ಸಂತೆಮರಹಳ್ಳಿ: ಯಳಂದೂರು ತಾಲೂಕಿನ ಕೊಮಾರನಪುರ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರಿಯಾಗಿ ಪಾಠ ಮಾಡುವುದಿಲ್ಲ. ನೀವು ಬೇರೆ ಶಾಲೆಗಳಿಗೆ ಸೇರಿಕೊಳ್ಳಿ ಎಂದು ಮುಖ್ಯ ಶಿಕ್ಷಕಿಯೇ ಹೇಳುತ್ತಿದ್ದಾರೆ. ಇವರಿಂದ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ ಎಂದು ಸಾರ್ವಜನಿಕರು ದೂರಿದ ಹಿನ್ನೆಲೆಯಲ್ಲಿ ಕೂಡಲೇ ಮುಖ್ಯ ಶಿಕ್ಷಕರಿಗೆ ನೋಟಿಸ್ ಜಾರಿ ಮಾಡಿ ಎಂದು ಶಾಸಕ ಎನ್.ಮಹೇಶ್ ಸೂಚನೆ ನೀಡಿದರು.
ಶುಕ್ರವಾರ ಯಳಂದೂರು ತಾಲೂಕಿನ ಗುಂಬಳ್ಳಿ ಗ್ರಾಮದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಕೊಮಾರನಪುರ ಗ್ರಾಮಸ್ಥರು ಇಲ್ಲಿನ ಶಾಲೆಯ ದುಸ್ಥಿತಿ ಬಗ್ಗೆ ಅರ್ಜಿ ಸಲ್ಲಿಸಿ ಇಲ್ಲಿನ ಶಿಕ್ಷಕರ ಬಗ್ಗೆ ಸಭೆಯಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟರು.
ಉಡಾಫೆ ಉತ್ತರ: ಮುಖ್ಯ ಶಿಕ್ಷಕಿ ಸರಿಯಾಗಿ ಶಾಲೆಗೆ ಬರುವುದಿಲ್ಲ. ಬೋಧನೆಯೂ ಸರಿಯಾಗಿಲ್ಲ. 8 ನೇ ತರಗತಿ ಮಕ್ಕಳಿಗೆ ಪಾಠ ಪ್ರವಚನಗಳು ಸರಿಯಾಗಿ ನಡೆಯುತ್ತಿಲ್ಲ. ಈ ಬಗ್ಗೆ ಪೋಷಕರು ವಿಚಾರಿಸಿದರೆ ಉಡಾಫೆ ಉತ್ತರ ನೀಡುತ್ತಾರೆ. ವರ್ಗಾವಣೆ ಪತ್ರ ಪಡೆದು ಖಾಸಗಿ ಶಾಲೆಗಳಿಗೆ ಸೇರಿಸಿ ಎನ್ನುತ್ತಾರೆ. ಇವರು ಖಾಸಗಿ ಶಾಲೆಗಳ ಜೊತೆ ಒಡಂಬಡಿಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಈ ಬಗ್ಗೆ ಮಾತನಾಡಿದ ಶಾಸಕರು, ಸ್ಥಳದಲ್ಲೇ ಇದ್ದ ಬಿಆರ್‌ಸಿ ಮಹೇಶ್ ಅವರಿಗೆ ಈ ಬಗ್ಗೆ ವರದಿ ನೀಡಿ ನೋಟಿಸ್ ಜಾರಿ ಮಾಡಿ ಎಂದು ಆದೇಶಿಸಿದರು.
