Advertisement

ವಿವಿಧ ಬೇಡಿಕೆ ಈಡೇರಿಕೆಗೆ ರೈತರ ಆಗ್ರಹ

02:33 PM Apr 27, 2022 | Team Udayavani |

ಹೊಸಪೇಟೆ: ರೈತರ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮಂಗಳವಾರ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಪದಾಧಿಕಾರಿಗಳು ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ತಾಲೂಕು ಕಚೇರಿ ಉಪ ತಹಶೀಲ್ದಾರ್‌ ಶ್ರೀಧರ ಅವರಿಗೆ ಸಲ್ಲಿಸಿದರು.

Advertisement

ರೈತರು ಬೆಳೆದ ಭತ್ತ, ರಾಗಿ, ಜೋಳಗಳನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ ಸಂಪೂರ್ಣವಾಗಿ ಖರೀದಿಸಬೇಕು. ವಿದ್ಯುತ್‌ಬಿಲ್‌ ಮನ್ನಾ ಮಾಡಿ, ಟ್ರಾಕ್ಟರ್‌ ಹಾಗೂ ಇತರೆ ಕೃಷಿ ಉಪಕರಣಗಳ ಗರಿಷ್ಠ ಮಾರುಕಟ್ಟೆ ಧಾರಣೆ(ಎಂಆರ್‌ಪಿ)ಯನ್ನು ನಿಗದಿ ಮಾಡಿ ಸಾರ್ವಜನಿಕವಾಗಿ ಪ್ರಕಟಿಸಬೇಕು. ಕುಂಠಿತವಾಗಿರುವ ಏತನೀರಾವರಿಯನ್ನು ತಾಲೂಕಿನಲ್ಲಿ ಪೂರ್ಣಗೊಳಿಸಬೇಕು. ರೈತರು ಅನುಭವಿಸುತ್ತಿರುವ ಮತ್ತಿತರ ಸಮಸ್ಯೆಗಳನ್ನು ಕೂಡಲೇ ಪರಿಹರಿಸಬೇಕು ಎಂದು ಆಗ್ರಹಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಪೂರ್ಣವಾಗಿ ರೈತರನ್ನು ನಿರ್ಲಕ್ಷಿಸಿ ಆಡಳಿತ ನಡೆಸುತ್ತಾ ರೈತ ವಿರೋಧಿ ನೀತಿಗಳನ್ನು ಜಾರಿಗೆ ತರುತ್ತಾ ರೈತ ಕುಲವನ್ನೇ ನಾಶಮಾಡಲು ಹೊರಟಿವೆ. ರಾಜ್ಯದಲ್ಲಿ ಭತ್ತ, ರಾಗಿ, ಜೋಳ, ಮುಸುಕಿನ ಜೋಳ, ಹತ್ತಿ, ಬಾಳೆಕಾಯಿ, ಮೆಣಸಿನಕಾಯಿಯನ್ನು ಎಂಎಸ್‌ಪಿ ಬೆಲೆಗಿಂತಲೂ ಕಡಿಮೆ ಬೆಲೆಗೆ ರೈತರಿಂದ ಖರೀದಿಸಿ ಲೂಟಿ ಮಾಡಲಾಗುತ್ತಿದೆ. ಸರ್ಕಾರ ಖರೀದಿ ಕೇಂದ್ರಗಳ ಮುಖಾಂತರ ಖರೀದಿ ಮಾಡುತ್ತಿರುವ ರಾಗಿ ಮತ್ತು ಭತ್ತವನ್ನು ಸಂಪೂರ್ಣವಾಗಿ ಕೊಳ್ಳದೆ ಮೋಸ ಮಾಡುತ್ತಾ ಕನಿಷ್ಠ ಬೆಂಬಲ ನೀತಿಗೆ ಅರ್ಥವಿಲ್ಲದಂತೆ ಮಾಡಿದೆ ಎಂದು ದೂರಿದರು.

ರೈತರು ತಾವು ಹಾಕಿರುವ ಖರ್ಚನ್ನೂ ಪಡೆಯಲಾಗುತ್ತಿಲ್ಲ. ಬೇಸಿಗೆ ಪ್ರಾರಂಭವಾಗಿದ್ದು, ಪಂಪ್‌ಸೆಟ್‌ಗಳಿಗೆ ಸಮರ್ಪಕವಾಗಿ ವಿದ್ಯುತ್‌ ಪೂರೈಸದೆ ಇರುವ ಕಾರಣ ಫಸಲುಗಳು ಒಣಗಿ ನಷ್ಟವಾಗುತ್ತಿವೆ. ತಾರತಮ್ಯ ವಿದ್ಯುತ್‌ ನೀತಿಯನ್ನು ವಿರೋಧಿಸಿ ಮನೆ ವಿದ್ಯುತ್‌ ಬಿಲ್‌ನ್ನು ಪಾವತಿಸದೆ ಕರ ನಿರಾಕರಣೆ ಚಳವಳಿಯನ್ನು ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಈಗಾಗಲೇ ಮಾಡಿದ್ದು, ಸರ್ಕಾರ ಹಳೇ ಬಾಕಿಯನ್ನು ಕಟ್ಟುವಂತೆ ಬಲವಂತ ಮಾಡುತ್ತ ವಿದ್ಯುತ್‌ ಸಂಪರ್ಕವನ್ನೇ ಕಡಿತ ಮಾಡಲು ಹೊರಟಿದೆ. ಮುಂಗಾರು ಮಳೆ ಬಿದ್ದಿದ್ದು ಸಮರ್ಪಕವಾಗಿ ಹತ್ತಿ ಮತ್ತು ಇತರೆ ಬೀಜಗಳನ್ನು ಸರ್ಕಾರ ಪೂರೈಸುತ್ತಿಲ್ಲ. ಈ ಎಲ್ಲಾ ಸಮಸ್ಯೆಗೆ ಸರ್ಕಾರ ಸ್ಪಂದಿಸಿ ಬಗೆಹರಿಸಬೇಕು ಎಂದು ಆರೋಪಿಸಿದರು. ಗಂಟೆ ಸೋಮು, ಶೇಖರ್‌, ಮರಡಿ ಜಂಬಯ್ಯ ನಾಯಕ, ಆರ್.ಭಾಸ್ಕರ್‌ ರೆಡ್ಡಿ, ಜಯಪ್ಪ, ವೆಂಕಟೇಶ್‌, ಅಯ್ನಾಳಿ ಸ್ವಾಮಿ, ಜಿ.ಕೆ. ವೆಂಕಟೇಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next