Advertisement

ಡೆಂಘೀ 175 ಪ್ರಕರಣ ದೃಢ: ಆದ್ರೆ ಸಾವು ಸಂಭವಿಸಿಲ್ಲ ವಂತೆ

02:53 PM Jul 07, 2017 | Team Udayavani |

ದಾವಣಗೆರೆ: ಜಿಲ್ಲೆಯಲ್ಲಿ ಈವರೆಗೆ 175 ಡೆಂಘೀ ಪ್ರಕರಣ ದೃಢಪಟ್ಟಿದ್ದರೂ ಯಾವುದೇ ಸಾವು ಸಂಭವಿಸಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ಎಂ.ಎಸ್‌. ತ್ರಿಪುಲಾಂಬ ತಿಳಿಸಿದ್ದಾರೆ.

Advertisement

ಕೀಟಜನ್ಯ ರೋಗಗಳ ನಿಯಂತ್ರಣ ಕುರಿತಂತೆ ಗುರುವಾರ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ನಡೆದ ಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು, ಪೂರ್ವ ಮುಂಗಾರಿನಲ್ಲೇ ಜಗಳೂರು, ಹರಿಹರ ತಾಲೂಕಿನ ಮಲೆಬೆನ್ನೂರು, ಜಿಗಳಿಯಲ್ಲಿ ಅತಿ ಹೆಚ್ಚಿನ ಡೆಂಘೀ ಪ್ರಕರಣ ವರದಿಯಾಗಿದ್ದವು. ಆರೋಗ್ಯ ಇಲಾಖೆಯಿಂದ ಎಲ್ಲಾ ಅಗತ್ಯ ಕ್ರಮದ ಮೂಲಕ ನಿಯಂತ್ರಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಡೆಂಘೀ ಸಂಬಂಧಿತ ಸಾವು ಸಂಭವಿಸಲ್ಲವಾದರೂ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ರ್ಯಾಪಿಡ್‌ ರೆಸ್ಪಾನ್ಸ್‌ ಟೀಮ್‌ ರಚಿಸಲಾಗಿದೆ. ಒಂದಕ್ಕಿಂತ ಹೆಚ್ಚಿನ ಜ್ವರದ ಪ್ರಕರಣ ಕಂಡು ಬಂದ ತಕ್ಷಣವೇ ಎಲ್ಲ ಕ್ರಮ ತೆಗೆದುಕೊಳ್ಳಲು ವೈದ್ಯಾಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ಜಿಲ್ಲಾ, ತಾಲೂಕು ಆಸ್ಪತ್ರೆಯಲ್ಲಿ ಡೆಂಘೀ ಪೀಡಿತರಗಾಗಿಯೇ 5-6 ಬೆಡ್‌ ಮೀಸಲಿಡಲು ತಿಳಿಸಲಾಗಿದೆ ಎಂದು ಮಾಹಿತಿ ನೀಡಿದರು. ಮೈಸೂರಿನಲ್ಲಿ ಹೆಚ್ಚಿನ ಪ್ರಮಾಣ ಇರುವ ಕಾರಣ ಅಲ್ಲಿ ಫಿವರ್‌ ಕ್ಲಿನಿಕ್‌
ಪ್ರಾರಂಭಿಸಲಾಗಿದೆ. ದಾವಣಗೆರೆಯಲ್ಲಿ ಅಷ್ಟೊಂದು ತೀವ್ರ ಪರಿಸ್ಥಿತಿ ಇಲ್ಲ. ಅದಾಗ್ಯೂ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ. ಕೀಟಜನ್ಯ ರೋಗಗಳ ನಿಯಂತ್ರಣಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು. ಜಿಲ್ಲಾ ಮಲೇರಿಯಾ ಆಧಿಕಾರಿ ಡಾ| ಮೀನಾಕ್ಷಿ ಮಾತನಾಡಿ, 2016 ರಲ್ಲಿ 2,002 ಶಂಕಿತ ಡೆಂಘೀ ಪ್ರಕರಣದಲ್ಲಿ 446 ದೃಢಪಟ್ಟಿದ್ದವು. ಈ ವರ್ಷ ಈವರೆಗೆ 707 ಶಂಕಿತ ಪ್ರಕರಣಗಳಲ್ಲಿ 175 ದೃಢಪಟ್ಟಿವೆ. ದಾವಣಗೆರೆ ನಗರದಲ್ಲಿ ಕಳೆದ ವರ್ಷ 374 ಶಂಕಿತ ಪ್ರಕರಣದಲ್ಲಿ 94 ದೃಢಪಟ್ಟಿದ್ದವು.
ಈ ವರ್ಷ ಜೂನ್‌ ತಿಂಗಳಲ್ಲಿ ಹೆಚ್ಚಿನ ಶಂಕಿತ ಪ್ರಕರಣ ವರದಿಯಾಗಿವೆ. 175ರಲ್ಲಿ 22 ದೃಢಪಟ್ಟಿವೆ. ಗ್ರಾಮಾಂತರ ಪ್ರದೇಶದಲ್ಲಿ ಈ ವರ್ಷ 12 ಪ್ರಕರಣ ದೃಢಪಟ್ಟಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಗ್ರಾಮೀಣ ಭಾಗದಲ್ಲಿ ಡೆಂಘೀ ಜಾಸ್ತಿಯಾಗಿದೆ. ಮನೆ ಮಾತ್ರವಲ್ಲ ಮನೆಯ ಸುತ್ತಮುತ್ತಲೂ ಸ್ವತ್ಛತೆ ಕಾಪಾಡಿಕೊಳ್ಳುವುದು. ಸೊಳ್ಳೆ ನಿಯಂತ್ರಣ ಮಾಡುವುದು ಬರೀ ನಗರಪಾಲಿಕೆ, 
ಗ್ರಾಮ ಪಂಚಾಯತ್‌ ಕೆಲಸವಲ್ಲ ನಮ್ಮೆಲ್ಲರ ಕರ್ತವ್ಯ ಎಂಬ ಮನಸ್ಥಿತಿ ಬರಬೇಕು. ಎಲ್ಲರೂ ಸಮನ್ವಯತೆಯಿಂದ ಕಾರ್ಯೋನ್ಮುಖರಾಗಬೇಕು ಎಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next