Advertisement

Dengue Fever: ಡೆಂಘೀ ನಿರ್ಲಕ್ಷ್ಯ ಸಲ್ಲ, ಎಚ್ಚರ ತಪ್ಪಿದ್ರೆ ಅಪಾಯ

11:03 AM Jul 14, 2024 | Team Udayavani |

ಬೆಂಗಳೂರು: ರಾಜ್ಯದಲ್ಲಿ ಡೆಂಘೀ ಪ್ರಕರಣಗಳ ಏರಿಕೆಯಾಗುತ್ತಿರುವ ನಡುವೆ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹಂತ ಹಂತವಾಗಿ ಏರಿಕೆ ಕಂಡು ಬರುತ್ತಿರುವುದು ಆರೋಗ್ಯ ಇಲಾಖೆ ಅಂಕಿ- ಅಂಶಗಳು ದೃಢಪಡಿಸಿದೆ.

Advertisement

ರಾಜ್ಯದಲ್ಲಿ ಮಳೆಗಾಲ ಪ್ರಾರಂಭಗೊಂಡು 2 ತಿಂಗಳು ಸಮೀಪಿಸುತ್ತಿದ್ದು, ದಿನದಿಂದ ದಿನಕ್ಕೆ ಅನಾರೋಗ್ಯ ಬೀಳುವವರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಈ ಬಾರಿ ಡೆಂಘೀ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡಿದೆ. 2023ರ ಜುಲೈ 13ರ ಅವಧಿಯಲ್ಲಿ ಒಟ್ಟಾರೆ 2000 ಪ್ರಕರಣ ದಾಖಲಾಗಿತ್ತು. 2024 ಜುಲೈ 13ಕ್ಕೆ 9082 ಮಂದಿಯಲ್ಲಿ ಡೆಂಘೀ ಪ್ರಕರಣಗಳ ವರದಿಯಾಗಿದೆ. ಪ್ರಸ್ತುತ ಮರಣ ಪ್ರಮಾಣ ಶೇ.0.07ರಷ್ಟಿದೆ.

ರಾಜ್ಯದಲ್ಲಿ ಜನರು ಡೆಂಘೀಗೆ ನಿರ್ಲಕ್ಷ್ಯವಹಿಸಿ, ಕೊನೆಯ ಹಂತದಲ್ಲಿ ಚಿಕಿತ್ಸೆಗೆ ಬರುತ್ತಿರುವುದರಿಂದ ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣ ಏರಿಕೆಯಾಗಿದೆ. ಮೊದಲ ಮೂರರಿಂದ 4 ದಿನಗಳಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿ ಕೊಂಡರೂ, ಆಸ್ಪತ್ರೆಗೆ  ತೆರಳಿ ಜ್ವರ, ಮೈಕೈ ನೋವು ಸಂಬಂಧಿಸಿದ ಔಷಧ ಸೇವಿಸುತ್ತಿದ್ದಾರೆ. ಜ್ವರ ಉಲ್ಬಣಗೊಂಡು, ವಿಷಮ ಸ್ಥಿತಿಗೆ ತಲುಪಿದ ಜನರು ವೈದ್ಯರನ್ನು ಸಂಪರ್ಕಿಸಿ, ಡೆಂಘೀ ಪರೀಕ್ಷೆಗೆ ಒಳಗಾಗುತ್ತಿದ್ದಾರೆ. ಇದರಿಂದಾಗಿ ಡೆಂಘೀ ಸೋಂಕಿತರು ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗುವ ಪರಿಸ್ಥಿತಿ ಎದುರಾಗುತ್ತಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಶೇ.20ರಷ್ಟು ಪ್ರಕರಣ !: ಕಳೆದ 1 ವಾರದಿಂದ ಆಸ್ಪತ್ರೆಗೆ ದಾಖಲಾಗುವವರ ಡೆಂಘೀ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಜು.7ರಿಂದ 13ರ ವರೆಗೆ 2000 ಮಂದಿಯಲ್ಲಿ ಡೆಂಘೀ ದೃಢವಾಗಿದ್ದು, ಅವರಲ್ಲಿ 586 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಸ್ತುತ 353 ಮಂದಿ ರಾಜ್ಯದ ವಿವಿಧ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರತಿನಿತ್ಯ ವರದಿ ಯಾಗುವ ಪ್ರಕರಣಗಳಲ್ಲಿ ಶೇ.20ರಿಂದ 30ರಷ್ಟು ಸೋಂಕಿತ ವ್ಯಕ್ತಿಗಳು ಆಸ್ಪತ್ರೆಗೆ ಭರ್ತಿಯಾಗುತ್ತಿ ದ್ದಾರೆ. ಕಳೆದ 7ದಿನದಲ್ಲಿ 2000ಕ್ಕೂ ಅಧಿಕ ಡೆಂಘೀ ಪ್ರಕರಣ ವರದಿಯಾಗಿದೆ.

