ಮಣಿಪಾಲ: ವಿಶ್ವ ವಿಖ್ಯಾತ ಶಿಕ್ಷಣ ಸಂಸ್ಥೆಗಳು, ವೈದ್ಯಕೀಯ ಸೇವಾ ಕೇಂದ್ರ, ಕೈಗಾರಿಕೆ ಕ್ಷೇತ್ರ, ಗಗನಚುಂಬಿ ಕಟ್ಟಡಗಳು, ವಸತಿ ಸಮುಚ್ಚಯ, ರಜತಾದ್ರಿ ಜಿಲ್ಲಾಡಳಿತ ಕೇಂದ್ರ… ಇಷ್ಟೆಲ್ಲಾ ಪ್ರಾಮುಖ್ಯವಿರುವ ಮಣಿಪಾಲದ ಎಲ್ಲಿಯಾದರೂ ಅಗ್ನಿ ಅವಘಡ ಸಂಭವಿಸಿದರೆ ತುರ್ತು ಕಾರ್ಯಾಚರಣೆ ಮೂಲಕ ದುರ್ಘಟನೆ ನಿಯಂತ್ರಿಸಲು ಅಗ್ನಿ ಶಾಮಕ ದಳ ಘಟಕ ಇಲ್ಲ ಎಂಬುದು ಸೋಜಿಗ.
ಹಲವಾರು ವರ್ಷಗಳಿಂದ ಮಣಿಪಾಲ ದಲ್ಲಿ ಅಗ್ನಿಶಾಮಕ ಠಾಣೆ ಬೇಕು ಎಂಬ ಸಾರ್ವಜನಿಕರ ಬೇಡಿಕೆಗೆ ಆಡಳಿತ ವ್ಯವಸ್ಥೆ ಇದೂವರೆಗೆ ಸ್ಪಂದಿಸಿಲ್ಲ.
ಮಣಿಪಾಲದಲ್ಲಿ ಈಗಾಗಲೇ ಕೆಲವು ಕಡೆಗಳಲ್ಲಿ ಅಗ್ನಿ ಅವಘಡ ಸಂಭವಿಸಿದ ಸಂದರ್ಭದಲ್ಲಿ ನಿಯಂತ್ರಿಸಲು ಉಡುಪಿ, ಮಲ್ಪೆ, ಕಾರ್ಕಳದಿಂದ ಅಗ್ನಿಶಾಮಕ ದಳ ಸಿಬಂದಿ ಬರಬೇಕಾಗುತ್ತದೆ. ಮಣಿಪಾಲದಂತಹ ಪ್ರದೇಶಕ್ಕೆ ಅಗ್ನಿಶಾಮಕದಳ ಘಟಕ ಅನಿವಾರ್ಯ ಹೆಚ್ಚಿದೆ. ಸಣ್ಣ, ಪುಟ್ಟ ಅಗ್ನಿ ಅವಘಡ ಸೇರಿದಂತೆ ದೊಡ್ಡ ಪ್ರಮಾಣದ ಅಗ್ನಿ ಅನಾಹುತ ಸಂಭವಿಸಿದರೆ ದೂರದಿಂದ ಅಗ್ನಿಶಾಮಕ ತಂಡ ಬರುವಷ್ಟರಲ್ಲಿ ನಷ್ಟ, ಜೀವ ಹಾನಿ ದುಪ್ಪಟ್ಟಾಗುವ ಸಾಧ್ಯತೆ ಹೆಚ್ಚು. ಈ ನೆಲೆಯಲ್ಲಿ ಮಣಿಪಾಲ ಅಗ್ನಿಶಾಮಕದಳ ಘಟಕವನ್ನು ತುರ್ತು ಸ್ಥಾಪಿಸಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಘಟಕ ಸ್ಥಾಪನೆಗೆ ಜಾಗ ನಿಗದಿ:
