ಬೆಂಗಳೂರು: ರಾಜ್ಯದಲ್ಲಿ ರಬ್ಬರ್ ಬೆಳೆಯ ನಿರ್ವಹಣೆ ಕಷ್ಟಕರವಾಗಿರುವುದರಿಂದ ಸರಕಾರ ಕೂಡಲೇ ರಬ್ಬರ್ ಬೆಳೆಗಾರರ ರಕ್ಷಣೆಗೆ ಮುಂದಾಗಬೇಕು ಎಂದು ವಿಧಾನಪರಿಷತ್ತಿನಲ್ಲಿ ಕಾಂಗ್ರೆಸ್‌ನ ಮಂಜುನಾಥ್ ಭಂಡಾರಿ ಆಗ್ರಹಿಸಿದ್ದಾರೆ.
ಕಲಾಪದಲ್ಲಿ ಸೋಮವಾರ ಶೂನ್ಯ ವೇಳೆಯಲ್ಲಿ “ರಬ್ಬರ್ ಬೆಳೆಗೆ ನಿರುತ್ತೇಜನದ ಕೊಡಲಿ ಏಟು; ಕೇರಳ ಮಾದರಿ ಪರಿಹಾರಕ್ಕೆ ಆಗ್ರಹ’ ಎಂಬ ಶೀರ್ಷಿಕೆಯಡಿ ಫೆ. 15ರಂದು “ಉದಯವಾಣಿ’ಯಲ್ಲಿ ಪ್ರಕಟವಾದ ಸುದ್ದಿಯನ್ನು ಪ್ರಸ್ತಾವಿಸಿ ಸರಕಾರದ ಗಮನ ಸೆಳೆದರು.
ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ರೈತರು ಅಡಿಕೆಯ ಜತೆಗೆ ಮುಖ್ಯ ವಾಣಿಜ್ಯ ಬೆಳೆಯಾಗಿ ರಬ್ಬರನ್ನು ಆರಂಭಿಸಿದ್ದರೂ ಕಳೆದ 5 ವರ್ಷಗಳಿಂದ ಉತ್ತಮ ಧಾರಣೆ ಕಾಣದಿರುವ ಹಿನ್ನೆಲೆಯಲ್ಲಿ ರಬ್ಬರ್ ಮರಗಳ ಬುಡಕ್ಕೆ ಕೊಡಲಿ ಏಟು ಹಾಕಬೇಕಾದ ಅನಿವಾರ್ಯ ಪರಿಸ್ಥಿತಿ ಒದಗಿದೆ.
ರಾಜ್ಯದಲ್ಲಿ 60 ಸಾವಿರ ಹೆಕ್ಟೇರ್‌ಗೂ ಮೇಲ್ಪಟ್ಟು ಪ್ರದೇಶಲ್ಲಿ ರಬ್ಬರ್ ಬೆಳೆಯಲಾಗುತ್ತಿದೆ. ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಮತ್ತು ಕೊಡಗು ಜಿಲ್ಲೆಯ 5 ಲಕ್ಷಕ್ಕೂ ಹೆಚ್ಚು ಬೆಳೆಗಾರರು ಇದ್ದಾರೆ. 12 ವರ್ಷಗಳ ಹಿಂದೆ ಕೆ.ಜಿ.ಗೆ 250 ರೂ ಇದ್ದ ಧಾರಣೆ ಇಂದು 130-150 ರೂ. ಆಸುಪಾಸಿನಲ್ಲಿದೆ.
ಕೇರಳದ ರಬ್ಬರ್ ಬೆಳೆಗಾರರ ರಕ್ಷಣೆಗೆ ರಬ್ಬರು ಉತ್ಪಾದನ ಪ್ರೋತ್ಸಾಹಧನ ಯೋಜನೆ ಜಾರಿಗೊಳಿಸಲಾಗಿದೆ. ಆದರೆ ಕರ್ನಾಟಕದಲ್ಲಿ ರೈತರಿಗೆ ಸರಕಾರದ ಸರಿಯಾದ ಪ್ರೋತ್ಸಾಹ ಸಿಗದ ಕಾರಣ ಬೆಳೆಗಾರರು ಅತಂತ್ರರಾಗಿದ್ದಾರೆ. ಕರ್ನಾಟಕದಲ್ಲಿ ರಬ್ಬರ್ ಬೆಳೆಯ ನಿರ್ವಹಣೆ ಕಷ್ಟಕರವಾಗಿರುವುದರಿಂದ ಕೂಡಲೇ ಸರಕಾರ ರಬ್ಬರ್ ಬೆಳೆಗಾರರ ರಕ್ಷಣೆಗೆ ಮುಂದಾಗಬೇಕು ಹಾಗೂ ಕೇರಳ ರಾಜ್ಯದಂತೆ ಸೂಕ್ತ ಪರಿಹಾರವನ್ನು ಘೋಷಿಸಬೇಕು ಎಂದು ಮಂಜುನಾಥ್ ಭಂಡಾರಿ ಒತ್ತಾಯಿಸಿದರು.
ಇದಕ್ಕೆ ಸರಕಾರದ ಪರವಾಗಿ ಉತ್ತರಿಸಿದ ಸಚಿವ ಅಶ್ವತ್ಥನಾರಾಯಣ, ರಬ್ಬರ್ ಬೆಳೆಗಾರರ ರಕ್ಷಣೆಗೆ ಸರಕಾರ ಅಗತ್ಯ ಕ್ರಮಗಳನ್ನು ಸರಕಾರ ಕೈಗೊಳ್ಳಲಿದೆ. ಆದರೆ, ವಿವರವಾದ ಉತ್ತರವನ್ನು ಸಂಬಂಧಪಟ್ಟ ಸಚಿವರಿಂದ ಕೊಡಿಸುವುದಾಗಿ ಹೇಳಿದರು.