Advertisement

ಬೇಡಿಕೆ ಈಡೇರಿಕೆಗೆ ಮನವಿ

12:11 PM Aug 04, 2019 | Team Udayavani |

ಹಾವೇರಿ: ಕೇಂದ್ರ ಹಾಗೂ ರಾಜ್ಯ ಸರಕಾರದ ಸಹಯೋಗದಲ್ಲಿ ನಡೆಯುತ್ತಿರುವ ಬಿಸಿಯೂಟ ಯೋಜನೆಯಲ್ಲಿ ಕೆಲಸ ನಿರ್ವಹಿಸುವ ಮಹಿಳೆಯರ ಸಂಭಾವನೆ ಹೆಚ್ಚಳ ಮಾಡಬೇಕು ಹಾಗೂ ಬಾಕಿ ಇರುವ ಸಂಭಾವನೆಯನ್ನು ಶೀಘ್ರ ಬಿಡುಗಡೆ ಮಾಡಬೇಕು ಎಂದು ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್‌ ರಾಜ್ಯಾಧ್ಯಕ್ಷ ಹೊನ್ನಪ್ಪ ಮರೆಮ್ಮನವರ ಒತ್ತಾಯಿಸಿದ್ದಾರೆ.

Advertisement

ಎಐಟಿಯುಸಿ ನೇತೃತ್ವದ ಕರ್ನಾಟಕ ರಾಜ್ಯ ಬಿಸಿಯೂಟ ತಯಾರಕರ ಫೆಡರೇಷನ್‌ ವತಿಯಿಂದ ಶನಿವಾರ ಅಪರ ಜಿಲ್ಲಾಧಿಕಾರಿ ತಿಪ್ಪೇಸ್ವಾಮಿ ಮೂಲಕ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.

ಕೇಂದ್ರ ಮತ್ತು ರಾಜ್ಯ ಸರಕಾರ ಬಿಸಿಯೂಟ ಯೋಜನೆ ಆರಂಭದಲ್ಲಿ ಮುಖ್ಯ ಅಡಿಗೆಯವರಿಗೆ ಮಾಸಿಕ 650 ರೂ., ಸಹ ಅಡಿಗೆಯವರಿಗೆ 450ರೂ. ಇತ್ತು.ಕಳೆದ 16 ವರ್ಷಗಳಿಂದ ಕನಿಷ್ಠ ವೇತನಕ್ಕಾಗಿ ಹೋರಾಟ ನಡೆಸಿದ್ದರ ಫಲವಾಗಿ ಈಗ ಮುಖ್ಯ ಅಡಿಗೆಯವರು 2700 ರೂ., ಸಹಾಯಕರು 2600 ರೂ. ಪಡೆದುಕೊಳ್ಳುವಂತಾಗಿದೆ. ಈ ಯೋಜನೆ ಜಾರಿ ಬಂದ ಮೇಲೆ ಮಕ್ಕಳ ಹಾಜರಾತಿ ಹಾಗೂ ಕಲಿಕೆ ಗುಣಮಟ್ಟ ಹೆಚ್ಚಾಗಿದೆ. ದೇಶದಲ್ಲಿಯೇ ನಮ್ಮ ರಾಜ್ಯವು ಯೋಜನೆಯನ್ನು ಯಶಸ್ವಿಯಾಗಿ ಜಾರಿ ಮಾಡುವಲ್ಲಿ ಪ್ರಥಮ ಸ್ಥಾನದಲ್ಲಿದೆ. ಇದಕ್ಕೆ ಕಡಿಮೆ ಸಂಭಾವನೆಯಲ್ಲಿ ನಿಷ್ಠೆಯಿಂದ ಕಾರ್ಯನಿರ್ವಹಿಸುವ ಮಹಿಳೆಯರ ಶ್ರಮ ಕಾರಣವಾಗಿದೆ. ಆದ್ದರಿಂದ ಇಂತಹ ಯೋಜನೆಯ ಯಶಸ್ವಿಯಾಗಲು ದುಡಿಯುತ್ತಿರುವ ಮಹಿಳೆಯರ ಸಂಭಾವನೆಯನ್ನು ಕನಿಷ್ಠ ವೇತನಕ್ಕೆ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಹಾವೇರಿ ಜಿಲ್ಲೆಯ ಎಲ್ಲ ತಾಲೂಕಿನಲ್ಲಿ ಬಿಸಿಯೂಟ ತಯಾರಕರಿಗೆ ಮಾಸಿಕ ಪ್ರತಿ ತಿಂಗಳು 5ನೇ ತಾರೀಕಿನೊಳಗೆ ಸಂಭಾವನೆ ನೀಡಬೇಕು ಎಂಬ ಆದೇಶವಿದ್ದರೂ, ಕಳೆದ ಎಪ್ರಿಲ್, ಮೇ, ಜೂನ್‌, ಜುಲೈ ತಿಂಗಳ ಮಾಸಿಕ ಸಂಭಾವನೆ ನೀಡಿಲ್ಲ. ಇದರಿಂದ ಅವರು ನಿತ್ಯ ಜೀವನ ನಡೆಸುವದು ಕಷ್ಟವಾಗಿದೆ. ಜಿಲ್ಲಾಡಳಿತ ಕಡಿಮೆ ಸಂಭಾವನೆಯಲ್ಲಿ ದುಡಿಯುವ ಮಹಿಳೆಯರ ಹಣ ತಕ್ಷಣಕ್ಕೆ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಸರಕಾರ ಬಿಸಿಯೂಟ ತಯಾರಕರನ್ನು ಶಾಲಾ ಸಿಬ್ಬಂದಿಗಳೆಂದು ಕಾಯಂ ಮಾಡಿ, ಸರ್ಕಾರಿ ನೌಕರರನ್ನಾಗಿ ಮಾಡಬೇಕು. ಅಲ್ಲಿಯವರೆಗೂ ಕಾರ್ಮಿಕ ಇಲಾಖೆಯಿಂದ ಅಸಂಘಟಿತ ಕಾರ್ಮಿಕರಿಗೆ ನೀಡುವ ಸೌಲಭ್ಯ ನೀಡಬೇಕು. ದೇಶದ ಸವೋಚ್ಛ ನ್ಯಾಯಾಲಯ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಕನಿಷ್ಠ 18000 ರೂ. ಕೊಡಬೇಕು ಎಂದು ಸೂಚಿಸಿದೆ. ಅದನ್ನು ಈ ವರೆಗೂ ಕೊಟ್ಟಿಲ್ಲ, ಅದನ್ನು ಕೊಡಬೇಕು. ಬಿಸಿಯೂಟ ತಯಾರಕರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಂಘಟನೆಯ ಪದಾಧಿಕಾರಿಗಳು ಅಧಿಕಾರಿಗಳು, ಸಚಿವರೊಂದಿಗೆ ಸಭೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

Advertisement

ಈ ಸಮಯದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಜಿ.ಡಿ. ಪೂಜಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಖಮ್ಮ ದನ್ನೂರ, ಜಿಲ್ಲಾ ಸಂಘಟನ ಕಾರ್ಯದರ್ಶಿ ಗುರುನಾಥ ಲಕಮಾಪೂರ, ಜಿಲ್ಲಾ ಉಪಾಧ್ಯಕ್ಷ ಲಲಿತಾ ಬೂಶೆಟ್ಟಿ, ನಾಗರತ್ನ ಕುಲಕರ್ಣಿ ಸೇರಿದಂತೆ ಮುಂತಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next