Advertisement

ನೇಕಾರರ ಬೇಡಿಕೆ ಈಡೇರಿಕೆಗೆ ಆಗ್ರಹ

12:35 PM Sep 04, 2020 | Suhan S |

ದೊಡ್ಡಬಳ್ಳಾಪುರ: ನೇಕಾರರು ಕೋವಿಡ್‌ -19ನಿಂದಾಗಿ ಸಂಕಷ್ಟಕ್ಕೀಡಾಗಿದ್ದು, ಸರ್ಕಾರ ನೇಕಾರರಿಂದ ನೇರವಾಗಿ ಬಟ್ಟೆ ಖರೀದಿಸಬೇಕು. ನೇಕಾರರನ್ನು ಅಸಂಘಟಿತ ಕಾರ್ಮಿಕ ವಲಯಕ್ಕೆ ಸೇರಿಸಬೇಕು. ಆರ್ಥಿಕ ನೆರವು ನೀಡಲು ಕ್ರಮ ಕೈಗೊಳ್ಳಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಶಾಸಕ ಟಿ.ವೆಂಕಟರಮಣಯ್ಯ ನೇತೃತ್ವದಲ್ಲಿ ನೇಕಾರರ ಹೋರಾಟ ಸಮಿತಿ ನಿಯೋಗ ಜವಳಿ ಸಚಿವ ಶ್ರೀಮಂತ ಪಾಟೀಲ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.

Advertisement

ನೇಕಾರರನ್ನು ಅಸಂಘಟಿತ ಕಾರ್ಮಿಕರ ಪಟ್ಟಿಗೆ ಸೇರಿಸಬೇಕು. ಬಡ್ಡಿ ರಹಿತ ಸಾಲ, ಆರ್ಥಿಕ ನೆರವು ನೀಡಬೇಕು. ನೇಕಾರ ಕಾರ್ಮಿಕರಿಗೆ, ಮಗ್ಗ ಪೂರ್ವ ಚಟುವಟಿಕೆಯಲ್ಲಿ ತೊಡಗಿರುವ ಎಲ್ಲರಿಗೂ ಗುರುತಿನ ಚೀಟಿ ನೀಡಬೇಕು ಎನ್ನುವ ಒತ್ತಾಯ ಗಳನ್ನು ಈಗಾಗಲೇ ಸರ್ಕಾರದ ಮುಂದಿಡಲಾಗಿದೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡ ನೇಕಾರರ ಕುಟುಂಬಕ್ಕೆ ತ್ವರಿತವಾಗಿ ಪರಿಹಾರ ನೀಡಬೇಕು. ಸರ್ಕಾರ ಸೀರೆ ಖರೀದಿಗೆ ಪ್ರಸ್ತಾವನೆ ಪಡೆದಿದ್ದರೂ ಇನ್ನು ಪ್ರಕ್ರಿಯೆ ನಡೆಯದೇ ವಿಳಂಬ ಸೇರಿದಂತೆ ಮತ್ತಿತರ ಸಮಸ್ಯೆಗಳಿಂದ ತೊಂದರೆಗೀಡಾಗಿರುವ ನೇಕಾರರ ನೆರವಿಗೆ ಬರುವಂತೆ ಜವಳಿ ಸಚಿವರಿಗೆ ಶಾಸಕ ಟಿ.ವೆಂಕಟರಮಣಯ್ಯ ಹಾಗೂ ನೇಕಾರರ ಹೋರಾಟ ಸಮಿತಿ ಅಧ್ಯಕ್ಷ ಬಿ.ಜಿ.ಹೇಮಂತರಾಜ್‌ ಒತ್ತಾಯಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಜವಳಿ ಸಚಿವರು, ಸೀರೆ ದಾಸ್ತಾನು ಖರೀದಿಸಲು ಶೀಘ್ರವೇ ನೇಯ್ಗೆ ಉದ್ಯಮ ಇರುವ ವಿಧಾನಸಭಾ ಕ್ಷೇತ್ರದ ಶಾಸಕರ ನಿಯೋಗವನ್ನು ಮುಖ್ಯಮಂತ್ರಿಗಳ ಬಳಿ ಕರೆದೊಯ್ದು ಹಣ ಬಿಡುಗಡೆ ಬಗ್ಗೆ ಚರ್ಚಿಸಲಾಗುವುದು. ನೇಕಾರರ ಬೇಡಿಕೆಗಳ ಈಡೇರಿಕೆಗೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ಮಾಡುವುದಾಗಿ ಹಾಗೂ ಶೀಘ್ರವೇ ದೊಡ್ಡಬಳ್ಳಾಪುರಕ್ಕೆ ಭೇಟಿ ನೀಡುವುದಾಗಿ ಭರವಸೆ ನೀಡಿದರು.

ಈ ವೇಳೆ ಸಂಘದ ಉಪಾಧ್ಯಕ್ಷ ಕೆ.ಜಿ.ಗೋಪಾಲ್, ಎಸ್‌.ಎನ್‌.ಶಿವರಾಮು, ಜೆ.ಎಸ್‌.ಮಂಜುನಾಥ್‌, ರಂಗಸ್ವಾಮಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next