ಕಟಪಾಡಿ: ಕುಂಜಾರುಗಿರಿ-ಅರಸಿನಕಟ್ಟೆ ಸಂಪರ್ಕದ ಪ್ರಮುಖ ರಸ್ತೆಯೊಂದು ಹದಗೆಟ್ಟಿದ್ದು, ವಾಹನ ಸವಾರರು, ವಾಹನ ಸಂಚಾರಿಗಳನ್ನು
ಸಂಕಷ್ಟಕ್ಕೆ ತಳ್ಳಿದೆ.
ಈ ರಸ್ತೆಯು ಮೂಡುಬೆಳ್ಳೆ-ಪಡುಬೆಳ್ಳೆ-ಕುಂಜಾರುಗಿರಿ-ಬಂಟಕಲ್ಲು-ಇನ್ನಂಜೆ-ಕಾಪು ತಾಲೂಕು ಕೇಂದ್ರಕ್ಕೆ ಸಂಪರ್ಕಕ್ಕೆ ಹೆಚ್ಚಾಗಿ ಹತ್ತಿರದ ರಸ್ತೆ ಮಾರ್ಗವಾಗಿದ್ದು ಹೆಚ್ಚಿನ ವಾಹನ ಸಂಚಾರಿಗಳು ಈ ರಸ್ತೆಯನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಿದ್ದಾರೆ.
ಈ ರಸ್ತೆಯು ಹೆಚ್ಚಿನ ಕಡೆಯಲ್ಲಿ ಡಾಮರು ಕಿತ್ತು ಬಂದಿದ್ದು, ಕಲ್ಲುಗಳಿಂದ ಕೂಡಿದ್ದು ಶಾಲಾ ವಾಹನಗಳು ಸಂಚರಿಸುವಲ್ಲಿ ಹಿಂದೇಟು ಹಾಕುವ ದುಸ್ಥಿತಿ ನಿರ್ಮಾಣಗೊಂಡಿದೆ. ಈ ರಸ್ತೆಯಲ್ಲಿ ಅಧಿಕ ಭಾರದ ವಾಹನಗಳು ಇದುವೇ ಸಂಪರ್ಕ ರಸ್ತೆಯನ್ನು ಬಳಸುವುದರಿಂದ ಹೆಚ್ಚು ಹಾನಿಗೀಡಾಗಿದೆ. ಇದನ್ನು ದುರಸ್ತಿ ಪಡಿಸಿ ಸುಕ್ಷಿತ ಸಂಚಾರ ಕಲ್ಪಿಸುವಲ್ಲಿ ಯಾವುದೇ ಜನಪ್ರತಿನಿಧಿಗಳು, ಸ್ಥಳೀಯ ಕುರ್ಕಾಲು ಗ್ರಾಮ ಪಂಚಾಯತ್ ಗಮನಹರಿಸುತ್ತಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಈ ರಸ್ತೆಯಲ್ಲಿ ಶಾಲಾ ವಾಹನಗಳು, ರಿಕ್ಷಾ ಸಹಿತ ನೂರಾರು ವಾಹನಗಳು ಸಂಚರಿಸುತ್ತಿದ್ದು, ಬಂಟಕಲ್ಲು ಇಂಜಿನಿಯರಿಂಗ್ ಕಾಲೇಜು ಬಳಿ ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿಗೆ ಬಂದು ಸಂಪರ್ಕಿಸುತ್ತದೆ. ಕುಂಜಾರುಗಿರಿ, ಪಾಜಕ, ಆನಂದತೀರ್ಥ ವಿದ್ಯಾಲಯ, ಬಂಟಕಲ್ಲು ಇಂಜಿನಿಯರಿಂಗ್ ಕಾಲೇಜು, ಸ್ಥಳೀಯವಾಗಿ ಆಶ್ರಮವೊಂದಕ್ಕೆ ಪ್ರಮುಖ ರಸ್ತೆಯಾಗಿ ಹೆಚ್ಚು ಪ್ರಯೋಜಕಾರಿಯಾಗಿ ಬಳಕೆಯಾಗುತ್ತಿದೆ. ಈ ಸಂಪರ್ಕ ರಸ್ತೆಯ ಎರಡು ಕಡೆಗಳಲ್ಲಿ ಕಾಂಕ್ರಿಟೀಕರಣಗೊಂಡಿದ್ದು, ಉಳಿದ ಸುಮಾರು ಎರಡು ಕಿ.ಮೀ ರಸ್ತೆಯ ಭಾಗವು ದುರಸ್ತಿಗೊಳ್ಳಬೇಕು. ಆ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಿದೆ. ಇದರೊಂದಿಗೆ ರಸ್ತೆಯ ವಿಸ್ತರೀಕರಣದ ಜೊತೆಗೆ ದುರಸ್ತಿಗೆ ಸ್ಥಳೀಯರು ಆಗ್ರಹಿಸುತ್ತಿದ್ದಾರೆ.
