Advertisement

ವೈಜಾನಿಕವಾಗಿ ಪರಿವರ್ತಕ ಅಳವಡಿಕೆಗೆ ಆಗ್ರಹ

12:51 PM Oct 05, 2018 | |

ವಿಜಯಪುರ: ನಗರದಲ್ಲಿ ಅವೈಜ್ಞಾನಿಕವಾಗಿ ವಿದ್ಯುತ್‌ ಪರಿವರ್ತಕ ಅಳವಡಿಕೆಯಿಂದ ಗೋವುಗಳು ಸಾವನ್ನಪ್ಪುತ್ತಿವೆ. ಕೂಡಲೇ ವೈಜ್ಞಾನಿಕ ಕ್ರಮವಾಗಿ ಪರಿವರ್ತಕ ಅಳವಡಿಕೆಗೆ ಆಗ್ರಹಿಸಿ ಬಿಜೆಪಿ ಗೋ ಪ್ರಕೋಷ್ಠದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಗೋ ಪ್ರಕೋಷ್ಠ ರಾಜ್ಯ ಸಹ ಸಂಚಾಲಕ ವಿಜಯ ಜೋಶಿ, ವಿಜಯಪುರ ಜಿಲ್ಲಾದ್ಯಂತ ಹೆಸ್ಕಾಂ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗೋವುಗಳ ಸಾವನ್ನಪ್ಪುತ್ತಿವೆ.

ಗೋವುಗಳ ಸಾವು ತಡೆಗಟ್ಟಲು ಅಧಿಕಾರಿಗಳು ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ. ಜಿಲ್ಲಾದ್ಯಂತ ಪ್ರದೇಶಗಳಲ್ಲಿ ಅಸಮರ್ಪಕವಾಗಿ ವಿದ್ಯುತ್‌ ಪರಿವರ್ತಕಗಳನ್ನು ಅಳವಡಿಸದ ಪರಿಣಾಮ ಎಲ್ಲೆಂದರಲ್ಲಿ ಗೋವುಗಳು, ಇತರೆ ಮೂಕ
ಪ್ರಾಣಿಗಳು ವಿದ್ಯುತ್‌ ಸ್ಪರ್ಶದಿಂದ ಸ್ಥಳದಲ್ಲೇ ಸಾವನ್ನಪ್ಪುತ್ತಿವೆ. ಹೀಗಾಗಿ ಸ್ಥಳೀಯ ಸಂಸ್ಥೆಗಳು ಹಾಗೂ ಹೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ದಿವ್ಯ ನಿರ್ಲಕ್ಷ್ಯವೇ ಕಾರಣ ಎಂದು ದೂರಿದರು.

ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಸೂಕ್ತ ಕ್ರಮ ವಹಿಸಬೇಕು. ಟ್ರಾನ್ಸ್‌ ಫಾರ್ಮರ್‌ಗಳನ್ನು ಜನ, ಜಾನುವಾರುಗಳಿಗೆ ತಾಗದಂತೆ ಎತ್ತರದ ಸ್ಥಳದಲ್ಲಿ ಅಳವಡಿಸಬೇಕು, ಸುತ್ತಮುತ್ತಲೂ ಯಾವುದೇ ರೀತಿಯಲ್ಲಿ ಪ್ರಾಣಿಗಳು ಪ್ರವೇಶಿಸದಂತೆ ತಂತಿ ಬೇಲಿ ನಿರ್ಮಿಸುವುದರ ಮೂಲಕ ಪ್ರಾಣಿಗಳ ಜೀವಹಾನಿಯಾಗದಂತೆ ಮುಂಜಾಗ್ರತೆ ವಹಿಸಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿಕಾಂತ ಬಗಲಿ ಮಾತನಾಡಿ, ಗೋವುಗಳ ಮಾಲೀಕರು ಅವುಗಳ ಪಾಲನೆ ಮಾಡದೇ ಬಾಕಾಬಿಟ್ಟಿಯಾಗಿ ಎಲ್ಲೆಂದರಲ್ಲಿ ಗೋವುಗಳನ್ನು ಬಿಡುತ್ತಿರುವುದು ದುರಂತಗಳಿಗೆ ಕಾರಣವಾಗಿದೆ. ಗೋವುಗಳ ಮಾಲೀಕರು ಕೂಡ ಅಸಡ್ಡೆ ತೋರುವ ಮಾಲೀಕರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Advertisement

ಜಿಲ್ಲಾ ಗೋ ಪ್ರಕೋಷ್ಠ ಸಂಚಾಲಕ ಸಾಬುಮಾಶ್ಯಾಳ ಮಾತನಾಡಿ, ಜಿಲ್ಲೆಯಲ್ಲಿ ಪ್ಲಾಸ್ಟಿಕ್‌ ನಿಷೇಧವಿದ್ದರೂ ಕೂಡ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳು ಕಂಡು ಬರುತ್ತಿವೆ. ಈ ತ್ಯಾಜ್ಯ ಸೇವನೆ ಮಾಡಿ ಅನೇಕ ಗೋವುಗಳ ಆರೋಗ್ಯ
ಹದಗೆಡುತ್ತಿದೆ. ಈ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್‌ನ್ನು ಕಡ್ಡಾಯವಾಗಿ ನಿಷೇಧಿಸಬೇಕು ಎಂದು ಒತ್ತಾಯಿಸಿದರು.

ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ನಗರ ಅಧ್ಯಕ್ಷ ಶಿವರುದ್ರ ಬಾಗಲಕೋಟ, ವಿವೇಕಾನಂದ ಡಬ್ಬಿ, ಗೋ ಪ್ರಕೋಷ್ಠ ಸಹ ಸಂಚಾಲಕ ವಿನಾಯಕ ದಹಿಂಡೆ, ಮಹಾನಗರ ಪಾಲಿಕೆ ಸದಸ್ಯ ರಾಜಶೇಖರ ಮಗಿಮಠ, ಅಲ್ತಾಫ್‌ ಇಟಗಿ, ರಾಜು ಬಿರಾದಾರ, ಸಂಜಯ ಪಾಟೀಲ ಕನಮಡಿ, ಮಳುಗೌಡ ಪಾಟೀಲ, ಡಾ| ಸುರೇಶ ಬಿರಾದಾರ, ಅಶೋಕ ನ್ಯಾಮಗೊಂಡ, ರಾಜೇಶ ತಾವಸೆ, ಕೃಷ್ಣಾ ಗುನ್ನಾಳಕರ, ಬಸವರಾಜ ಬಿರಾದಾರ, ಬಸವರಾಜ ಬೈಚಬಾಳ, ಸಿದ್ದು ಬೆಲ್ಲದ, ಸಂಗಮೇಶ ಹೌದೆ, ಸಿದ್ದು ಮಲ್ಲಿಕಾರ್ಜುನಮಠ, ರಮೇಶ ದೇವಕರ, ಭರತ ಕೋಳಿ, ರಾಮ ಹೊಸಪೇಟ,
ರಾಮಚಂದ್ರ ಕುಲಕರ್ಣಿ, ವಾರೀಶ ಕುಲಕರ್ಣಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next