ಭಾರತದಲ್ಲಿ ಈ ವರ್ಷ 16ನೇ ಜನಗಣತಿ ನಡೆಯಲಿದೆ. ಇದು ವಿಶ್ವದಲ್ಲಿ ನಡೆಯುವ ಅತೀ ದೊಡ್ಡ ಜನಗಣತಿಯಾಗಿದ್ದು ದೇಶದಲ್ಲಿ ಪ್ರತೀ 10 ವರ್ಷಗಳಿಗೊಮ್ಮೆ ಜನಗಣತಿ ನಡೆಯುತ್ತದೆ. ದೇಶದಲ್ಲಿರುವ ಜನಸಂಖ್ಯೆಯನ್ನು ಗಣತಿ ಮಾಡುವ ಜತೆಯಲ್ಲಿ ಜನರು ಎದುರಿಸುತ್ತಿರುವ ಮೂಲಸೌಕರ್ಯಗಳ ಕೊರತೆ, ಸರಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ಸಂಖ್ಯೆ ಸಹಿತ ವಿವಿಧ ಅಂಕಿಅಂಶಗಳನ್ನು ಸಂಗ್ರಹಿಸಲಾಗುತ್ತದೆ. ಈ ಅಂಕಿಅಂಶಗಳ ಆಧಾರದಲ್ಲಿ ಸರಕಾರ ತನ್ನ ಮುಂದಿನ ಅಭಿವೃದ್ಧಿ ಯೋಜನೆಗಳ ನೀಲನಕಾಶೆಯನ್ನು ರೂಪಿಸುತ್ತದೆ.
ಈ ಬಾರಿಯ ಜನಗಣತಿಯನ್ನು ಅತ್ಯಂತ ನಿಖರವಾಗಿ ನಡೆಸಲು ಉದ್ದೇಶಿಸಲಾಗಿದ್ದು , ಸಂಚಾರ ದುಸ್ತರವಾಗಿರುವ ಪ್ರದೇಶಗಳಲ್ಲಿನ ನಿವಾಸಿಗಳ ಬಗೆಗಿನ ಮಾಹಿತಿಯನ್ನು ಕಲೆ ಹಾಕಲು ಹೆಲಿಕಾಪ್ಟರ್‌ಗಳನ್ನು ಬಳಸಿಕೊಳ್ಳಲು ಸರಕಾರ ನಿರ್ಧರಿಸಿದೆ. 2011ರ ಜನಗಣತಿಯಲ್ಲಿ ಈ ಪ್ರಯೋಗವನ್ನು ಕೊನೇ ಹಂತದಲ್ಲಿ ನಡೆಸಲಾಗಿತ್ತು.
ಕಳೆದ ವರ್ಷವೇ ಜನಗಣತಿ ಪ್ರಕ್ರಿಯೆಗಳು ಆರಂಭವಾಗಿವೆಯಾದರೂ ಕೊರೊನಾದಿಂದ ಈ ಪ್ರಕ್ರಿಯೆಗಳಿಗೆ ಕೊಂಚ ಹಿನ್ನಡೆಯಾಗಿತ್ತು. ಹಾಲಿ ಜನಗಣತಿ ವೇಳೆ 31 ವಿಷಯಗಳನ್ನು ಒಳಗೊಂಡ 34 ಪ್ರಶ್ನೆಗಳನ್ನು ಕೇಳಲಾಗುತ್ತದೆ. ಪ್ರತೀ ಗಣತಿ ಅವಧಿಯಲ್ಲಿಯೂ ಕೇಳಲಾಗುವ ಪ್ರಶ್ನೆಗಳೊಂದಿಗೆ ಇಂಟರ್ನೆಟ್ ಸಂಪರ್ಕದಂಥ ಆಧುನಿಕ ಸೌಲಭ್ಯಗಳ ಬಗೆಗೂ ಜನರಿಂದ ಮಾಹಿತಿಯನ್ನು ಕಲೆಹಾಕಲಾಗುವುದು.
ಮೊದಲ ಬಾರಿಗೆ ಇದು ಡಿಜಿಟಲ್ ಜನಗಣತಿಯಾಗಿದ್ದು, ಇದರಲ್ಲಿ ಅಧಿಕಾರಿಗಳು ಮೊಬೈಲ್ ಮೂಲಕ ಡಾಟಾವನ್ನು ಸಂಗ್ರಹಿಸಲಿದ್ದಾರೆ. ಇದಕ್ಕಾಗಿ ವಿಶೇಷ ಆ್ಯಪ್ ಅನ್ನು ಅಭಿವೃದ್ಧಿಪಡಿಸಿದೆ. 2011ರಲ್ಲಿ ನಡೆದ 15ನೇ ಜನಗಣತಿಯ ಪ್ರಕಾರ ದೇಶದಲ್ಲಿ ಒಟ್ಟಾರೆ ಜನಸಂಖ್ಯೆ 121,08,54,977 ಆಗಿತ್ತು. ಜಾಗತಿಕ ಜನಸಂಖ್ಯೆಯಲ್ಲಿ ಭಾರತದ ಕೊಡುಗೆ ಶೇ.17.5ರಷ್ಟು. ಹಾಲಿ ಅಂದಾಜಿನ ಪ್ರಕಾರ ಮಾರ್ಚ್ ಅಂತ್ಯದ ವೇಳೆಗೆ ಜನಗಣತಿಯ ಸಂಕ್ಷಿಪ್ತ ಚಿತ್ರಣ ಲಭ್ಯವಾಗುವ ಸಾಧ್ಯತೆಗಳಿವೆ.