ನವದೆಹಲಿ: ಪ್ರತಿಬಾರಿಯೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ದೂರುವುದಕ್ಕೆ ಅರ್ಥವೇ ಇಲ್ಲ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಜೈರಾಂ ರಮೇಶ್ ಹೇಳಿಕೆ ನೀಡಿದ್ದ ಬೆನ್ನಲ್ಲೇ ಇದೀಗ ಕಾಂಗ್ರೆಸ್ ಪಕ್ಷದ ಮತ್ತೊಬ್ಬ ಹಿರಿಯ ಮುಖಂಡ ಅಭಿಷೇಕ್ ಮನು ಸಿಂಘ್ವಿ ಕೂಡಾ ಸಾಥ್ ನೀಡಿದ್ದಾರೆ.
ಸಿಂಘ್ವಿ ಹೇಳಿದ್ದೇನು?
ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಪದೇ, ಪದೇ ದೂರುವುದು ತಪ್ಪು. ನಾವು ವಿಷಯಾಧಾರಿತವಾಗಿ ವಿರೋಧಿಸಬೇಕೆ ಹೊರತು, ವ್ಯಕ್ತಿಯಾಧಾರಿತವಾಗಿ ದೂರುವುದು ಸರಿಯಲ್ಲ ಎಂದು ಜೈರಾಂ ರಮೇಶ್ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಅಭಿಷೇಕ್ ಮನು ಸಿಂಘ್ವಿ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರತಿ ಬಾರಿ ವಿರೋಧಿಸುವುದು ತಪ್ಪು. ಮೋದಿಯೊಬ್ಬರೇ ದೇಶದ ಪ್ರಧಾನಿಯಾಗಿಲ್ಲ. ಆರೋಗ್ಯಕರ ವಿರೋಧ ಅವರಿಗೆ ನೆರವಾಗಬಹುದು. ನಮ್ಮ ನಡವಳಿಕೆ ಯಾವತ್ತೂ ಒಳ್ಳೆಯದು, ಕೆಟ್ಟದ್ದು ಮತ್ತು ವಿಭಿನ್ನವಾಗಿರುತ್ತದೆ. ವಿರೋಧಗಳೆಲ್ಲವೂ ವಿಷಯಾಧಾರಿತವಾಗಿರಬೇಕು. ವೈಯಕ್ತಿಕವಾಗಿರಬಾರದು ಎಂದು ಸಿಂಘ್ವಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜೈರಾಂ ರಮೇಶ್ ಹೇಳಿದ್ದೇನು:
ದೆಹಲಿಯಲ್ಲಿ ಬುಧವಾರ ಕಪಿಲ್ ಸತೀಶ್ ಕೊಮಿರೆಡ್ಡಿ ಎಂಬ ರಾಜಕೀಯ ತಜ್ಞ ಬರೆದಿರುವ ಮೆಲೆವೆಂಟ್ ರಿಪಬ್ಲಿಕ್:ಎ ಶಾರ್ಟ್ ಹಿಸ್ಟರಿ ಆಫ್ ದ ನ್ಯೂ ಇಂಡಿಯಾ ಪುಸ್ತಕ ಲೋಕಾರ್ಪಣೆಗೊಳಿಸಿದ ಮಾತನಾಡಿದ್ದ ಜೈರಾಂ ರಮೇಶ್, ಮೋದಿಯವನ್ನು ಟೀಕಿಸುವುದನ್ನು ಬಿಟ್ಟು, ಅವರು ಮಾಡಿದ ಕೆಲಸಗಳನ್ನು ಅರ್ಥೈಸುವ ಕಾರ್ಯವನ್ನು ನಾವು ಮಾಡಬೇಕಾಗಿದೆ. 2019ರ ಚುನಾವಣೆಯಲ್ಲಿ ಶೇ.37ರಷ್ಟು ಮತಹಂಚಿಕೆಯನ್ನು ಪಡೆದು ಪುನಃ ಹೇಗೆ ಅಧಿಕಾರಕ್ಕೆ ಬಂದರು, ಜನರನ್ನು ಅವರು ಹೇಗೆ ತಲುಪುತ್ತಿದ್ದಾರೆ ಎಂಬ ಬಗ್ಗೆ ವಿಶ್ಲೇಷಿಸಬೇಕಿದೆ ಎಂದು ಹೇಳಿದ್ದರು.