ಮಣಿಪಾಲವು ಸೇರಿದಂತೆ, ಕಾಪು, ಹೆಬ್ರಿ, ಬ್ರಹ್ಮಾವರದಲ್ಲಿ ಅಗ್ನಿಶಾಮಕ ದಳ ಘಟಕದ ಬೇಡಿಕೆ ಇದೆ. ಮಣಿಪಾಲದಲ್ಲಿ ಜಾಗವನ್ನು ನಿಗದಿಪಡಿಸಲಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿದೆ. ಆದರೆ ಮಣಿಪಾಲದಲ್ಲಿ ಅಗ್ನಿ ಶಾಮಕ ಠಾಣೆ ಬೇಡಿಕೆ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಮಣಿಪಾಲ ಸಹಿತ ಜಿಲ್ಲೆಯ ಮೂರು ಕಡೆಗಳಲ್ಲಿ ಅಗ್ನಿ ಶಾಮಕ ಠಾಣೆ ಅಗತ್ಯತೆ ಬಗ್ಗೆ ಅಗ್ನಿ ಶಾಮಕ ಮತ್ತು ತುರ್ತು ಸೇವಾ ಇಲಾಖೆ ವರದಿ ಸಲ್ಲಿಸಿದ್ದರೂ, ಸರಕಾರ ಜಾಣ ಮೌನ ವಹಿಸಿರು ವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
122 ಅಗ್ನಿ ದುರಂತಗಳು :
ಜಿಲ್ಲೆಯಲ್ಲಿ ಜನವರಿಯಿಂದ ಇಲ್ಲಿವರೆಗೆ 122 ಅಗ್ನಿ ದುರಂತಗಳು ಸಂಭವಿಸಿದೆ. ಅಂಗಡಿಗಳು, ಹುಲ್ಲುಗಾವಲು, ಅರಣ್ಯ ಪ್ರದೇಶ, ಮನೆಗಳು, ಗುಡಿಸಲು ಅಗ್ನಿ ಅನಾಹುತಕ್ಕೆ ಒಳಪಟ್ಟಿದೆ. ಇದರಲ್ಲಿ ಉಡುಪಿ ಠಾಣೆ ವ್ಯಾಪ್ತಿಯಲ್ಲಿ ಹೆಚ್ಚು ಅವಘಡ ಸಂಭವಿಸಿದೆ. ಸಿಬಂದಿ ಕೊರತೆ ನಡುವೆಯೂ ಇಲಾಖೆ ಸಿಬಂದಿ ಪರಿಶ್ರಮದಿಂದ ಕಾರ್ಯಾಚರಣೆಗೆ ಧಾವಿಸುತ್ತಾರೆ. ಅಲ್ಲದೆ ಪ್ರಕೃತಿ ವಿಕೋಪ, ಬಾವಿಗೆ ಬಿದ್ದ ಪ್ರಾಣಿ, ವ್ಯಕ್ತಿಗಳ ರಕ್ಷಣೆ ಸಂಬಂಧಿಸಿ ಅಗ್ನಿ ಶಾಮಕ ಸಿಬಂದಿ 51 ತುರ್ತು ರಕ್ಷಣ ಕರೆಗೆ ಸ್ಪಂದಿಸಿ ಸಾರ್ವಜನಿಕರಿಗೆ ನೆರವು ನೀಡಿದ್ದಾರೆ.
ಜಿಲ್ಲೆಯಲ್ಲಿ ಅಗತ್ಯ ಇರುವ ಕಡೆ ಅಗ್ನಿ ಶಾಮಕದಳ ಘಟಕ ಸ್ಥಾಪನೆ ಬಗ್ಗೆ ಸಾರ್ವಜನಿಕರ ಬೇಡಿಕೆ ಅನುಸಾರ ಪರಿಶೀಲನೆ ನಡೆಸಿ ಮಣಿಪಾಲ ಸಹಿತ ಜಿಲ್ಲೆಯ ನಾಲ್ಕು ಕಡೆಗಳಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಸರಕಾರದ ಹಂತದಲ್ಲಿ ಮುಂದಿನ ಪ್ರಕ್ರಿಯೆ ನಡೆಯಬೇಕಿದೆ.
– ವಸಂತಕುಮಾರ್, -ಜಿಲ್ಲಾ ಅಗ್ನಿ ಶಾಮಕ ದಳ ಅಧಿಕಾರಿ