ದೇವನಹಳ್ಳಿ: ತಾಲೂಕಿನ ಕಾರಹಳ್ಳಿ ಬಿಎಸ್‌ಎಫ್ ರಸ್ತೆಯಲ್ಲಿರುವ ಸರ್ಕಾರಿ ಪ್ರೌಢ ಶಾಲೆ ಮುಖ್ಯ ಶಿಕ್ಷಕಿ ವೇದಾವತಿ ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿದ್ದು, ಸಹಶಿಕ್ಷಕರು ಹಾಗೂ ಮಕ್ಕಳೊಂದಿಗೆ ಬೇಜವಾಬ್ದಾರಿ ಹಾಗೂ ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ತಕ್ಷಣ ಅವರನ್ನುಅಮಾನತುಗೊಳಿಸಬೇಕು ಎಂದು ಪೋಷಕರು ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಘಟನೆ ಮಾಹಿತಿ ಪಡೆದು ಸ್ಥಳಕ್ಕೆ ಧಾವಿಸಿದ ಡಿಡಿಪಿಐ ಕೃಷ್ಣ ಮೂರ್ತಿ, ಪೋಷಕರು ಹಾಗೂ ಗ್ರಾಮಸ್ಥರ ಮನವೊಲಿಕೆಗೆ ಪ್ರಯತ್ನಿಸಿದರು.
ಕೂಡಲೇ ಅಮಾನತುಗೊಳಿಸಿ: ಪೋಷಕ ಮುನೇಗೌಡ ಮಾತನಾಡಿ, ಅಸಭ್ಯವಾಗಿ ವರ್ತಿಸುವ ಮುಖ್ಯ ಶಿಕ್ಷಕಿ ವರ್ಗಾ ವಣೆ ಅಥವಾ ಅಮಾನತುಗೊಳಿಸಬೇಕು. ಈ ಸಂಬಂಧ ಹಲವು ಬಾರಿ ದೂರು ನೀಡಿದ್ದರೂ ಕ್ರಮಕೈಗೊಂಡಿಲ್ಲ. ಶಿಕ್ಷಕಿಗೆ ಸುಮಾರು ಬಾರಿ ಎಚ್ಚರಿಕೆ ನೀಡಿದರು ಪ್ರಯೋಜನವಾಗಿಲ್ಲ. ಶಾಲೆಯ ಶಿಕ್ಷಕರು ಹಾಗೂ ಮಕ್ಕಳು ಇವರ ಮಾತುಗಳಿಂದ ಬೇಸತ್ತಿದ್ದಾರೆ. ಕೂಡಲೇ ಅಮಾನತುಗೊಳಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ದುರ್ನಡತೆಯೇ ಪ್ರತಿಭಟನೆಗೆ ಕಾರಣ: ಗ್ರಾಪಂ ಅಧ್ಯಕ್ಷ ಎ.ದೇವರಾಜ್ ಮಾತನಾಡಿ, ಮಕ್ಕಳಿಗೆ ಬಾಯಿಗೆ ಬಂದಂತೆ ಮಾತನಾಡುವುದು ನಮ್ಮ ಗಮನಕ್ಕೆ ಬಂದಿದೆ. ಈ ಸಂಬಂದ ಹಲವು ಬಾರಿ ವೇದಾವತಿಯವರಿಗೆ ಎಚ್ಚರಿಸಲಾಗಿದೆ. ಆದರೂ ತಿದ್ದಿಕೊಳ್ಳದೇ ತಮ್ಮ ದುರ್ನಡತೆಯಿಂದ ಶಾಲಾ ವಾತಾವರಣ ಹಾಳು ಮಾಡುತ್ತಿದ್ದಾರೆ. ಈ ಸಂಬಂಧ ಬಿಇಒ ಹಾಗೂ ಸಿಇಒ ಅವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಹೀಗಾಗಿಯೇ ಗ್ರಾಮಸ್ಥರು ಪ್ರತಿಭಟನೆಗೆ ಮುಂದಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆಯುಕ್ತರಿಗೆ ವರದಿ: ಡಿಡಿಪಿಐ ಕೃಷ್ಣಮೂರ್ತಿ ಮಾತನಾಡಿ, ಮುಖ್ಯ ಶಿಕ್ಷಕಿ ವೇದಾವತಿ ಅಶಿಸ್ತು, ಕರ್ತವ್ಯ ನಿರ್ಲಕ್ಷ್ಯತನ, ಬೇಜ ವಾಬ್ದಾರಿತನ ಕಂಡು ಬಂದಿದೆ. ಮಕ್ಕಳು ಮತ್ತು ಪೋಷಕರು ಮುಖ್ಯ ಶಿಕ್ಷಕಿ ಬದಲಾವಣೆಗೆ ಮನವಿ ಮಾಡಿದ್ದಾರೆ. ಹೀಗಾಗಿ ಇದೇ ಶಾಲೆಯ ಹಿರಿಯ ಶಿಕ್ಷಕಿ ದಿವಾಂಬರಿ ಅವರನ್ನು ಪ್ರಭಾರ ಮುಖ್ಯಶಿಕ್ಷಕಿಯಾಗಿ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ. ಮುಖ್ಯ ಶಿಕ್ಷಕಿ ವೇದಾವತಿ, ಕರ್ತವ್ಯ ನಿರ್ಲಕ್ಷದ ಕುರಿತು ಆಯುಕ್ತರ ಗಮನಕ್ಕೆ ತರಲಾಗಿದೆ. ಆಯುಕ್ತರು ಬೆಳಗಿನಿಂದ ಆಗಿರುವ ಬೆಳವಣಿಗೆಗಳ ವರದಿ ಕಳುಹಿಸಿಕೊಡುವಂತೆ ಸೂಚಿಸಿ ದ್ದಾರೆ. ಶಿಸ್ತಿನ ಕ್ರಮಕ್ಕೆ ಶಿಫಾರಸು ಮಾಡಿದೆಎಂದು ಹೇಳಿದರು.
ತಾಪಂ ಸದಸ್ಯ ಕಾರಹಳ್ಳಿ ಶ್ರೀನಿವಾಸ್, ಗ್ರಾಪಂ ಮಾಜಿ ಅಧ್ಯಕ್ಷ ರಾಜೇಂದ್ರ, ಎಂಪಿಸಿಎಸ್ ಅಧ್ಯಕ್ಷ ಭೈರೇಗೌಡ, ಮಕ್ಕಳ ರಕ್ಷಣಾ ಜಿಲ್ಲಾ ಘಟಕ ಅಧಿಕಾರಿ ಶ್ರೀಧರ್ ಯಾದವ್, ಪೋಷಕರಾದ ಮುನಿರಾಜು, ಮುನಿಕೃಷ್ಣಪ್ಪ, ಈಶ್ವರಪ್ಪ, ರವಿ (ಕೇಬಲ್), ನಾಗರಾಜು ಇದ್ದರು.