ಹುಬ್ಬಳ್ಳಿ: ದೇಶಪಾಂಡೆ ಫೌಂಡೇಶನ್‌ನ ಲೀಡರ್ ಎಕ್ಸಲ್‌ರೇಟಿಂಗ್ ಡೆವಲೆಪ್‌ಮೆಂಟ್ ಪ್ರೋಗ್ರಾಂ ವತಿಯಿಂದ ನಗರದ ಕೆಲವೆಡೆ ಫಾಗಿಂಗ್ ಮಾಡುವ ಮೂಲಕ ಡೆಂಘೀ ಜ್ವರದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಿತು.
ನಗರದ ಗೋಕುಲ, ಲಕ್ಷ್ಮಿವನ, ನೇಕಾರ ನಗರ, ಕಲ್ಯಾಣ ನಗರ, ಬಳಗೇರ ಒಣಿ ಮತ್ತು ಹಲಗೇರ ನಗರಗಳಲ್ಲಿ ಫಾಗಿಂಗ್ ಮಾಡಿ ಡೆಂಘೀ ಜ್ವರದ ಕುರಿತು ಜಾಗೃತಿ ಮೂಡಿಸುವ ಕೆಲಸ ನಡೆಯಿತು. ಸಂಸ್ಥೆಯ ಪೂಜಾ ಗಾವಡೆ ಮಾತನಾಡಿ, ನಗರದಲ್ಲಿ ಡೆಂಘೀ ಹೆಚ್ಚುತ್ತಿರುವ ಕಾರಣದಿಂದ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ.
ಈ ಹಿನ್ನೆಲೆಯಲ್ಲಿ ನಗರದ ಕೆಲ ಪ್ರದೇಶಗಳಲ್ಲಿ ಫಾಗಿಂಗ್ ಮಾಡುವ ಮೂಲಕ ಜನರನ್ನು ಜಾಗೃತಿಗೊಳಿಸುವ ಕಾರ್ಯ ಮಾಡುತ್ತಿದ್ದೇವೆ. ಜನರ ಸಹಕಾರ ದೊರೆತರೆ ನಗರದ ಇನ್ನಿತರ ಪ್ರದೇಶಗಳಲ್ಲಿ ಫಾಗಿಂಗ್ ಮಾಡುವ ಕಾರ್ಯ ಸಂಸ್ಥೆಯಿಂದ ನಡೆಯಲಿದೆ.
ಅತೀಯಾದ ಸೊಳ್ಳೆ ಅಥವಾ ಡೆಂಘೀ ಜ್ವರದ ಲಕ್ಷಣಗಳು ಕಂಡುಬಂದಲ್ಲಿ ಮೊ. 7022680645ಗೆ ಕರೆ ಮಾಡಿದರೆ ಫಾಗಿಂಗ್ ಮಾಡಲಾಗುವುದು ಎಂದರು. ಲೀಡ್‌ನ ವಿದ್ಯಾರ್ಥಿ ಇಮ್ಯಾನುವಲ್ ಪಠಾರೆ ಮಾತನಾಡಿ, ಮಲೀನ ವಾತಾವರಣದಿಂದ ಹರಡುವ ಡೆಂಘೀ ಜ್ವರಕ್ಕೆ ಸೂಕ್ತ ಮಾಹಿತಿ ಕೊರತೆಯಿಂದ ಜನ ಪರದಾಡುತ್ತಿದ್ದಾರೆ.
ಗುಂಡಿಗಳು ಮತ್ತು ಟೈರ್‌ಗಳಲ್ಲಿ ನಿಂತ ನೀರಿನಿಂದ ಹುಟ್ಟಿಕೊಳ್ಳುವ ಸೊಳ್ಳೆಯಿಂದ ಈ ಜ್ವರ ಕಾಣಿಸಿಕೊಳ್ಳಲಿದೆ. ಹೀಗಾಗಿ ಸುತ್ತಲಿನ ಪರಿಸರ ಸ್ವತ್ಛತೆಯಿಂದ ಕಾಪಾಡಿಕೊಳ್ಳುವ ಮೂಲಕ ಡೆಂಘೀನಿಂದ ದೂರವಿರಬಹುದೆಂದು ಹೇಳಿದರು. ಆರ್ಯ ವಿಶ್ವನಾಥ ಹಳ್ಳಿಕೇರಿ, ಅಭಿನಂದನ ಕವ್ವಾಳೆ, ಗುರುಸಿದ್ದಯ್ಯ ಕೊಣ್ಣುರಮಠ ಸೇರಿದಂತೆ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.