Advertisement

ದಾವಣಗೆರೆಯಲ್ಲೇ ಎಐಐಎಂಎಸ್‌ ಸ್ಥಾಪಿಸಲು ಆಗ್ರಹ

09:51 AM Jan 10, 2019 | Team Udayavani |

ದಾವಣಗೆರೆ: ಮಧ್ಯ ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆ ತಾಲೂಕಲ್ಲಿ ಅಖೀಲ ಭಾರತ ವೈದ್ಯಕೀಯ ವಿಜ್ಞಾನಗಳ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆ (ಎಐಐಎಂಎಸ್‌)ಸ್ಥಾಪಿಸಬೇಕೆಂದು ನಗರದ ಹಲವು ಸಂಘ-ಸಂಸ್ಥೆಗಳ ಮುಖಂಡರು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

Advertisement

ಬುಧವಾರ, ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಕೀಲ ರೇವಣ್ಣ ಬಳ್ಳಾರಿ, ಕರ್ನಾಟಕದಲ್ಲಿ ಎಐಐಎಂಎಸ್‌ ಸ್ಥಾಪಿಸಲು ಕೇಂದ್ರ ಸರ್ಕಾರ ಚಿಂತಿಸಿದೆ ಎಂಬ ಮಾಹಿತಿ ಇದೆ. ಶೈಕ್ಷಣಿಕ ನಗರಿ, ಮಧ್ಯ ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆ ಎಐಐಎಂಎಸ್‌ ಆರಂಭಿಸಲು ಅತ್ಯಂತ ಸೂಕ್ತ ಸ್ಥಳವಾಗಿದೆ. ಹಾಗಾಗಿ ಕೇಂದ್ರ ಸರ್ಕಾರ ಸಕಲ ಸೌಲಭ್ಯವಿರುವ ದಾವಣಗೆರೆ ಅಕ್ಕ ಪಕ್ಕದಲ್ಲೆ ಎಐಐಎಂಎಸ್‌ ಸ್ಥಾಪಿಸಲು ಕ್ರಮ ವಹಿಸಬೇಕು ಎಂದರು.

ದಶಕಗಳ ಹಿಂದೆಯೇ ದಾವಣಗೆರೆ 2ನೇ ರಾಜಧಾನಿ ಆಗಬೇಕಿತ್ತು. ರಾಜಕೀಯ ಕಾರಣದಿಂದಾಗಿ ಅದರಿಂದ ವಂಚಿತವಾಯಿತು. ಇತ್ತೀಚೆಗೆ ಐಐಟಿ ವಿಷಯದಲ್ಲೂ ಹಾಗೆಯೇ ಆಯಿತು. ಮೇಲಾಗಿ ದಾವಣಗೆರೆ ಇಲ್ಲವೇ ಕೊಂಡಜ್ಜಿಯಲ್ಲೇ ಐಐಟಿ ಸ್ಥಾಪಿಸಬೇಕೆಂದು ನಾವು ಹೋರಾಟ ಮಾಡಿದಾಗ ಯಾವ ಜನಪ್ರತಿನಿಧಿಗಳು ಸಹಕಾರ ನೀಡಲಿಲ್ಲ. ನಿಜಕ್ಕೂ ಇದು ದೌರ್ಭಾಗ್ಯದ ಸಂಗತಿ. ನಮ್ಮ ಹೋರಾಟ ಸ್ವಾರ್ಥ ಸಾಧನೆಗಲ್ಲ. ಐಐಟಿ, ಎಐಐಎಂಎಸ್‌ನಂತಹ ಸಂಸ್ಥೆ ದಾವಣಗೆರೆಯಲ್ಲಿ ಸ್ಥಾಪಿತವಾದಲ್ಲಿ ಸಾವಿರಾರು ಜನರಿಗೆ ಉದ್ಯೋಗ ದೊರೆಯುವ ಜತೆಗೆ ಈ ಭಾಗ ಮತ್ತಷ್ಟು ಅಭಿವೃದ್ಧಿಗೆ ಸಹಕಾರಿ ಆಗಲಿದೆ ಎಂದು ಹೇಳಿದರು.

ಹೋರಾಟಗಾರ ಎಂ.ಎಸ್‌.ಕೆ.ಶಾಸ್ತ್ರಿ ಮಾತನಾಡಿ, ಹುಚ್ಚವ್ವನಹಳ್ಳಿ-ರಾಂಪುರದ ಬಳಿ 1600 ಎಕರೆ ಸರ್ಕಾರದ ಭೂಮಿ ಇದೆ. ಅಲ್ಲಿ ಎಐಐಎಂಎಸ್‌ ಸ್ಥಾಪಿಸಬಹುದು. ಈ ವಿಚಾರವಾಗಿ ಶೀಘ್ರದಲ್ಲೇ ಪ್ರಧಾನಿ ನರೇಂದ್ರ ಮೋದಿಯವರನ್ನ ನಿಯೋಗದ ಮೂಲಕ ಭೇಟಿಯಾಗಿ, ಮನವರಿಕೆ ಮಾಡಿಕೊಡಲಾಗುವುದು ಎಂದರು.

ಈ ಹಿಂದೆ ದಾವಣಗೆರೆಯಲ್ಲೇ ಐಐಟಿ ಸ್ಥಾಪನೆ ಆಗಬೇಕೆಂದು ತೀವ್ರ ಹೋರಾಟ ನಡೆಸಿದೆವು. ನ್ಯಾಯಾಲಯದ ಮೊರೆ ಸಹ ಹೋಗಿದ್ದೆವು. ದುರ್ಬಲ ಸಂಸದರ ಪಡೆದ ಫಲವಾಗಿ ನಮಗೆ ಆ ವಿಚಾರದಲ್ಲಿ ಹಿನ್ನಡೆ ಆಯಿತು. ಚಿತ್ರದುರ್ಗ ಜಿಲ್ಲೆಗೆ ಸೇರಿದ ವ್ಯಕ್ತಿಯನ್ನು ಸಂಸದರನ್ನಾಗಿ ಆಯ್ಕೆ ಮಾಡಿದ ಅಪರಾಧಕ್ಕೆ ನಾವು ಶಿಕ್ಷೆ ಅನುಭವಿಸುವಂತಾಗಿದೆ. ಮಧ್ಯ ಕರ್ನಾಟಕದ ದಾವಣಗೆರೆಯಲ್ಲೇ ಐಐಟಿ ಸ್ಥಾಪನೆ ಆಗಬೇಕೆಂದು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಹೋರಾಟ ನಡೆಸುವುದಾಗಿ ಹೇಳಿದರು.

Advertisement

ಚೇಂಬರ್‌ ಆಫ್‌ ಕಾಮರ್ಸ್‌ ಕಾರ್ಯದರ್ಶಿ ಅಜ್ಜಂಪುರ ಶೆಟ್ರಾ ಶಂಭುಲಿಂಗಪ್ಪ, ಮೃತ್ಯುಂಜಯ ಎನ್‌. ಹಿರೇಮಠ, ವಿಭೂತಿ ಬಸವಾನಂದ, ದುರ್ಗಾಂಬಿಕಾ ದೇವಸ್ಥಾನದ ಧರ್ಮದರ್ಶಿ ಗೌಡ್ರ ಚನ್ನಬಸಪ್ಪ, ಅಕ್ಕ ಮಹಾದೇವಿ ಸಮಾಜದ ಅಧ್ಯಕ್ಷೆ ನೀಲಗುಂದ ಜಯ್ಯಮ್ಮ ಸಹ ದಾವಣಗೆರೆಯಲ್ಲೇ ಎಐಐಎಂಎಸ್‌ ಸ್ಥಾಪನೆ ಆಗಬೇಕೆಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next