Advertisement

ಬೈಂದೂರು ವ್ಯಾಪ್ತಿಯಲ್ಲಿ ಡೆಂಗ್ಯೂ ಜ್ವರ ಭೀತಿ

08:36 PM Jan 16, 2020 | Sriram |

ಬೈಂದೂರು: ಇಲ್ಲಿನ ಪಡುವರಿ ಗ್ರಾಮದ ಮಾಸ್ತಿಕಟ್ಟೆ ಮುಂತಾದ ಕಡೆ ಡೆಂಗ್ಯೂ ಜ್ವರ ಕಾಣಿಸಿಕೊಂಡಿರುವುದು ಸಾರ್ವಜನಿಕರಿಗೆ ಆತಂಕ ಉಂಟುಮಾಡಿದೆ.

Advertisement

ಪತ್ತೆಯಾಗಿದ್ದು ಹೇಗೆ?
ನಾಲ್ಕೈದು ದಿನಗಳ ಹಿಂದೆ ಇಲ್ಲಿನ ಮಾಸ್ತಿಕಟ್ಟೆ ಕಾಲೊನಿಯಲ್ಲಿರುವ ಆರೇಳು ಜನರಿಗೆ ಜ್ವರ ಕಾಣಿಸಿಕೊಂಡಿದೆ. ಜ್ವರ ಕಡಿಮೆಯಾಗದಿದ್ದಾಗ ರಕ್ತ ಪರೀಕ್ಷೆ ನಡೆಸಿದಾಗ ಇಬ್ಬರಿಗೆ ಡೆಂಗ್ಯೂ ಇರುವುದು ಧೃಢಪಟ್ಟಿದೆ. ಇವರು ಪಶುಸಂಗೋಪನೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು ಇತರ ಕಡೆಯಿಂದ ಜ್ವರ ಬಂದಿರುವ ಸಾಧ್ಯತೆಗಳಿವೆ. ಕಳೆದ ವರ್ಷವೂ ಶಿರೂರಿನಲ್ಲಿ ಇಬ್ಬರಿಗೆ ಜ್ವರ ಕಂಡುಬಂದಿತ್ತು.

ಡೆಂಗ್ಯೂ ಜ್ವರದ ಲಕ್ಷಣಗಳೇನು?
ಸಾಮಾನ್ಯ ಜ್ವರಗಳು ಒಂದೆರಡು ದಿನದಲ್ಲಿ ಕಡಿಮೆಯಾಗುತ್ತದೆ. ಆದರೆ ಡೆಂಗ್ಯೂ ಜ್ವರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋಗುತ್ತದೆ.ಅತಿಯಾದ ತಲೆನೋವು, ವಾಂತಿ ಭೇದಿ, ಕಣ್ಣಿನ ಹಿಂಭಾಗದಲ್ಲಿ ಉರಿ, ಮೈಕೈ ನೋವು, ಗಂಟು ನೋವು, ಕರಳು ಉಬ್ಬುವುದು, ರಕ್ತದಲ್ಲಿ ಪ್ಲೇಟ್‌ಲೆಟ್‌ಗಳ ಸಂಖ್ಯೆ ಕಡಿಮೆಯಾಗುವುದು ಡೆಂಗ್ಯೂ ಜ್ವರದ ಪ್ರಮುಖ ಲಕ್ಷಣಗಳಾಗಿವೆ. ಜ್ವರ ಬಂದ ತಕ್ಷಣ ಚಿಕಿತ್ಸೆ ಹಾಗೂ ರಕ್ತ ಪರೀಕ್ಷೆ ಅತ್ಯವಶ್ಯಕವಾಗಿದೆ.

ಮುನ್ನೆಚ್ಚರಿಕೆ ಕ್ರಮ
ಜ್ವರದ ಲಕ್ಷಣ ಕಂಡುಬಂದ ಬಳಿಕ ಆರೋಗ್ಯ ಇಲಾಖೆ ತಕ್ಷಣ ಕಾರ್ಯಪ್ರವೃತ್ತರಾಗಿದೆ.ಮಾತ್ರವಲ್ಲದೆ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ.