ನಿರ್ಲಕ್ಷ್ಯ ಸಲ್ಲದು!: ಪ್ರಸ್ತುತ ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಡೆಂಘೀ ತಪಾಸಣೆ ಕೈಗೊಳ್ಳಲಾಗುತ್ತಿದೆ. ಜ್ವರ ಬಂದ ತಕ್ಷಣವೇ ಯಾವುದೇ ನಿರ್ಲಕ್ಷ್ಯ ಹಾಗೂ ಸ್ವಯಂ ವೈದ್ಯ ಪದ್ಧತಿ ಅನುಕರಣೆ ಮಾಡದೇ ವೈದ್ಯರನ್ನು ಸಂಪರ್ಕಿಸಬೇಕು. ವೈದ್ಯರ ಸಲಹೆ ಮೇರೆಗೆ ಡೆಂಘೀ ತಪಾಸಣೆಗೆ ಒಳಗಾಗಿ, ಪಾಸಿಟಿವ್‌ ಬಂದರೆ ತಕ್ಷಣವೇ ಚಿಕಿತ್ಸೆ ಪ್ರಾರಂಭಿಸುವುದರಿಂದ ಸೋಂಕನ್ನು ಪ್ರಾರಂಭಿಕ ಹಂತದಲ್ಲಿ ತಡೆಹಿಡಿಯ ಬಹುದಾಗಿದೆ. ಒಂದು ವೇಳೆ ರೋಗ ಉಲ್ಬಣಗೊಂಡರೆ ಮೂಗು, ಬಾಯಿ, ಜಠರ ಸೇರಿದಂತೆ ವಿವಿಧ ಅಂಗಗಳಲ್ಲಿ ರಕ್ತಸ್ರಾವ ಉಂಟಾಗಿ ಮರಣ ಸಂಭವಿಸಬಹುದಾಗಿದೆ.

Advertisement

14 ದಿನಗಳ ಆರೋಗ್ಯ ನಿಗಾ:

ಡೆಂಘೀ ಜ್ವರದ ರೋಗ ಲಕ್ಷಣಗಳು ಕಂಡು ಬಂದ ದಿನದಿಂದ 14 ದಿನಗಳ ವರೆಗೆ ಆರೋಗ್ಯ ಸ್ಥಿತಿಯನ್ನು ಅನುಪಾಲನೆ ಮಾಡಲಿದೆ. ಡೆಂಘೀ ಸಾಧಾರಣ, ಮಧ್ಯಮ ಹಾಗೂ ತೀವ್ರ ಜ್ವರ ಚಿನ್ಹೆಗಳ ಕುರಿತು ಜನರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಕೆಲಸ ಮಾಡುತ್ತಿದೆ.

ಸಾರ್ವಜನಿಕರು ಡೆಂಘೀ ಜ್ವರದ ಕುರಿತು ನಿರ್ಲಕ್ಷ್ಯ ವಹಿಸಬಾರದು. ಜ್ವರ ಬಂದ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು. ಡೆಂಘೀ ಲಕ್ಷಣಗಳಿದ್ದರೆ ವೈದ್ಯರ ಸಲಹೆ ಮೇರೆಗೆ ಪರೀಕ್ಷೆಗೆ ಒಳಗಾಗಿ ಚಿಕಿತ್ಸೆ ಪಡೆಯಿರಿ. ಸ್ವಯಂ ಅರಿವು ಮತ್ತು ಮುನ್ನೆಚ್ಚರಿಕೆಯು ಡೆಂಘೀ ವಿರುದ್ಧ ಹೋರಾಟಕ್ಕೆ ಸಹಕಾರಿ.-ಡಾ.ರಂದೀಪ, ಆಯುಕ್ತರು, ಆರೋಗ್ಯ ಇಲಾಖೆ. 

-ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next