ಹಾಲಿನ ಡೇರಿ ಸಮಸ್ಯೆ: ಗ್ರಾಮದಲ್ಲಿ ಇರುವ ಹಾಲಿನ ಡೇರಿ ಖಾಸಗಿ ವ್ಯಕ್ತಿಯೊಬ್ಬರು ನಡೆಸುತ್ತಿದ್ದಾರೆ. ಇವರು ಮನೆಯಲ್ಲಿ ಡೇರಿ ನಡೆಸುತ್ತಾರೆ. ವಿನಾ ಕಾರಣ ಹೈನುಗಾರರಿಗೆ ಕಿರುಕುಳ ನೀಡುತ್ತಾರೆ. ಹಾಲು ತೆಗೆದುಕೊಳ್ಳಲು ಹಿಂದೇಟು ಹಾಕುತ್ತಾರೆ. ಹಾಗಾಗಿ ಬೇರೆ ಸ್ಥಳದಲ್ಲಿ ಹಾಲಿನ ಡೇರಿ ನಡೆಸಬೇಕು. ಹಾಲಿಗೆ ನೀಡುವ 5 ರೂ. ಸಹಾಯ ಧನವೂ ಹೈನುಗಾರರಿಗೆ ಸೇರುತ್ತಿಲ್ಲ ಎಂದು ಗ್ರಾಮಸ್ಥರು ದೂರಿದರು. ಈ ಬಗ್ಗೆ ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕು. ನಮಗೂ ಇದಕ್ಕೂ ಸಂಬಂಧವಿಲ್ಲದ ಹಾಗೆ ಕೂರಬಾರದು. ಇದಕ್ಕೆ ಸರ್ಕಾರಿ ಜಾಗದಲ್ಲಿ ಪ್ರತ್ಯೇಕ ಕಟ್ಟಡ ನಿರ್ಮಾಣಕ್ಕೆ ಕ್ರಮ ವಹಿಸಿ ಎಂದು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಸ್ತೆ ಕಳಪೆ ಕಾಮಗಾರಿ: ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ನಿರ್ಮಾಣವಾಗುತ್ತಿರುವ ಕಾಂಕ್ರೀಟ್ ರಸ್ತೆ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದೆ. ಕೆಲವೆಡೆ ಚರಂಡಿ ನಿರ್ಮಿಸಿ ರಸ್ತೆಯನ್ನು ಹಾಗೇ ಬಿಡಲಾಗಿದೆ. 6 ಇಂಚು ಕಾಂಕ್ರಿಟ್ ಬದಲು ಮೂರರಿಂದ ನಾಲ್ಕು ಇಂಚು ಕಾಂಕ್ರಿಟ್ ಹಾಕಿದ್ದಾರೆ. ಅಲ್ಲದೆ ಗ್ರಾಮದ ಹೃದಯಭಾಗದ ಬಸವೇಶ್ವರ ದೇಗುಲದ ರಸ್ತೆ ಕಾಮಗಾರಿ ಇನ್ನೂ ಆರಂಭಿಸಿಲ್ಲ ಎಂದು ಗ್ರಾಮಸ್ಥರು ದೂರಿದರು. ಇಲಾಖೆ ಎಂಜಿನಿಯರ್ ಸುರೇಂದ್ರ ಈ ಬಗ್ಗೆ ಮಾಹಿತಿ ನೀಡಿ ಈಗಾಗಲೇ ಮುಂದುವರಿದ ಕಾಮಗಾರಿಗೆ 60 ಲಕ್ಷ ರೂ. ಬಿಡುಗಡೆಯಾಗಿದ್ದು ಶೀಘ್ರ ಕಾಮಗಾರಿ ಆರಂಭಿಸುವ ಭರವಸೆ ನೀಡಿದರು.
4.61ಕೋಟಿ ರೂ.ಹಣ ಬಿಡುಗಡೆ: ಗುಂಬಳ್ಳಿ ಗ್ರಾಪಂ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಈ ಸಾಲಿನಲ್ಲಿ 4.61 ಕೋಟಿ ರೂ., ಅನುದಾನ ಬಿಡುಗಡೆಯಾಗಿದೆ. ಗ್ರಾಮಸ್ಥರು ಮತ್ತೂಂದು ಶುದ್ಧ ಕುಡಿಯುವ ನೀರಿನ ಘಟಕ ಕೇಳಿದ್ದಾರೆ. ಆದರೆ, ನಮ್ಮ ವ್ಯಾಪ್ತಿಯಲ್ಲಿ 22 ನೀರಿನ ಘಟಕ ಸ್ಥಾಪನೆಯಾಗಿದ್ದರೂ ಇದರ ಸಮರ್ಪಕ ನಿರ್ವಹಣೆ ಇಲ್ಲದ ಕಾರಣ ಕೆಟ್ಟು ನಿಂತಿದೆ. ಈ ಬಗ್ಗೆ ಈಗಾಗಲೇ ಸಂಬಂಧಪಟ್ಟ ಇಲಾಖೆಗೆ ಇದನ್ನು ಗುತ್ತಿಗೆ ಪಡೆದ ಏಜೆನ್ಸಿಯನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಇದನ್ನು ದುರಸ್ತಿ ಪಡಿಸಬೇಕೆಂದು ಶಿಫಾರಸ್ಸು ಮಾಡಲಾಗಿದೆ ಎಂದು ಸಭೆಗೆ ಶಾಸಕರು ಮಾಹಿತಿ ನೀಡಿದರು.
