Advertisement
ಕೊಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಕೊಲ್ಲೂರು, ಜಡ್ಕಲ್, ಮುದೂರು, ಸೆಲ್ಕೋಡು ಮತ್ತಿತರ ಭಾಗಗಳಲ್ಲಿ ಕೆಲವು ದಿನಗಳಿಂದ ಡೆಂಗ್ಯೂ ಜ್ವರ ಪ್ರಕರಣಗಳು ಹೆಚ್ಚುತ್ತಿವೆ. ಸದ್ಯ 56 ಸಕ್ರಿಯ ಪ್ರಕರಣಗಳಿದ್ದು, ಇನ್ನಷ್ಟು ಮಂದಿಯ ರಕ್ತದ ತಪಾಸಣೆ ಮಾಡಲಾಗಿದ್ದು, ಕೆಲವರದ್ದು ನೆಗೆಟಿವ್ ಬಂದಿದ್ದು, ಕೆಲವರದು ಬಾಕಿ ಇವೆ. ಇನ್ನು ಕೆಲವರು ಲಕ್ಷಣಗಳಿದ್ದರೂ ಮನೆಯಲ್ಲಿಯೇ ಇದ್ದು, ಚಿಕಿತ್ಸೆ ಪಡೆಯಲು ಹಿಂದೇಟು ಹಾಕುತ್ತಿರುವವರು ಇದ್ದಾರೆ.
Related Articles
Advertisement
ಗುಣಲಕ್ಷಣಗಳೇನು?
ಡೆಂಗ್ಯೂ ವೈರಸ್‌ನಿಂದ ಉಂಟಾಗುವ ಸೋಂಕು ಆಗಿದ್ದು, ಈಡಿಸ್ ಎಂಬ ಸೊಳ್ಳೆಯಿಂದ ಈ ರೋಗ ಹರಡುತ್ತವೆ. ತೀವ್ರ ಜ್ವರ, ತೀವ್ರ ತಲೆನೋವು, ಸ್ನಾಯುಗಳು, ಕೀಲು ನೋವಯ, ದೇಹದಲ್ಲಿ ಚಳಿ, ಅತಿಯಾದ ಬೆವರು, ನಿಶ್ಶಕ್ತಿ, ಆಯಾಸ, ಹಸಿವಾಗದಿರುವುದು, ಒಸಡುಗಳಲ್ಲಿ ರಕ್ತಸ್ರಾವ ಹಾಗೂ ವಾಂತಿ ಇದರ ಲಕ್ಷಣಗಳು.
ಚಿಕಿತ್ಸೆ ಪಡೆಯಲು ತ್ರಾಸ
ಮುದೂರು, ಜಡ್ಕಲ್ ಭಾಗದವರಿಗೆ 25-30 ಕಿ.ಮೀ. ದೂರದಲ್ಲಿ ಕೊಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದರೂ, ಅಲ್ಲಿಗೆ ತೆರಳುವುದು ತ್ರಾಸದಾಯಕ. ಬಹುತೇಕ ಮಂದಿ 35 ಕಿ.ಮೀ. ದೂರದ ಕುಂದಾಪುರಕ್ಕೆ ಬರುವಂತಾಗಿದೆ. ಅಲ್ಲಿಂದ ಬಂದು ಕುಂದಾಪುರದ ಸರಕಾರಿ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು, ತೆರಳುವವರ ಸಂಖ್ಯೆಯೇ ಹೆಚ್ಚು. ಜ್ವರ, ನೆಗಡಿ ಮತ್ತಿತರ ಲಕ್ಷಣಗಳು ಇರುವವರು ಕಿ.ಮೀ.ಗಟ್ಟಲೆ ಕ್ರಮಿಸುವುದು ಕಷ್ಟಕರವಾಗುತ್ತಿದೆ ಎನ್ನುವುದು ಈ ಭಾಗದ ಜನರ ಅಳಲು.
