ದಾಂಡೇಲಿ: ದಾಂಡೇಲಿಯ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಯೋಜನೆಯಲ್ಲಿ ಗುತ್ತಿಗೆ ನೌಕರರಾಗಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳ ಬಾಕಿ ವೇತನ ಪಾವತಿಸಲು ಹಾಗೂ ಅವರ ಅವಶ್ಯ ಬೇಡಿಕೆಗಳನ್ನು ಈಡೇರಿಸಲು ಅತ್ಯಂತ ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳಲು ಅರಣ್ಯ ಇಲಾಖೆಗೆ ಹಾಗೂ ಅರಣ್ಯ ಸಚಿವರಿಗೆ ಮತ್ತು ಸರಕಾರಕ್ಕೆ ಒತ್ತಾಯಿಸುವಂತೆ ನಗರಸಭೆಯ ಮಾಜಿ ಸದಸ್ಯ ಹಾಗೂ ಜೆಡಿಎಸ್ ರಾಜ್ಯ ಘಟಕದ ಕಾರ್ಯದರ್ಶಿ ರೋಶನ್ ಬಾವಾಜಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಯವರಿಗೆ ಬೆಂಗಳೂರಿನಲ್ಲಿ ಲಿಖೀತ ಮನವಿ ಸಲ್ಲಿಸಿದ್ದಾರೆ.
ಇದನ್ನೂ ಓದಿ:ಬೀದರನಲ್ಲಿ 11ಕ್ಕೂ ಹೆಚ್ಚು ಗೋ ಶಾಲೆ; ಸೌಲಭ್ಯ ಕೊರತೆ
ಮನವಿಯಲ್ಲಿ ಕಳ್ಳಬೇಟೆ ಕಾವಲುಗಾರರ ಐದು ತಿಂಗಳ ವೇತನ ಮತ್ತು ಚಾಲಕರು, ಕಚೇರಿ ಸಹಾಯಕರ ಆರು ತಿಂಗಳ ವೇತನ ಪಾವತಿಸಬೇಕು. ಕಳ್ಳಬೇಟೆ ನೌಕರರಿಗೆ ಮಂಜೂರಾದ ಆಹಾರ ಭತ್ತೆಯನ್ನು ಕೂಡಲೆ ಪಾವತಿಸಬೇಕು. ಕಳ್ಳಬೇಟೆ ನೌಕರರಿಗೆ ಇಎಸ್‌ಐ ಬಿಲ್ ಪಡೆಯಲು ಸೇವಾ ಪ್ರಮಾಣ ಪತ್ರವನ್ನು ಸಂಬಂಧಿಸಿದ ಗುತ್ತಿಗೆದಾರರಿಂದ ಪೂರೈಸಬೇಕು.
ಮುಂದಿನ ವರ್ಷ ಬಜೆಟ್ ತಯಾರಿಸುವಾಗ ಮುಂದೆ ಬರುವ 30 ದಿನಗಳ ಹಾಜರಾತಿ ಒಳಗೊಂಡಂತೆ ಮತ್ತು ಈ ಹಿಂದಿನ ಬಾಕಿ ಅನುಗುಣವಾಗಿ ಕ್ರಿಯಾಯೋಜನೆ ತಯಾರಿಸಬೇಕೆಂದು ಹೀಗೆ ಮೊದಲಾದ ಬೇಡಿಕೆಗಳ ಕುರಿತಂತೆ ರೋಷನ್ ಬಾವಾಜಿಯವರು ವಿವರಿಸಿದ್ದಾರೆ.