ಚಿಂಚೋಳಿ: ತಾಲೂಕಿನ ಕುಂಚಾವರಂ ಕ್ರಾಸ್‌ನಿಂದ ನಿಡಗುಂದಾ ಗ್ರಾಮದ ವರೆಗೆ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಕೂಡಲೇ ಸರಿಪಡಿಸುವಂತೆ ಬುರುಗಪಳ್ಳಿ ಬಿಜೆಪಿ ಮುಖಂಡ, ತಾಪಂ ಮಾಜಿ ಸದಸ್ಯ ಶರಣು ಪಾಟೀಲ ಹುಲಿ ಆಗ್ರಹಿಸಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನ ಶಿವರಾಮಪುರ-ಶಹಾಪುರ ರಾಜ್ಯ ಹೆದ್ದಾರಿಯ ಕುಂಚಾವರಂ ಕ್ರಾಸ್‌ನಿಂದ ಭಕ್ತಂಪಳ್ಳಿ, ಗಣಾಪುರ, ಬುರುಗಪಳ್ಳಿ, ಛತ್ರಸಾಲ, ಕರ್ಚಖೇಡ, ನಿಡಗುಂದಾ ಗ್ರಾಮದ ವರೆಗೆ ಒಟ್ಟು 15ಕಿ.ಮೀ ರಸ್ತೆಯಲ್ಲಿ ಭಾರಿ ತೆಗ್ಗುಗಳು ಬಿದ್ದಿವೆ ಎಂದು ಹೇಳಿದರು.
ರಸ್ತೆ ದುರಸ್ತಿಕಾಣದೇ ಇರುವುದರಿಂದ ಇದೇ ಭಾಗದಿಂದ ಓಡಾಡುವ ಸಿಮೆಂಟ್ ಕಂಪನಿಗಳ ಲಾರಿಗಳ ಚಾಲಕರು ಪರದಾಡುವಂತೆ ಆಗಿದೆ. ಅಲ್ಲದೇ ದ್ವಿಚಕ್ರ ವಾಹನಗಳು, ಬಸ್, ಟಂಟಂ, ಅಟೋಗಳು ಅಪಘಾತಕ್ಕೆ ಒಳಗಾಗುತ್ತಿವೆ. ಆದ್ದರಿಂದ ಸಂಬಂಧಪಟ್ಟವರು ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಗಣಾಪುರ ಗ್ರಾಮದ ಸೇತುವೆ ಹತ್ತಿರ ರಸ್ತೆಯಲ್ಲಿ ಭಾರಿ ತೆಗ್ಗುಗಳು ಬಿದ್ದಿವೆ. ಕಲ್ಲು ಪರಸಿ ಮತ್ತು ಸಿಮೆಂಟ್ ತುಂಬಿದ ಲಾರಿಗಳು ರಸ್ತೆಯಲ್ಲಿ ಸಿಕ್ಕಿಹಾಕಿಕೊಂಡು ವಾರಗಟ್ಟಲೇ ನಿಲ್ಲುವಂತೆ ಆಗಿವೆ. ಕಳೆದ ಎರಡು ವರ್ಷಗಳಿಂದ ರಸ್ತೆ ಹದಗೆಟ್ಟಿದ್ದರೂ ರಸ್ತೆ ದುರಸ್ತಿ ಕಾರ್ಯ ಇನ್ನುವರೆಗೆ ಕಂಡಿಲ್ಲ. 2011-12ನೇ ಸಾಲಿನಲ್ಲಿ ಕೆಕೆಆರ್ ಡಿಬಿ ಯೋಜನೆ ಅಡಿಯಲ್ಲಿ 9ಕೋಟಿ ರೂ.ಗಳಲ್ಲಿ ಹಳೆಯದಾದ ರಸ್ತೆ ಸುಧಾರಣೆ ಅಭಿವೃದ್ಧಿಗೊಳಿಸಿದ ನಂತರ ಡಾಂಬರೀಕರಣಗೊಳಿಸಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿತ್ತು. ಆನಂತರ ಈ ರಸ್ತೆ ದುರಸ್ತಿ ಭಾಗ್ಯ ಕಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕುಂಚಾವರಂ – ನಿಡಗುಂದಾ ಗ್ರಾಮದ ವರೆಗೆ ರಸ್ತೆ ಹಾಳಾಗಿ ಹೋಗಿದ್ದರಿಂದ ವಾಹನಗಳಲ್ಲಿ ಪ್ರಯಾಣಿಸುವ ಶಾಲಾ- ಕಾಲೇಜು ವಿದ್ಯಾರ್ಥಿಗಳು, ವೃದ್ಧರು ಹಾಗೂ ಗರ್ಭಿಣಿಯರು, ಅಂಗವಿಕಲರು, ಸ್ತ್ರೀಯರು, ಆಸ್ಪತ್ರೆಗೆ ಹೋಗುವ ರೋಗಿಗಳು ಹೈರಾಣಾ ಗುವಂತೆ ಆಗಿದೆ. ಆದ್ದರಿಂದ ಕೂಡಲೇ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದರು.