ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ಹಲ್ಲೆಮಾಡಿ ಕೊಲೆಗೈದ ಆರೋಪಿಗಳನ್ನು ತಕ್ಷಣ ಬಂಧಿಸಬೇಕು. ಅಲ್ಲಿಯವರೆಗೆ ಮರಣೋತ್ತರ ಪರೀಕ್ಷೆಗೆ ಅವಕಾಶ ಕೊಡುವುದಿಲ್ಲವೆಂದು ಒತ್ತಾಯಿಸಿ ಮೃತನ ಸಂಬಂಧಿಕರು, ಸ್ನೇಹಿತರು ಸೇರಿದಂತೆ ಮೊದಲಾದವರು ಇಲ್ಲಿನ ಕಿಮ್ಸ್‌ನ ಶವಾಗಾರ ಎದುರು ಬುಧವಾರವೂ ಪ್ರತಿಭಟನೆ ಮುಂದುವರಿಸಿದರು.
ಇಲ್ಲಿನ ಬಂಕಾಪುರ ಚೌಕ್ ವಾಳ್ವೆಕರ ಪ್ಲಾಟ್ ನಿವಾಸಿ ಪರಶುರಾಮ ದೊಡ್ಡಮನಿ (40) ಎಂಬುವವರ ಮೇಲೆ ವಾಳ್ವೆàಕರ ಪ್ಲಾಟ್‌ನ ಮದನ ಬುಗಡಿ, ಕಿರಣ, ದೊಡ್ಡೇಶ ದೊಡಮನಿ ಹಾಗೂ ಇನ್ನಿಬ್ಬರು ಸೇರಿ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆಂದು ಆರೋಪಿಸಿ ಮೃತನ ಕುಟುಂಬದವರು ಕೇಶ್ವಾಪುರ ಠಾಣೆಯಲ್ಲಿ ದೂರು ಕೊಟ್ಟಿದ್ದರು.
ಅಲ್ಲದೆ ಮಂಗಳವಾರ ರಾತ್ರಿ ಕಿಮ್ಸ್ ಆಸ್ಪತ್ರೆ ಎದುರು ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡಿದ್ದರು. ಪೊಲೀಸರು ಅವರನ್ನು ತಕ್ಷಣ ಬಂಧಿಸುವುದಾಗಿ ಭರವಸೆ ನೀಡಿದ ನಂತರ ಹಿಂಪಡೆದಿದ್ದರು. ಆದರೆ ಬುಧವಾರವೂ ಪೊಲೀಸರು ಆರೋಪಿಗಳನ್ನು ಬಂಧಿಸದಿದ್ದಾಗ ಮೃತರ ಕುಟುಂಬದವರು ಆಕ್ರೋಶಗೊಂಡು, ಕೊಲೆಗೈದ ಆರೋಪಿಗಳನ್ನು ಬಂಧಿಸುವವರೆಗೂ ಶವ ಪರೀಕ್ಷೆ ಮಾಡಲು ಕೊಡುವುದಿಲ್ಲ.
ಪೊಲೀಸ್ ಆಯುಕ್ತರೆ ಸ್ಥಳಕ್ಕೆ ಬಂದು ಭರವಸೆ ನೀಡಬೇಕೆಂದು ಪಟ್ಟು ಹಿಡಿದರು. ಎಸಿಪಿ, ಕೇಶ್ವಾಪುರ ಠಾಣಾಧಿಕಾರಿ ಅವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ಹುಡುಕಾಟ ನಡೆಸಲಾಗಿದೆ. ಶೀಘ್ರವೇ ಅವರನ್ನು ಬಂಧಿಸಲಾಗುವುದು ಎಂದು ಭರವಸೆ ನೀಡಿದ ನಂತರ, ಗುರುವಾರದೊಳಗೆ ಅವರನ್ನು ಬಂಧಿಸಬೇಕೆಂದು ಗಡುವು ನೀಡಿ ಪ್ರತಿಭಟನೆ ಹಿಂಪಡೆದುಕೊಂಡರು.
ವ್ಯಕ್ತಿಯ ಚಿನ್ನದ ಸರ ದೋಚಿದ ಖದೀಮರು: ಇಲ್ಲಿನ ಸ್ಟೇಶನ್ ರಸ್ತೆಯ ಸಾಯಿ μಶ್‌ಲ್ಯಾಂಡ್ ಬಳಿ ವ್ಯಕ್ತಿಯೊಬ್ಬರಿಗೆ ಖದೀಮರು ಬೇಕಂತಲೇ ಡಿಕ್ಕಿ ಹೊಡೆದು ಕ್ಷಮೆ ಕೇಳಿದಂತೆ ಮಾಡಿ ಅಂದಾಜು 32 ಗ್ರಾಂ ತೂಕವುಳ್ಳ ಚಿನ್ನದ ಸರ ಕಿತ್ತುಕೊಂಡು ಬೈಕ್‌ನಲ್ಲಿ ಹೋಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬಾಗಲಕೋಟೆ ಜಿಲ್ಲೆ ಬಾದಾಮಿಯ ಚಾಲುಕ್ಯ ನಗರದ ಬಾಳಪ್ಪ ಬಿ. ಹೊಸಗೌಡರ ಎಂಬುವವರೆ ಚಿನ್ನದ ಸರ ಕಳೆದುಕೊಂಡಿದ್ದಾರೆ. ಇವರು ಜ.25ರಂದು ಊಟ ಮುಗಿಸಿಕೊಂಡು ಹೊಟೇಲ್ ಬಳಿ ನಿಂತಿದ್ದಾಗ, ಅಪರಿಚಿತರಿಬ್ಬರಲ್ಲಿ ಓರ್ವನು ಡಿಕ್ಕಿ ಹೊಡೆದಿದ್ದಾನೆ. ನಂತರ ಕ್ಷಮೆ ಕೇಳುವ ನೆಪದಲ್ಲಿ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.