ಹೊಸದಿಲ್ಲಿ : ನೋಟು ನಿಷೇಧದ ಬಳಿಕದಲ್ಲಿ 18 ಲಕ್ಷ ಮಂದಿ ತಮ್ಮ ಬ್ಯಾಂಕ್ ಖಾತೆಗೆ ಜಮೆ ಮಾಡಿರುವ ಹಣವು ಶಂಕಾಸ್ಪದವೆಂದು ಆದಾಯ ತೆರಿಗೆ ಇಲಾಖೆ ಅದರ ಮೇಲೆ ಕಣ್ಣಿಟ್ಟಿದ್ದು ಇದೀಗ ಇದರ ಅರ್ಧಾಂಶದಷ್ಟು ಮಂದಿ (ಅಂದರೆ 9 ಲಕ್ಷ ಮಂದಿ) ಜಮೆ ಮಾಡಿರುವ (ಕಪ್ಪು) ಹಣವನ್ನು ಸಂದೇಹಾಸ್ಪದ ವರ್ಗಕ್ಕೆ ಸೇರಿಸಿದೆ. ಆದರೆ ಮಾರ್ಚ್ 31ರಂದು ನೂತನ ತೆರಿಗೆ ಕ್ಷಮಾದಾನ (ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್) ಯೋಜನೆಯ ಗಡುವು ಮುಗಿದ ಬಳಿಕ ಈ ಮಂದಿಯ ವಿರುದ್ಧ ಕಾನೂನು ಕ್ರಮ ಆರಂಭವಾಗಲಿದೆ.
ಆಪರೇಶನ್ ಕ್ಲೀನ್ ಮನಿ ಕಾರ್ಯಾಚರಣೆಯಡಿ ಆದಾಯ ತೆರಿಗೆ ಇಲಾಖೆಯು ನೋಟು ನಿಷೇಧದ ಬಳಿಕದ 50 ದಿನಗಳ ಅವಧಿಯಲ್ಲಿ ಶಂಕಾಸ್ಪದವಾಗಿ ಐದು ಲಕ್ಷ ರೂ. ಮೀರಿ ತಮ್ಮ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಿರುವ ಸುಮಾರು 18 ಲಕ್ಷ ಜನರ ಬ್ಯಾಂಕ್ ಖಾತೆಗಳನ್ನು ಶಂಕಾಸ್ಪದವೆಂದು ಗುರುತಿಸಿ ಆ ಖಾತೆದಾರರಿಗೆ ಎಸ್‌ಎಂಎಸ್ ಅಥವಾ ಇ-ಮೇಲ್‌ಗಳನ್ನು ಕಳುಹಿಸಿದೆ. ತಮ್ಮ ಬ್ಯಾಂಕ್ ಖಾತೆಗಳಿಗೆ ಈ ರೀತಿ ಶಂಕಾಸ್ಪದ ಮೊತ್ತವನ್ನು ಜಮೆ ಮಾಡಿರುವ ಖಾತೆದಾರರಿಗೆ ಫೆಬ್ರವರಿ 15ರ ಒಳಗೆ ಅವುಗಳ ಮೂಲವನ್ನು ಬಹಿರಂಗಗೊಳಿಸಿ ಸ್ಪಷ್ಟೀಕರಣ ನೀಡುವಂತೆ ಆದಾಯ ತೆರಿಗೆ ಇಲಾಖೆ ಕೇಳಿಕೊಂಡಿದೆ.
ಆದಾಯ ತೆರಿಗೆ ಇಲಾಖೆ ಕಳುಹಿಸಿರುವ ಎಸ್‌ಎಂಎಸ್ ಅಥವಾ ಇಮೇಲ್‌ಗಳಿಗೆ ಫೆ.15ರ ಒಳಗೆ ಉತ್ತರಿಸದ ಬ್ಯಾಂಕ್ ಖಾತೆದಾರರಲ್ಲಿ , ತಮ್ಮ ಶಂಕಾಸ್ಪದ ಬ್ಯಾಂಕ್ ಖಾತೆ ಹಣಕ್ಕೆ ಸರಿಯಾದ ಕಾನೂನು ಸಮ್ಮತ ವಿವರಣೆ ಇರುವುದು ಅಗತ್ಯ ಮತ್ತು ಅದನ್ನು ಅವರು ತಮ್ಮ ಟ್ಯಾಕ್ಸ್ ರಿಟರ್ನ್ನಲ್ಲಿ ತೋರಿಸಬೇಕಾಗುತ್ತದೆ ಎಂದು ಸರಕಾರ ಹೇಳಿದೆ.
ಆದರೆ ಶಂಕಾಸ್ಪದ ಕಪ್ಪು ಹಣ ಜಮೆ ಮಾಡಿದವರು ತಮ್ಮ ಇನ್‌ಕಂ ಟ್ಯಾಕ್ಸ್ ರಿಟರ್ನ್ನಲ್ಲಿ ಅದನ್ನು ತೋರಿಸುವುದಷ್ಟೇ ಪರ್ಯಾಪ್ತವಾಗಲಾರದು; ಏಕೆಂದರೆ 2016-17ರ ಆದಾಯವು ಹಿಂದಿನ ಸಾಲಿನ ಆದಾಯಕ್ಕಿಂತ (ಕಾನೂನು ಸಮ್ಮತ ಮಿತಿಗಿಂತ) ಹೆಚ್ಚಿದ್ದರೆ ಅದನ್ನು ಕಪ್ಪು ಹಣವೆಂದೇ ಪರಿಗಣಿಸಲಾಗಿ ಅದರ ವಿರುದ್ಧ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು.
ನೋಟು ನಿಷೇಧ ಬಳಿಕದ 50 ದಿನಗಳ ಅವಧಿಯಲ್ಲಿ ತಮ್ಮ ಬ್ಯಾಂಕ್ ಖಾತೆಗಳಲ್ಲಿ ವಿಪರೀತ ಪ್ರಮಾಣದಲ್ಲಿ ಕಪ್ಪು ಹಣ ಜಮೆ ಮಾಡಿದವರು ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ ಮಾರ್ಚ್ 31ರ ಒಳಗೆ ಆ ಹಣದ ಶೇ.50ರಷ್ಟನ್ನು ತೆರಿಗೆ, ದಂಡ ಹಾಗೂ ಸರ್ಚಾರ್ಜ್ ರೂಪದಲ್ಲಿ ಕಟ್ಟಿ, ಶೇ.25ರಷ್ಟನ್ನು ನಾಲ್ಕು ವರ್ಷಗಳ ಅವಧಿಗೆ ನಿಬಡ್ಡಿಯಾಗಿ ಠೇವಣಿ ಇರಿಸಿ, ಶುದ್ಧ ಹಸ್ತರಾಗಿ ಹೊರಬರುವುದಕ್ಕೆ ಅವಕಾಶವಿದೆ.