ಸ್ಥಳೀಯವಾಗಿ ಬಾಡಿಗೆ ಮಾಡಲೂ ಕಷ್ಟವಾಗುತ್ತಿದೆ ಎಂದು ತಿಳಿಸುವ ರಿಕ್ಷಾ ಚಾಲಕ ನವೀನ್ ಸನಿಲ್ ಅವರು ದುಡಿದ ಬಾಡಿಗೆ ಹಣದಲ್ಲಿ ರಿಪೇರಿಗೆ ಹೆಚ್ಚು ವ್ಯಯಿಸುವಂತಾಗುತ್ತಿದೆ. ರಸ್ತೆ ಹಾಳಾಗಿ ವರ್ಷ ಕಳೆದರೂ ಯಾರೂ ಈ ಬಗ್ಗೆ ಗಮನ ಹರಿಸುತ್ತಿಲ್ಲ. ಇಲ್ಲಿನ ಆಶ್ರಮದ ಮಕ್ಕಳನ್ನು ಶಾಲಾ ವಾಹನದವರು ಕೆಳಭಾಗಕ್ಕೆ ಬಾರದೇ ಮೇಲಿನಲ್ಲೇ ಬಿಟ್ಟು ತೆರಳುವ ಪರಿಸ್ಥಿತಿ ಬಂದೊದಗಿದೆ. ಮುಖ್ಯ ರಸ್ತೆಯನ್ನು ಕೂಡಲೇ ರಿಪೇರಿ ಮಾಡಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಲಿ ಎನ್ನುತ್ತಾರೆ.
ಕರ್ತವ್ಯದಲ್ಲಿ ಇರಲಿಲ್ಲ
ಅನುದಾನ ಹಿಂತಿರುಸಿಗಿದ್ದ ಬಗ್ಗೆ ಸ್ಥಳೀಯ ವಾರ್ಡು ಸಭೆಯಲ್ಲಿ ವಿಷಯ ಗಮನಕ್ಕೆ ಬಂದಿತ್ತು. ಸರಿಯಾದ ಮಾಹಿತಿಯೂ ಇರಲಿಲ್ಲ. ಆ ಸಂದರ್ಭದಲ್ಲಿ ಅಧಿಕಾರಿಯಾಗಿ ಕರ್ತವ್ಯದಲ್ಲಿ ಇರಲಿಲ್ಲ. ವಾರಾಹಿ ಯೋಜನೆಯಡಿಯೂ ರಸ್ತೆಯ ದುರಸ್ತಿ ಕಾರ್ಯ ಈ ಮೊದಲು ನಡೆದಿತ್ತು. ಇದೀಗ 14ನೇ ಹಣಕಾಸು ಯೋಜನೆಯಡಿ 1 ಲಕ್ಷ 91 ಸಾವಿರ ರೂ. ಅನುದಾನವನ್ನು ಕ್ರಿಯಾಯೋಜನೆಯಡಿ ಇರಿಸಲಾಗಿದೆ
– ಚಂದ್ರಕಲಾ, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಕುರ್ಕಾಲು ಗ್ರಾ.ಪಂ.