ಈ ಸಭೆಯಲ್ಲಿ ಒಟ್ಟು 13 ಇಲಾಖೆಗಳಿಗೆ 75 ಅರ್ಜಿ ಸಲ್ಲಿಕೆಯಾದವು. ಇದೇ ವೇಳೆ ಅರ್ಹ ಫಲಾನುಭವಿಗಳಿಗೆ ಕಂದಾಯ, ಪಶುಸಂಗೋಪನೆ ಹಾಗೂ ಪಂಚಾಯತ್ ರಾಜ್ ಇಲಾಖೆಯಿಂದ ಆದೇಶ ಪತ್ರ ಹಾಗೂ ವಿಕಲಚೇತನರಿಗೆ ತ್ರಿಚಕ್ರ ವಾಹನ ವಿತರಿಸಲಾಯಿತು. ಗ್ರಾಪಂ ಸದಸ್ಯ ಪ್ರಕಾಶ್‌ಮೂರ್ತಿ, ತಹಶೀಲ್ದಾರ್ ವರ್ಷಾ, ಇಒ ಬಿ.ಎಸ್.ರಾಜು, ಪಿಡಿಒ ಮಹೇಶ್, ಕಾರ್ಯದರ್ಶಿ ರಘುನಾಥ್, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಗ್ರಾಪಂ ಸದಸ್ಯರು ಲಂಚ ಕೇಳುತ್ತಾರೆ: ವಸತಿ ಯೋಜನೆ ಮನೆಗಳ ಬಿಲ್ ಪಾವತಿಸಲು 4 ಕಂತುಗಳಲ್ಲಿ ಹಣ ಬಿಡುಗಡೆಯಾಗುತ್ತದೆ. ಇದರಲ್ಲಿ ಪ್ರತಿ ಬಿಲ್‌ಗೂ 5 ಸಾವಿರ ಲಂಚ ನೀಡಿ ಎಂದು ಚುನಾಯಿತ ಗ್ರಾಪಂ ಸದಸ್ಯರೇ ಲಂಚ ಕೇಳುತ್ತಾರೆ ಎಂದು ಮಹಿಳೆಯೊಬ್ಬರು ಶಾಸಕ ಮಹೇಶ್‌ರಿಗೆ ದೂರು ಹೇಳಿದರು. ಇದಕ್ಕೆ ತಾಪಂ ಇಒ ಮಾತನಾಡಿ, ಯಾವುದೇ ಕಾರಣಕ್ಕೂ ಹಣ ನೀಡಬೇಡಿ. ನೇರವಾಗಿ ಪಂಚಾಯಿತಿ ಕಚೇರಿಯಲ್ಲಿ ಬಿಲ್ ಮಾಡಿಸಿಕೊಳ್ಳಿ. ಜಿಪಿಎಸ್‌ನ ಫೋಟೋಗೂ ಹಣ ಕೇಳುವ ಬಗ್ಗೆ ದೂರುಗಳಿದ್ದು ಮಂಜುನಾಥ್ ಎಂಬ ವ್ಯಕ್ತಿಯನ್ನು ತಕ್ಷಣದಿಂದಲೇ ಸೇವೆಯಿಂದ ವಜಾ ಮಾಡುತ್ತಿದ್ದು ಯಾರೂ ಹಣ ನೀಡಬಾರದು ಎಂದು ಮನವಿ ಮಾಡಿದರು.