ಗ್ರಾಮ ಪಂಚಾಯತ್‌ ವತಿಯಿಂದ ಡೆಂಗ್ಯೂ ಮಾಹಿತಿ, ಕರಪತ್ರ ವಿತರಣೆ, ಆಶಾ ಕಾರ್ಯಕರ್ತರಿಂದ ಮನೆ ಮನೆ ಭೇಟಿ,ಜ್ವರ ಸಮೀಕ್ಷೆ, ಲಾರ್ವಾ ಸಮೀಕ್ಷೆ ಸೊಳ್ಳೆ ನಿಯಂತ್ರಣ ಮುಂತಾದ ಕ್ರಮಕೈಗೊಳ್ಳಲಾಗಿದೆ. ಆರೋಗ್ಯ ಅಧಿಕಾರಿಗಳೂ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Advertisement

ಜಾಗರೂಕತೆ ಅಗತ್ಯ
ಸಾಮಾನ್ಯವಾಗಿ ಜನವರಿ ತಿಂಗಳಲ್ಲಿ ಬಹುತೇಕ ಊರುಗಳಲ್ಲಿ ಜಾತ್ರೆ, ಹಬ್ಬಗಳು ನಡೆಯುವುದರಿಂದ ಸೇವಿಸುವ ತಿಂಡಿ, ಕುಡಿಯುವ ನೀರಿನ ಬಗ್ಗೆ ವಿಶೇಷ ಜಾಗೃತೆವಹಿಸಬೇಕಾಗಿದೆ. ಆರೋಗ್ಯ ಕಾಳಜಿ ಪ್ರತಿಯೊಬ್ಬರು ವಹಿಸಬೇಕಾಗಿದೆ.

ಚಿಕಿತ್ಸೆ ನೀಡಲಾಗಿದೆ
ಡೆಂಗ್ಯೂ ಜ್ವರ ಪೀಡಿತ ಪ್ರದೇಶದ ಮನೆ ಮನೆಗಳಿಗೆ ಭೇಟಿ ನೀಡಿದ್ದೇನೆ. ಚಿಕಿತ್ಸೆ ನೀಡಲಾಗಿದೆ. ಡೆಂಗ್ಯೂ ಭಾದಿತರು ವಿಶ್ರಾಂತಿಯಲ್ಲಿದ್ದಾರೆ. ಇಲಾಖೆಯ ನಿರ್ದೇಶನದನ್ವಯ ಕ್ರಮ ಕೈಗೊಳ್ಳಲಾಗಿದೆ.
-ಡಾ| ಸಹನಾ,ಆರೋಗ್ಯಾಧಿಕಾರಿ,ಪ್ರಾ.ಆ.ಕೇಂದ್ರ ಶಿರೂರು

ಸೂಕ್ತ ಕ್ರಮ
ಡೆಂಗ್ಯೂ ಜ್ವರ ಕುರಿತಂತೆ ಸಮರ್ಪಕ ಕ್ರಮಕೈಗೊಳ್ಳಲಾಗುವುದು. ಮುಂಜಾಗ್ರತೆಗೆ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆ ವತಿಯಿಂದ ಕ್ರಮಕೈಗೊಳ್ಳಲಾಗುವುದು. ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದೇನೆ.
-ನಾಗಭೂಷಣ ಉಡುಪ,ತಾ.ಆರೋಗ್ಯಾಧಿಕಾರಿಗಳು

ಜಾಗೃತಿ ಅಗತ್ಯ
ಜ್ವರ ಬಗ್ಗೆ ಗ್ರಾ.ಪಂ. ವತಿಯಿಂದ ಕರಪತ್ರ ಸೇರಿದಂತೆ ಮಾಹಿತಿ ಅಭಿಯಾನ ಆರಂಭಿಸಲಾಗಿದೆ.ಇಲಾಖೆ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದೆ.ಜನರು ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಬೇಕಿದೆ.
-ಸದಾಶಿವ ಡಿ.ಪಡುವರಿ

-  ಅರುಣ ಕುಮಾರ್‌ ಶಿರೂರು 

Advertisement

Udayavani is now on Telegram. Click here to join our channel and stay updated with the latest news.

Next