಿಎಂಪಿ ವ್ಯಾಪ್ತಿಯ 85 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕಿರಿಯ ಆರೋಗ್ಯ ಸಹಾಯಕಿಯರು,
ಆಶಾ ಕಾರ್ಯಕರ್ತರು ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸುತ್ತಿದ್ದು, ಜಾಗೃತಿ ವೇಳೆ ಜ್ವರ ಲಕ್ಷಣ ಉಳ್ಳವರ ರಕ್ತ ಪರೀಕ್ಷೆ ಕಳುಹಿಸುತ್ತಿದ್ದಾರೆ. ಇದರಿಂದ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಸಾರ್ವಜನಿಕರು ಮನೆಗಳ ಸುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಸೊಳ್ಳೆಗಳು ಕಂಡು ಬಂದರೆ ಸೊಳ್ಳೆ ನಾಶಕ ಬಳಸಬೇಕು ಎಂದು ಬಿಬಿಎಂಪಿ ಆರೋಗ್ಯಾಧಿಕಾರಿಗಳು ಹೇಳುತ್ತಾರೆ.
ಡೆಂಘೀ ಜಾಗೃತಿಗೆ ನರ್ಸಿಂಗ್ ವಿದ್ಯಾರ್ಥಿಗಳ ಬಳಕೆ: “ಬಿಬಿಎಂಪಿ ವ್ಯಾಪ್ತಿಯಲ್ಲಿ ಡೆಂಘೀ ಪ್ರಕರಣಗಳ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಬಿಬಿಎಂಪಿ ವಲಯ ಹಾಗೂ ವಾರ್ಡ್ ವ್ಯಾಪ್ತಿಯ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳ ಸಹಕಾರ ಪಡೆಯಲಾಗುತ್ತಿದೆ.
ಕಾಲೇಜು ವಿದ್ಯಾರ್ಥಿಗಳು ತಂಡ ಮಾಡಿಕೊಂಡು ಒಂದು ತಿಂಗಳ ಕಾಲ ಆ ವಲಯ ವ್ಯಾಪ್ತಿಯ ಮನೆ ಮನೆಗೆ ತೆರಳಿ ಸೋಂಕಿನ ಲಕ್ಷಣ, ಸೋಂಕು ಬಾರದಂತೆ ತಡೆಯಲು ಅಗತ್ಯ ಕ್ರಮಗಳೇನು, ಸೊಳ್ಳೆ ಪರದೆ ಬಳಕೆ, ಔಷಧ ಸಿಂಪಡಣೆ ರೀತಿಯ ಸುರಕ್ಷತಾ ಅಂಶಗಳ ಬಗ್ಗೆ ತಿಳಿಸಲಿದ್ದಾರೆ,’ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಡಾ.ಮನೋರಂಜನ್ ಹೆಗಡೆ ತಿಳಿಸಿದರು.
ಡೆಂಘೀ ಜ್ವರದ ಲಕ್ಷಣಗಳು: ದಿಢೀರ್ ಜ್ವರ, ತಲೆನೋವು, ನೆಗಡಿ, ಗಂಟಲು ನೋವು, ವಾಂತಿ, ಹೊಟ್ಟೆ ನೋವು, ಮೈ-ಕೈ ನೋವು, ಅತಿಸಾರ ಮೊದಲ ಹಂತದ ಲಕ್ಷಣಗಳು. ಸೋಂಕು ಗಂಭೀರ ಹಂತ ತಲುಪಿದಾಗ ಕರುಳಿನಲ್ಲಿ ರಕ್ತಸ್ರಾವವಾಗುತ್ತದೆ. ಒಮ್ಮೆ ಡೆಂಘೀ ಬಂದವರಿಗೆ ಪುನಃ ಬಂದಾಗ ಅದರ ಪರಿಣಾಮ ಗಂಭೀರವಾಗುತ್ತದೆ ಎನ್ನುತ್ತಾರೆ ವೈದ್ಯರು.
ಮುಂಜಾಗ್ರತಾ ಕ್ರಮಗಳು: ಈಡಿಸ್ ಈಜಿಪ್ಟೆ ಎಂಬ ಸೊಳ್ಳೆ ಕಚ್ಚುವುದರಿಂದ ಡೆಂಘೀ ಜ್ವರ ಬರುತ್ತದೆ. ನಿಂತ ನೀರಿನಲ್ಲಿ ಸೊಳ್ಳೆಗಳು ಮೊಟ್ಟೆ ಇಡುವುದರಿಂದ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಸೊಳ್ಳೆಗಳನ್ನು ತಡೆಯಲು ಕಿಟಕಿ ಬಾಗಿಲುಗಳಿಗೆ ಪರದೆ ಅಳವಡಿಸಿ, ಸೊಳ್ಳೆ ನಾಶಕ ಔಷಧ ಬಳಸಬೇಕು.
ಹಗಲಿನಲ್ಲಿ ಸೊಳ್ಳೆ ಕಚ್ಚದಂತೆ ಎಚ್ಚರವಹಿಸುವುದು. ನೀರು ಶೇಖರಣಾ ತೊಟ್ಟಿ, ಟ್ಯಾಂಕ್‌ಗಳ ಮುಚ್ಚುಳವನ್ನು ಭದ್ರವಾಗಿ ಮುಚ್ಚಬೇಕು. ಮನೆಯಲ್ಲಿ ಹೆಚ್ಚು ದಿನಗಳವರಗೆ ನೀರು ಸಂಗ್ರಹಿಸಬಾರದು. ಜ್ವರ ಕಾಣಿಸಿಕೊಂಡಾಗ ನಿರ್ಲಕ್ಷಿಸದೆ, ರಕ್ತ ಪರೀಕ್ಷೆ ಮಾಡಿಸುವುದು. ಶುದ್ಧ ಹಾಗೂ ಕುದಿಸಿ ಆರಿಸಿದ ನೀರನ್ನು ಕುಡಿಯಬೇಕು
ಡೆಂಘೀ ಕುರಿತು ಸಾಕಷ್ಟು ಸಭೆ ನಡೆಸಿದ್ದು, ಪ್ರಕರಣಗಳ ಹತೋಟಿಗೆ ಬಿಬಿಎಂಪಿಗೆ ಸೂಚಿಸಿದ್ದೇವೆ. ಸಾರ್ವಜನಿಕರೂ ಅಗತ್ಯ ಮುಂಜಾಗ್ರತೆ ವಹಿಸಬೇಕು. ಸೊಳ್ಳೆಯಿಂದ ದೂರವಿರಬೇಕು, ಜ್ವರದ ಲಕ್ಷಣ ಕಂಡುಬಂದರೆ ಶೀಘ್ರ ಆಸ್ಪತ್ರೆಗೆ ತೆರಳಿ ರಕ್ತ ಪರೀಕ್ಷೆ ಮಾಡಿಸಬೇಕು.-ಡಾ.ಶಿವರಾಜ್ ಸಜ್ಜನ್ ಶೆಟ್ಟಿ, ಜಂಟಿ ನಿರ್ದೇಶಕರು, ಸಾಂಕ್ರಾಮಿಕ ರೋಗ ನಿಯಂತ್ರಣ ವಿಭಾಗ * ಜಯಪ್ರಕಾಶ್ ಬಿರಾದಾರ್