ಆರೋಗ್ಯ ಶಿಬಿರಕ್ಕೆ ಬೇಡಿಕೆ
ಜಡ್ಕಲ್, ಮುದೂರು ಭಾಗದಲ್ಲಿ ಆಸ್ಪತ್ರೆಗೆ ತೆರಳಲು ದೂರ ಆಗುವುದರಿಂದ ಈ ಭಾಗದಲ್ಲಿಯೇ ಎಲ್ಲಿಯಾದರೂ ಒಂದಷ್ಟು ದಿನಗಳ ಕಾಲ ವಿಶೇಷ ಆರೋಗ್ಯ ಶಿಬಿರ ನಡೆಸಿ, ತಪಾಸಣೆ, ಚಿಕಿತ್ಸೆ ನೀಡಬೇಕು ಎನ್ನುವ ಬೇಡಿಕೆ ಇಲ್ಲಿನ ಜನರಿಂದ ಕೇಳಿ ಬಂದಿದೆ.
ಮನೆ- ಮನೆ ಜಾಗೃತಿ
ಈಗಾಗಲೇ ಕೊಲ್ಲೂರು, ಜಡ್ಕಲ್, ಮುದೂರು ಗ್ರಾಮಗಳ ವ್ಯಾಪ್ತಿಯಲ್ಲಿ ಆರೋಗ್ಯ ಇಲಾಖೆಯು ಆಶಾ ಕಾರ್ಯಕರ್ತೆಯರ ಮೂಲಕ, ಕೊಲ್ಲೂರು ಹಾಗೂ ಜಡ್ಕಲ್ ಗ್ರಾ.ಪಂ.ಗಳ ಪ್ರತಿನಿಧಿಗಳು ಮನೆ- ಮನೆಗೆ ಭೇಟಿ ನೀಡಿ, ಮನೆಯ ಪರಿಸರ ಸ್ವಚ್ಛತೆ, ನಿರ್ದಿಷ್ಟ ಪ್ರದೇಶಗಳಲ್ಲಿ ನೀರು ನಿಲ್ಲದಂತೆ ಜಾಗೃತಿ ವಹಿಸುವ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.
ನಿರ್ಲಕ್ಷ್ಯ ಮಾಡಬೇಡಿ
ಜ್ವರದ ಲಕ್ಷಣಗಳು ಕಂಡು ಬಂದರೆ ದಯವಿಟ್ಟು ಯಾರೂ ಸಹ ನಿರ್ಲಕ್ಷ್ಯ ಮಾಡಬೇಡಿ. ಅಗತ್ಯ ಚಿಕಿತ್ಸೆ ಪಡೆಯಿರಿ. ಮನೆಯಲ್ಲಿಯೇ ಇದ್ದು, ಚಿಕಿತ್ಸೆ ಪಡೆಯಬೇಡಿ. ಸಮೀಪದ ಆಸ್ಪತ್ರೆಗೆ ತಿಳಿಸಿ. ನಾವು ಆರೋಗ್ಯ ಇಲಾಖೆಯಿಂದ ಕಳೆದ 3 ತಿಂಗಳಿನಿಂದ ಜಡ್ಕಲ್, ಮುದೂರು ಭಾಗದಲ್ಲಿ ಅಗತ್ಯ ಜಾಗೃತಿ, ಮನೆ – ಮನೆ ಭೇಟಿ ಮಾಡಿ, ಅರಿವು ಕಾರ್ಯ ಮಾಡಲಾಗಿದೆ. ಎ. 26ರಂದು ಡಿಸಿ ನೇತೃತ್ವದಲ್ಲಿ ಸಭೆ ನಡೆಯಲಿದೆ. –ಡಾ| ನಾಗಭೂಷಣ ಉಡುಪ ಎಚ್., ಜಿಲ್ಲಾ ಆರೋಗ್ಯ ಮತ್ತು ಕುಟುಂಬ. ಕಲ್ಯಾಣಾಧಿಕಾರಿ ಉಡುಪಿ