ರಾಯಚೂರು: ಬಾಂಗ್ಲಾ ದೇಶದಲ್ಲಿ ನವರಾತ್ರಿಯ ವೇಳೆ ದುರ್ಗಾ ಪೂಜೆಯ ಸಾವಿರಾರು ಮಂಟಪಗಳನ್ನು ಹಾಗೂ ಇಸ್ಕಾನ್ ಮಂದಿರ ಮೇಲೆ ಆಕ್ರಮಣ ನಡೆಸಿ ಹಿಂದೂಗಳ ಮೇಲೆ ಸಶಸ್ತ್ರ ದಾಳಿ ನಡೆಸಿ ಹತ್ಯಾಕಾಂಡ ನಡೆಸಿದ ಮತಾಂಧ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ಹಾಗೂ ಇಸ್ಕಾನ್ ರಾಯಚೂರು ಸಂಸ್ಥೆಯ ಸದಸ್ಯರು ಪ್ರತಿಭಟನೆ ನಡೆಸಿದರು.
ನಗರದ ಡಿಸಿ ಕಚೇರಿ ಎದುರು ಪ್ರತಿಭಟಿಸಿ ಜಿಲ್ಲಾಧಿಕಾರಿ ಮೂಲಕ ಪ್ರಧಾನಿ ಮತ್ತು ವಿದೇಶಾಂಗ ಸಚಿವರಿಗೆ ಮನವಿ ಸಲ್ಲಿಸಿದರು. ನವರಾತ್ರಿ ವೇಳೆ ಕೆಲ ಕೋಮು ಶಕ್ತಿಗಳು ವದಂತಿ ಹರಡಿಸಿ ದೇವಿಯ ಪೂಜಾ ಸ್ಥಳಗಳನ್ನು ಧ್ವಂಸಗೊಳಿಸಿದ್ದಾರೆ. ನಾಲ್ವರು ಹಿಂದುಗಳ ಹತ್ಯೆ ಮಾಡಲಾಗಿದೆ. ಹಿಂದೂ ವಾಯ್ಸ ಎಂಬ ಜಾಲತಾಣದಲ್ಲಿ ಮತಾಂಧರು ಶ್ರೀ ದುರ್ಗಾದೇವಿಯ ಮೂರ್ತಿಗಳನ್ನು ನದಿಯಲ್ಲಿ ಎಸೆದು ವೀಡಿಯೋ ಹಾಕಿದ್ದಾರೆ. ಕೈಮಿಲಾ ಎಂಬ ಸ್ಥಳದಲ್ಲಿ ಆಕ್ರಮಣ ನಡೆಸಿ 9 ದೇವಿ ಮೂರ್ತಿಗಳನ್ನು ಭಗ್ನಗೊಳಿಸಿದ್ದಾರೆ ಎಂದು ದೂರಿದರು.
ಬಾಂಗ್ಲಾದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಪರಿಸ್ಥಿತಿ ಶೋಚನೀಯವಾಗಿದೆ. 150ಕ್ಕೂ ಹೆಚ್ಚು ಕುಟುಂಬಗಳ ಮೇಲೆ ಆಕ್ರಮಣ ನಡೆಸಿದೆ. ನೊಖಾವಲಿಯಲ್ಲಿರುವ ಹಟಿಯಾದಲ್ಲಿ ಮತಾಂಧರು ಕಾಳಿ ಮಂದಿರದ ಮೇಲೆ ದಾಳಿ ನಡೆಸಿದ್ದಾರೆ. ಮಹಿಳೆಯರ ಮೇಲೆ ಹತ್ಯಗೈಯ್ಯಲಾಗಿದೆ ಎಂದು ದೂರಿದರು.
ವಿಶ್ವದಲ್ಲಿ ಇರುವ ಏಕೈಕ ಹಿಂದು ದೇಶ ಭಾರತವಾಗಿದ್ದು, ಬೇರೆ ಎಲ್ಲಿಯೇ ಇರುವ ಹಿಂದುಗಳ ರಕ್ಷಣೆಯನ್ನು ಭಾರತ ನಿರ್ವಹಿಸಬೇಕಿದೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಬಾಂಗ್ಲಾ ದೇಶದ ಪ್ರಧಾನಿಗಳ ಜತೆ ಚರ್ಚಿಸಿ ಬಾಂಗ್ಲಾದಲ್ಲಿರುವ ಹಿಂದೂಗಳ ರಕ್ಷಣೆ ಮುಂದಾಗಿರಬೇಕು. ದೇವಸ್ಥಾನಗಳ ಮೇಲೆ ದಾಳಿ ನಡೆಸಿ ಆಕ್ರಮಣ ಮಾಡಿದ ಮತಾಂಧರನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಈ ವಿಚಾರವನ್ನು ಸಂಯುಕ್ತ ರಾಷ್ಟ್ರಗಳ ಮುಂದೆ ಪ್ರಸ್ತಾಪಿಸಿ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕು. ಇದೇ ಪರಿಸ್ಥಿತಿ ಮುಂದುವರಿದರೆ ಬಾಂಗ್ಲಾ ದೇಶದೊಂದಿಗೆ ಇರುವ ಎಲ್ಲ ವ್ಯವಹಾರ ಕಡಿದುಕೊಳ್ಳುವ ಸ್ಪಷ್ಟ ಎಚ್ಚರಿಕೆ ನೀಡಬೇಕು ಎಂದು ಒತ್ತಾಯಿಸಿದರು. ಸಂಘಟನೆ ಮುಖಂಡರಾದ ಸುವರ್ಣ, ಲಕ್ಷ್ಮೀ, ಶಶಿಮುಖೀ, ಉರ್ಜೇಶ್ವರಿ, ಆದಿತ್ಯ, ಕೃಷ್ಣಾ ಸೇರಿದಂತೆ ಅನೇಕರಿದ್ದರು.