ಕೋಲಾರ: ಸರ್ಕಾರ ಭೂ ಸುಧಾರಣೆ ಕಾಯ್ದೆಯ ಸೆಕ್ಷನ್ 79 ಎ ಮತ್ತು ಬಿ ಯನ್ನು ತೆಗೆದು ಹಾಕಲು ಅಧಿವೇಶನದಲ್ಲಿ ಮಂಡಿಸುವುದನ್ನು ಕೂಡಲೇ ಕೈಬಿಡಬೇಕೆಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಸಮಿತಿ ಸದಸ್ಯರು ತಹಶೀಲ್ದಾರ್‌ರಿಂದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ಬಣಿ ಶಿವಪ್ಪ ಮಾತನಾಡಿ, ಕೃಷಿ ಭೂಮಿ ರೈತರಲ್ಲಿಯೇ ಉಳಿಯಬೇಕು. ಬಂಡವಾಳದಾರರು, ಉದ್ಯಮಿಗಳು, ವ್ಯಾಪಾರಸ್ಥರು, ರೈತರಲ್ಲದವರು, ಭೂಮಿ ಖರೀದಿ ಮಾಡಬಾರದು ಎಂದು ದೇವರಾಜ ಅರಸು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ 2 ಲಕ್ಷ ರೂ.ಗಳಿಗಿಂಂತ ಹೆಚ್ಚು ಆದಾಯ ಇರುವವರು ಕೃಷಿ ಭೂಮಿ ಖರೀದಿಸಬಾರದು ಎಂದು ಭೂ ಸುಧಾರಣೆ ಜಾರಿಗೆ ತಂದರು. ನಂತರ ಸಿದ್ಧರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ 2 ಲಕ್ಷ ಆದಾಯ ಮಿತಿಯನ್ನು 25 ಲಕ್ಷಕ್ಕೆ ಏರಿಕೆ ಮಾಡಿ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದರು ಎಂದು ಹೇಳಿದರು.
ಈಗ ರಾಜ್ಯ ಸರ್ಕಾರ ಉದ್ಯಮಿಗಳು, ಹೆಚ್ಚು ಹೂಡಿಕೆ ಮಾಡುವ ಉದ್ದೇಶದಿಂದ ಭೂಮಿ ಖರೀದಿಯನ್ನು ಸರಳ ಮಾಡಲು ಭೂ ಸುಧಾರಣೆ ಕಾಯ್ದೆಯ ಸೆಕ್ಷನ್ 79 ಎ ಮತ್ತು ಬಿ ಯನ್ನು ಕಾಯ್ದೆಯಿಂದ ತೆಗೆದು ಹಾಕಲು ನಿರ್ಧರಿಸಿರುವುದಾಗಿ ಹಾಗೂ ಮುಂದಿನ ಅಧಿ ವೇಶನದಲ್ಲಿ ಮಸೂದೆಯನ್ನು ಮಂಡಿಸುವುದಾಗಿ ಹೇಳಿರುವುದು ರೈತ ಸಮುದಾಯಕ್ಕೆ ಬಿಜೆಪಿ ಸರ್ಕಾರ ಮಾಡುತ್ತಿರುವ ದ್ರೋಹವಾಗಿದೆ ಎಂದು ಆರೋಪಿಸಿದರು.
ಈಗಾಗಲೇ ನೀರಾವರಿ, ರಸ್ತೆ ನಿರ್ಮಾಣ, ರೈಲು ಮಾರ್ಗ, ನಗರ ಪ್ರದೇಶಗಳಿಗೆ ಹಾಗೂ ಕೈಗಾರಿಕೆ ಪ್ರದೇಶಗಳಿಗೆ ಬಹಳಷ್ಟು ಕೃಷಿ ಭೂಮಿ ಬಳಸಲಾಗಿದೆ. ದಿನೇ ದಿನೆ ಕೃಷಿ ಭೂಮಿ ಕಡಿಮೆಯಾಗುತ್ತಿರುತ್ತದೆ. ಈ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತರುವುದರಿಂದ ರೈತರಿಗೆ ಅಲ್ಪಕಾಲದಲ್ಲಿ ಸ್ವಲ್ಪ ಹಣ ಹೆಚ್ಚಿಗೆ ಸಿಗುವುದೇ ವಿನಾ ರೈತರು ಕೃಷಿಯಿಂದ ಶಾಶ್ವತವಾಗಿ ದೂರವಾಗುತ್ತಾರೆ. ರೈತ ಕುಟುಂಬಗಳು ಬೀದಿಗೆ ಬರುತ್ತವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಸ್ತೇನಹಳ್ಳಿ ನಾರಾಯಣಸ್ವಾಮಿ, ಜಿಲ್ಲಾ ಮುಖಂಡ ಹೊಳಲಿ ಚಂದ್ರಪ್ಪ, ಜಿಲ್ಲಾ ಕಾರ್ಯದರ್ಶಿ ವೀರಾಪುರ ಮಂಜುನಾಥ್, ಕೋಲಾರ ತಾಲೂಕು ಅಧ್ಯಕ್ಷ ದಿನ್ನೇಹೊಸಹಳ್ಳಿ ಎಂ.ರಮೇಶ್, ತಾಲೂಕು ಉಪಾಧ್ಯಕ್ಷ ಪೆಮ್ಮಶೆಟ್ಟಹಳ್ಳಿ ವಿ.ವೆಂಕಟರಾಮೇಗೌಡ, ತಾಲೂಕು ಕಾರ್ಯದರ್ಶಿ ವಾನರಾಶಿ ಗೋಪಾಲ್, ತಾಲೂಕು ಮುಖಂಡರುಗಳಾದ ಕ್ಯಾಲನೂರು ವೆಂಕಟೇಶಪ್ಪ, ವಿ.ಮುನಿವೆಂಕಟಪ್ಪ, ಖಾಜಿಕಲ್ಲಹಳ್ಳಿ ಚೌಡಪ್ಪ, ಎನ್.ವೆಂಕಟೇಶಪ್ಪ, ದೊಡ್ನಹಳ್ಳಿ ಕೃಷ್ಣಪ್ಪ, ಚೌಡರೆಡ್ಡಿ, ವಿ. ಶ್ರೀನಿವಾಸ್, ಎನ್.ವಿ ವೆಂಕಟರಾಮಪ್ಪ ಉಪಸ್ಥಿತರಿದ್ದರು.