ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರ ನೋಟು ನಿಷೇಧದ ಕ್ರಮವು ಅತ್ಯಂತ ದಿಟ್ಟತನದ ಕ್ರಮವಾಗಿದೆ ಎಂದು ಗೂಗಲ್‌ನ ಭಾರತ ಸಂಜಾತ ಮುಖ್ಯಸ್ಥ ಸುಂದರ್ ಪಿಚೈ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಭ್ರಷ್ಟಾಚಾರ, ಕಪ್ಪು ಹಣ, ಭಯೋತ್ಪಾದನೆಗೆ ಒದಗುವ ಹಣದ ವಿರುದ್ಧ ಗುರಿ ಇರಿಸಿ ಮೋದಿ ನಡೆಸಿರುವ ಈ ದಾಳಿಯು ಅತ್ಯಂತ ಧೀರತನದ್ದಾಗಿದ್ದು ದೇಶವನ್ನು ಡಿಜಿಟಲ್ ಪಾವತಿಯತ್ತ ಮುನ್ನಡೆಸುವ ಅಮೋಘ ಕ್ರಮವಾಗಿದೆ ಎಂದು ಪಿಚೈ ಹೇಳಿದ್ದಾರೆ. ಅವರು ಇಕಾನಮಿಕ್ ಟೈಮ್ಸ್ ಗೆ ನೀಡಿದ ಸಂದರ್ಶನದಲ್ಲಿ ಈ ಮೆಚ್ಚುಗೆಯ ಮಾತುಗಳನ್ನು ಹೇಳಿದರು.
ಭಾರತದಲ್ಲಿನ ಸಣ್ಣ ಮತ್ತು ಮಧ್ಯಮ ಮಟ್ಟದ ಉದ್ಯಮಗಳಿಗೆ ತಾಂತ್ರಿಕ ಮೇಲುಗೈ ಒದಗಿಸುವ ನಿಟ್ಟಿನಲ್ಲಿ ಪಿಚೈ ಅವರು ಗೂಗಲ್ ನಿಂದ ಡಿಜಿಟಲ್ ಅನ್‌ಲಾಕ್‌ಡ್ ಮತ್ತು ಮೈ ಬ್ಯುಸಿನೆಸ್ ವೆಬ್‌ಸೈಟ್ ಎಂಬ ಎರಡು ಅಂತರ್‌ಜಾಲ ಸೌಕರ್ಯಗಳನ್ನು ಸಮರ್ಪಿಸಿದರು.
ಗೂಗಲ್ ಭಾರತದ ಫಿಕ್ಕೀ ಜತೆ ಕೈಜೋಡಿಸಿ ಅಭಿವೃದ್ಧಿಪಡಿಸಿರುವ ಡಿಜಿಟಲ್ ಅನ್‌ಲಾಕ್‌ಡ್ ಸೌಕರ್ಯವು ತರಬೇತಿ ಕಾರ್ಯಕ್ರಮವನ್ನು ಒಳಗೊಂಡಿದ್ದು ಇದರಿಂದ ಭಾರತದ ಸಹಸ್ರಾರು ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗೆ ಅಗತ್ಯವಿರುವ ಡಿಜಿಟಲ್ ಕೌಶಲವನ್ನು ನೀಡುತ್ತದೆ.
ಗೂಗಲ್ ಒದಗಿಸರುವ ಮೈ ಬ್ಯುಸಿನೆಸ್ ವೆಬ್‌ಸೈಟ್ ಕೇವಲ ಹತ್ತು ನಿಮಿಷಗಳಲ್ಲಿ ವೆಬ್‌ಸೈಟ್ ರೂಪಿಸುವುದಕ್ಕೆ ನೆರವಾಗುತ್ತದೆ. ಇದನ್ನು ಉಚಿತವಾಗಿ ಅಂತರ್‌ಜಾಲದಲ್ಲಿ ಒದಗಿಸಲಾಗಿದೆ.