ರಾಯಚೂರು: ಕವಿತಾಳ ಪಪಂ ಮುಖ್ಯಾಧಿಕಾರಿ ತಿಮ್ಮಪ್ಪ ಜಗ್ಲಿ, ಜೆಇ ಮಲ್ಲಣ್ಣ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆಂದು ಆರೋಪಿಸಿ ಹಾಗೂ ಕೂಡಲೇ ಸೇವೆಯಿಂದ ವಜಾಗೊಳಿಸಿ ಬೇರೆ ಅಧಿಕಾರಿಗಳನ್ನು ನೇಮಿಸುವಂತೆ ಆಗ್ರಹಿಸಿ ಪಪಂ ಸದಸ್ಯರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಕವಿತಾಳ ಪಟ್ಟಣ 16 ವಾರ್ಡ್ ಒಳಗೊಂಡಿದ್ದು, ಪ್ರತಿ ವಾರ್ಡ್‌ನಲ್ಲಿ ಕುಡಿವ ನೀರು, ವಿದ್ಯುತ್ ದೀಪ, ಚರಂಡಿ ಸ್ವಚ್ಛತೆ, ಶೌಚಗೃಹ ವ್ಯವಸ್ಥೆ, ರಸ್ತೆ ಸೇರಿದಂತೆ ಅನೇಕ ಸಮಸ್ಯೆಗಳಿವೆ. ಮುಖ್ಯ ರಸ್ತೆಯಲ್ಲೇ ವಿದ್ಯುತ್ ದೀಪಗಳಿಲ್ಲ. ಪಟ್ಟಣದಲ್ಲಿ ನಡೆಯುವ ಸಂತೆಗೆ 25ಕ್ಕೂ ಹೆಚ್ಚು ಹಳ್ಳಿ ಜನ ಬರುತ್ತಾರೆ. ಹಳೇ ಬಸ್ ನಿಲ್ದಾಣ ಬಳಿ ಶೌಚಾಲಯ ಕೂಡ ಇಲ್ಲ. ರಸ್ತೆ ಆಗಲೀಕರಣ ವೇಳೆ ಶೌಚಾಲಯ ತೆರವು ಮಾಡಿದ್ದು, ಜನ ಬಯಲಲ್ಲೇ ಮೂತ್ರ ಮಾಡುವಂತಾಗಿದೆ ಎಂದು ದೂರಿದರು.
ಮುಖ್ಯಾಧಿಕಾರಿ ಸರಿಯಾಗಿ ಕಚೇರಿಗೆ ಬರುವುದಿಲ್ಲ. ಅಪರೂಪಕ್ಕೆ ಬಂದಾಗ ಮೂಲ ಸೌಕರ್ಯ ಒದಗಿಸಲು ಅನುದಾನ ಇಲ್ಲ. ನಿಮ್ಮಗಿನ್ನೂ ಅಧಿಕಾರ ಸಿಕ್ಕಿಲ್ಲ ಎಂದು ನೆಪ ಹೇಳುತ್ತಿದ್ದಾರೆ. ಈ ಇಬ್ಬರು ಅಧಿಕಾರಿಗಳು ಸದಸ್ಯರ ಕರೆ ಸ್ವೀಕರಿಸುವುದಿಲ್ಲ. ವಾಸಸ್ಥಳ, ಮರಣ ಪ್ರಮಾಣಪತ್ರ ಬೇಕಾದರೂ ತಿಂಗಳುಗಟ್ಟಲೇ ಅಲೆಯಬೇಕಿದೆ ಎಂದರು.
ಈ ಹಿಂದೆ ಇಬ್ಬರು ಶೌಚಾಲಯ ನಿರ್ಮಾಣದಲ್ಲಿ ಲಕ್ಷಾಂತರ ಹಣ ಲೂಟಿ ಮಾಡಿದ್ದರು ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶಾಧಿಕಾರಿ ವರದಿಯಲ್ಲಿ ಬಹಿರಂಗವಾಗಿದೆ. ಆದರೂ ಕ್ರಮ ಜರುಗಿಸಿಲ್ಲ. ಅವರನ್ನೇ ಅಧಿಕಾರದಲ್ಲಿ ಮುಂದುವರಿಸಿದ್ದು, ಮತ್ತಷ್ಟು ಅಕ್ರಮಕ್ಕೆ ಅನುವು ಮಾಡಿಕೊಟ್ಟಂತಾಗಿದೆ ಎಂದರು. ಇವರನ್ನು ಕೂಡಲೇ ಸೇವೆಯಿಂದ ವಜಾಗೊಳಿಸಬೇಕು. 15 ದಿನದೊಳಗೆ ಬೇರೆ ಅಧಿಕಾರಿಗಳನ್ನು ನೇಮಿಸಬೇಕು. ನಿರ್ಲಕ್ಷ್ಯ ವಹಿಸಿದರೆ ಪಂಚಾಯತಿ ಎದುರು ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಈ ವೇಳೆ ಪಪಂ ಸದಸ್ಯರಾದ ರಮೇಶ ನಗನೂರು, ಮಲ್ಲಿಕಾರ್ಜುನ, ಅಮರೇಶ ಕುರಿ, ರಾಘವೇಂದ್ರ, ಲಿಂಗರಾಜ ಕಂದಗಲ್, ಹುಲಿಗೆಪ್ಪ, ತಿಪ್ಪಯ್ಯ ಸ್ವಾಮಿ, ಸುರೇಶ ರೆಡ್ಡಿ ವಕೀಲ, ಶಿವಕುಮಾರ ಮ್ಯಾಗಳಮನಿ ಇತರರಿದ್ದರು.