ಮುದಗಲ್ಲ: ಪುರಸಭೆಯಲ್ಲಿ ಬುಧವಾರ ಕರೆಯಲಾಗಿದ್ದ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಪಟ್ಟಣದಲ್ಲಿ ಉಲ್ಬಣಿಸಿರುವ ಕುಡಿಯುವ ನೀರಿನ ಸಮಸ್ಯೆಗೆ ಸದಸ್ಯ ಎಸ್. ಆರ್.ರಸೂಲ ಮುಖ್ಯಾಧಿಕಾರಿಗಳಿಗೆ ತರಾಟೆ ತೆಗೆದುಕೊಂಡು ಸಭೆ ಬಹಿಷ್ಕರಿಸಿ ಹೊರ ನಡೆದ ಪ್ರಸಂಗ ಜರುಗಿತು.
ಸಭೆಯಲ್ಲಿ ಮುಖ್ಯಾಧಿಕಾರಿ ಮರಿಲಿಂಗಪ್ಪ ಸ್ವಾಗತಿಸಿ ಸಭೆ ಆರಂಭಿಸಿದ್ದರು. ನಂತರ ಬಂದ ಸದಸ್ಯ ಎಸ್.ಆರ್.ರಸೂಲ ಸಭೆಯ ಬಾವಿಗೀಳಿದು ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿರುವದು ನಿಮಗೆ ಗೊತ್ತಿಲ್ಲವೇ? ಜನತೆ ಚುನಾಯಿತ ಸದಸ್ಯರಿಗೆ ಛೀಮಾರಿ ಹಾಕುತ್ತಿದ್ದಾರೆ. ನೀವು ಸಭೆ ನಡೆಸುತ್ತಿದ್ದರೀ. ಹೊರಗಡೆ ಕರವೇ ಸಂಘಟನೆ ಪ್ರತಿಭಟಿಸುತ್ತಿದೆ. ಸಾಕಷ್ಟು ಬಾರಿ ಪತ್ರಿಕೆಗಳಲ್ಲಿ ನೀರಿನ ಸುದ್ದಿಯಾಗಿದೆ. ಪುರಸಭೆ ಸದಸ್ಯರಿಗೆ, ಆಡಳಿತ ಮಂಡಳಿಗೆ ಧಿಕ್ಕಾರ ಕೂಗುತ್ತಿದ್ದಾರೆ. ಇದಕ್ಕೆ ಯಾರು ಹೊಣೆ?, ನಿಮ್ಮ ಕರ್ತವ್ಯ ಏನು? ಎಂದು ಪ್ರಶ್ನಿಸಿದರು.
ಕುಡಿಯುವ ನೀರಿನ ಸಮಸ್ಯೆ ಇತ್ಯರ್ಥ ಮಾಡುವವರಿಗೆ ಕುರ್ಚಿಯಲ್ಲಿ ಕೂಡಲು ನಾವು ಅರ್ಹರಲ್ಲ. ಸಭೆ ನಡೆಸುವುದು ಬೇಡ, ಮುಂದೂಡಿ ಎಂದು ಸಭೆಯನ್ನು ಬಹಿಷ್ಕರಿಸಿ ಹೊರ ನಡೆದರು.
2022-23ನೇ ಸಾಲಿನ ಎಸ್‌ಎಫ್‌ಸಿಯ 33 ಲಕ್ಷ ರೂ. ಮತ್ತು 15ನೇ ಹಣಕಾಸು ಯೋಜನೆಯ 113 ಲಕ್ಷ ರೂ. ಕಾಮಗಾರಿಗಳಿಗೆ ಕ್ರಿಯಾ ಯೋಜನೆ ತಯ್ನಾರಿಸಲು ಅನುಮೋದನೆ ನೀಡಲಾಯಿತು. ಎಸ್‌ಎಫ್‌ಸಿ 24.10%, 7.25% ಮತ್ತು 5% ಸರಕಾರದ ನಿರ್ದೇಶನದಂತೆ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಯಿತು. ಕಾರ್ಮಿಕರಿಗೆ ಬೆಳಗಿನ ಉಪಾಹಾರ, ಮುಖ್ಯಾ ಧಿಕಾರಿಗಳ ಆಡಳಿತ ನಿರ್ವಹಣೆ, ವಾಹನಕ್ಕೆ ಟೆಂಡರ್ ಅನುಮೋದನೆ, ಪುರಸಭೆ ವ್ಯಾಪ್ತಿಯ ಚರಂಡಿಗಳ ಹೂಳೆತ್ತಲು 15 ಜನ ಕಾರ್ಮಿಕರನ್ನು ತಾತ್ಕಾಲಿಕ ಗುತ್ತಿಗೆ ಮೇಲೆ ತೆಗೆದುಕೊಳ್ಳುವುದು, ವಸತಿ ವಿನ್ಯಾಸಗಳಿಗೆ ಅನುಮೋದನೆ ನೀಡುವ ಕುರಿತು ಚರ್ಚಿಸಿ ಅನುಮೋದನೆ ನೀಡಲಾಯಿತು.
ಸಭೆಯಲ್ಲಿ ಸದಸ್ಯರಾದ ತಸ್ಲಿಂ ಮುಲ್ಲಾ, ಶ್ರೀಕಾಂತಗೌಡ, ಬಾಬು ಉಪ್ಪಾರ, ಹನುಮಂತ ವಾಲ್ಮೀಕಿ, ಅಮೀನಾಬೇಗಂ ಸೇರಿದಂತೆ 10 ಜನ ಸದಸ್ಯರು, ಪುರಸಭೆ ಸಿಬ್ಬಂದಿ ವರ್ಗ, ಕಿರಿಯ ಅಭಿಯಂತರ ಸೇರಿದಂತೆ ಮುಂತಾದವರಿದ್ದರು.