ವರದಿ: ಕೆ.ದಿನೇಶ ಗಾಂವ್ಕರ
ಕುಮಟಾ: ಕೊರೊನಾ ವ್ಯಾಪಕವಾಗಿ ಹರಡುತ್ತಿರುವುದರ ಜೊತೆಗೆ ಡೆಂಘೀ ಭಯವೂ ಗ್ರಾಮೀಣ ಜನರನ್ನು ಕಾಡಲಾರಂಭಿಸಿದೆ. ಅಳಕೋಡ ಗ್ರಾಪಂ ವ್ಯಾಪ್ತಿಯ ಯಾಣ, ಸಂಡಳ್ಳಿ, ಮತ್ತಳ್ಳಿ ಹಾಗೂ ಬೆಳ್ಳಂಗಿ ಮುಂತಾದ ಗ್ರಾಮೀಣ ಭಾಗಗಳಲ್ಲಿ ಇದೀಗ ಡೆಂಘೀ ಜ್ವರದ ಶಂಕೆ ವ್ಯಕ್ತವಾಗುತ್ತಿದ್ದು, ಇದರಿಂದ ಸಾರ್ವಜನಿಕರಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದೆ.
ಕೊರೊನಾ ವ್ಯಾಪಕವಾಗಿ ಹರಡುತ್ತಿರುವುದರಿಂದ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದ ಜನತೆ ಅತೀವ ಸಂಕಷ್ಟದಲ್ಲಿದ್ದಾರೆ. ಸದ್ಯ ಜಿಲ್ಲಾಡಳಿತ ಹಾಗೂ ತಾಲೂಕಾಡಳಿತ ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಅನುಸರಿಸಿರುವುದರಿಂದ ಹಾಗೂ ಜನರಲ್ಲಿ ಜಾಗೃತಿ ಮೂಡಿರುವುದರಿಂದ ಸೋಂಕಿತರ ಸಂಖ್ಯೆ ಸ್ವಲ್ಪ ಇಳಿಮುಖವಾಗತೊಡಗಿದೆ. ಈ ಮಧ್ಯೆ ಡೆಂಘೀ ಭೀತಿ ಕಾಡಲಾರಂಭಿಸಿದೆ.
ಅಳಕೋಡ ಗ್ರಾಪಂ ವ್ಯಾಪ್ತಿಯ ಮತ್ತಳ್ಳಿ, ಸಂಡಳ್ಳಿ, ಯಾಣ ಹಾಗೂ ಬೆಳ್ಳಂಗಿ ಮುಂತಾದ ಗ್ರಾಮೀಣ ಭಾಗಗಳಲ್ಲಿ ಡೆಂಘೀ ಜ್ವರದ ಶಂಕೆ ವ್ಯಕ್ತವಾಗುತ್ತಿದ್ದು, ಸ್ಥಳೀಯ ಹಲವರಲ್ಲಿ ಜ್ವರ, ಶೀತ, ಸ್ನಾಯು ಬಿಗಿತ, ತಲೆ ನೋವು, ಮೈಕೈ ನೋವು ಸೇರಿದಂತೆ ಡೆಂಘೀ ಲಕ್ಷಣಗಳು ಕಂಡುಬರುತ್ತಿದೆ. ಇದರಿಂದ ಆತಂಕ ಸೃಷ್ಟಿಯಾಗಿದೆ. ಈ ಬಗ್ಗೆ ಟಿಎಚ್‌ಒ ಆಜ್ಞಾ ನಾಯಕ ಪ್ರತಿಕ್ರಿಯಿಸಿ, ಜನತೆಯಲ್ಲಿ ಶೀತ, ಸ್ನಾಯು ಬಿಗಿತ, ತಲೆ ನೋವು, ಮೈಕೈ ನೋವು ಕಂಡು ಬಂದಿರುವುದು ಸತ್ಯ. ಆದರೆ ಜ್ವರದ ಲಕ್ಷಣವಿಲ್ಲ. ಇವೆಲ್ಲವೂ ಕೊರೊನಾ ಲಕ್ಷಣವೂ ಆಗಿದೆ. ಆದ್ದರಿಂದ ಈ ಭಾಗದ ಹಲವು ಜನರನ್ನು ಟಾಸ್ಕ್ಫೋರ್ಸ್ ಹಾಗೂ ಪೊಲೀಸರ ಸಹಕಾರದೊಂದಿಗೆ ಕೊರೊನಾ ಪರೀಕ್ಷೆಗೆ ಒಳಪಡಿಸಿದ್ದೇವೆ. ವರದಿಯಲ್ಲಿ ಕೊರೊನಾ ನೆಗೆಟಿವ್ ಇದ್ದಲ್ಲಿ ಮುಂದಿನ ಪರೀಕ್ಷೆ ನಡೆಸಿ, ಡೆಂಘೀ ಜ್ವರಕ್ಕೆ ಸಂಬಂಧಿಸಿದಂತೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದರು.